ವರದಿ-ಚಂದ್ರಮೋಹನ್
ಕುಶಾಲನಗರ, ಜ 14: ಕುಶಾಲನಗರ ಕಾರು ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ 1 ಕೋಟಿಗೂ ಮಿಕ್ಕಿ ನಡೆದ ದುರುಪಯೋಗ ಪ್ರಕರಣ ಇನ್ನೂ ಇತ್ಯರ್ಥಗೊಳ್ಳದೆ ನೂರಾರು ಸಂಖ್ಯೆಯ ಗ್ರಾಹಕರು ತಮ್ಮ ಹಣಕ್ಕಾಗಿ ದಿನನಿತ್ಯ ಪರದಾಡುತ್ತಿರುವ ದೃಶ್ಯ ಮುಂದುವರೆದಿದೆ. ಎರಡು ವರ್ಷಗಳ ಹಿಂದೆ ಪ್ರಕರಣ ನಡೆದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು ಇನ್ನೊಂದೆಡೆ ಸಹಕಾರ ಸಂಘಗಳ ಕಾಯ್ದೆ ಕಲಂ 63 (4) ಮತ್ತು (5) ರಂತೆ ಪ್ರತಿ ಸದಸ್ಯರ ಮೂಲಕ ಸಂಘದಲ್ಲಿ ಸಾಲ ಹೊರಬಾಕಿ ಇರುವ ಬಗ್ಗೆ ದೃಢೀಕರಿಸಿಕೊಂಡ ಅಧಿಕಾರಿಗಳು ಸಂಘದಲ್ಲಿ ನಡೆದ ಅವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ನಡೆದಿದ್ದರೂ ಸಂಘದ ಸದಸ್ಯರು ಮತ್ತು ಹಣ ಹೂಡಿಕೆದಾರರಿಗೆ ಇನ್ನೂ ನ್ಯಾಯ ದೊರಕಿಲ್ಲ.
ಸಂಘದ ಅಂದಿನ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸಿಬ್ಬಂದಿ ಸೇರಿ ಅಂದಾಜು ರೂ. 1 ಕೋಟಿ 16 ಲಕ್ಷ ಮೊತ್ತದ ಹಣವನ್ನು ಅವ್ಯವಹಾರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿತ್ತು. ಸದಸ್ಯರ ಹೆಸರಿನಲ್ಲಿ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಸೇರಿ ಸುಮಾರು 30 ಕ್ಕೂ ಅಧಿಕ ಪಿಗ್ಮಿ ಖಾತೆ ಹೊಂದಿದ ಠೇವಣಿದಾರರ ಹೆಸರಿನಲ್ಲಿ ತಲಾ 3 ಲಕ್ಷ ರೂ.ಗಳಂತೆ ನಗದೀಕರಿಸಿರುವುದು ಕೂಡ ದೃಢಪಟ್ಟಿತ್ತು. ನಿತ್ಯನಿಧಿ ಸಾಮಾನ್ಯ ಸಾಲ ರೂ. 6 ಲಕ್ಷ, ಠೇವಣಿ ಸಾಲ ರೂ. 1 ಲಕ್ಷದ 98 ಸಾವಿರದ 550 ಹಾಗೂ ಕೆಡಿಸಿಸಿ ಬ್ಯಾಂಕಿನಿಂದ ಚಾಲ್ತಿ ಖಾತೆಯಿಂದ ರೂ. 5 ಲಕ್ಷದ 35 ಸಾವಿರ, ಸಂಚಯ ಠೇವಣಿಯಲ್ಲಿ ರೂ. 10146 ಬ್ಯಾಂಕಿನಿಂದ ಡ್ರಾ ಮಾಡಿ ಸಂಘಕ್ಕೆ ಜಮಾ ಮಾಡದೆ ದುರುಪಯೋಗ ಆಗಿರುವುದು ತನಿಖೆಯಿಂದ ಖಚಿತಗೊಂಡಿತ್ತು.
ತನ್ನ 26 ಸಾವಿರ ಮೊತ್ತದ ಪಿಗ್ಮಿ ಹಣ ಇನ್ನೂ ತನಗೆ ನೀಡಲು ಸತಾಯಿಸುತ್ತಿದ್ದಾರೆ ಎನ್ನುತ್ತಾರೆ ಕುಶಾಲನಗರದ ಬಾರ್ ಒಂದರಲ್ಲಿ ಸಪ್ಲೆಯರ್ ಆಗಿ ಕೆಲಸ ಮಾಡುತ್ತಿರುವ ಲಕ್ಷ್ಮಣ. ತನ್ನ ಜೊತೆಗೆ ದಿನನಿತ್ಯ ದುಡಿಯುತ್ತಿದ್ದ ಮುತ್ತುರಾಜ್ ಎಂಬಾತನಿಗೂ 20 ಸಾವಿರ ನೀಡಬೇಕು. ಈ ಬಗ್ಗೆ ಆಡಳಿತ ಮಂಡಳಿಯಲ್ಲಿ ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಜಾನ್ ಎಂಬವರು ತಾನು ಹೂಡಿದ ಸಾವಿರಾರು ರೂಗಳನ್ನು ಹಿಂತಿರುಗಿಸಲು ಸತಾಯಿಸುತ್ತಿದ್ದಾರೆ ಎಂದು ‘ಶಕ್ತಿ’ಗೆ ತಮ್ಮ ನೋವನ್ನು ತೋಡಿಕೊಂಡಿದ್ದು ಈ ಬಗ್ಗೆ ತಾನು ಜಿಲ್ಲಾಧಿಕಾರಿಗಳ ಗಮನಕ್ಕೂ ತರುವುದಾಗಿ ತಿಳಿಸಿದ್ದಾರೆ.
ಸಂಘದಲ್ಲಿ ಸುಮಾರು 200 ಕ್ಕೂ ಅಧಿಕ ಸದಸ್ಯರು ಇದ್ದು ಅಕಾಲಿಕ ಮರಣ ಪಟ್ಟ ಸದಸ್ಯರಿಗೆ ನೀಡಬೇಕಾದ ಮರಣ ನಿಧಿಗೂ ಇಲ್ಲಿ ಕುತ್ತು ಬಂದಿದೆ. ಈ ಹಣವನ್ನು ಅಂದಿನ ಅಧ್ಯಕ್ಷರು, ಕಾರ್ಯದರ್ಶಿಗಳು ಲಪಟಾಯಿಸಿದ್ದು ಮಾನವೀಯ ನೆಲೆಯಲ್ಲಿ ನೀಡಬೇಕಾದ ಹಣಕ್ಕೂ ಈ ಸಂಘದಲ್ಲಿ ಕೊರತೆ ಕಂಡುಬಂದಿದೆ.
ಈ ಬಗ್ಗೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಅಶೋಕ ಅವರನ್ನು ಸಂಪರ್ಕಿಸಿದರೂ ಯಾವುದೇ ರೀತಿಯ ಸಮರ್ಪಕ ಉತ್ತರ ನೀಡದೆ ನುಣಚಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ರವಿಕುಮಾರ್ ಅವರನ್ನು ಶಕ್ತಿ ಸಂಪರ್ಕಿಸಿದಾಗ ಪ್ರಕರಣದ ಬಗ್ಗೆ ತನಿಖೆ ನಡೆದಿದೆ. 1.13 ಕೋಟಿ ರೂಗಳ ದುರುಪಯೋಗ ನಡೆದಿರುವುದು ಖಚಿತಗೊಂಡಿದೆ. ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಇವೆಲ್ಲದರ ನಡುವೆ ಸಂಘದ ನೂರಾರು ಸದಸ್ಯರು ತಮ್ಮ ಹಣಕ್ಕಾಗಿ ದಿನನಿತ್ಯ ಪರದಾಡುತ್ತಿದ್ದರೆ ಈ ಹಿಂದೆ ಸಂಘದ ಅಧ್ಯಕ್ಷರಾಗಿದ್ದ ಹೆಚ್.ಎನ್. ರಾಮಚಂದ್ರ ಮತ್ತು ಉಪಾಧ್ಯಕ್ಷರಾಗಿದ್ದ ಕೆ.ಎನ್.ಅಶೋಕ ಎಂಬವರುಗಳು ಈ ಬ್ಯಾಂಕಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕುಶಾಲನಗರದಲ್ಲಿ ಕೋಟಿಗಟ್ಟಲೆ ಹಣ ವಂಚನೆ ಮಾಡಿರುವ ಕಾರು ಮಾಲೀಕರು ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘದಿಂದ ವಂಚನೆಗೊಳಗಾದ ಗ್ರಾಹಕರಿಗೆ ತಕ್ಷಣ ನ್ಯಾಯ ಒದಗಿಸುವಲ್ಲಿ ಕಾರ್ಯೋನ್ಮುಖವಾಗಬೇಕಿದೆ.