ಕೂಡಿಗೆ, ಜ. 13: ಕೂಡಿಗೆ ಗ್ರಾಮ ಪಂಚಾಯ್ತಿ ಮಾಸಿಕ ಸಭೆಯು ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಪಂಚಾಯ್ತಿ ಸದಸ್ಯರ ಗಮನಕ್ಕೆ ಬಾರದೆ ಸೋಲಾರ್ ಖರೀದಿಸಿ ಅಳವಡಿಸಲಾಗಿದೆ ಎಂಬ ವಿಷಯ ಪ್ರಸ್ತಾಪವಾಗಿ ಸಭೆಯಲ್ಲಿ ಗೊಂದಲವೇರ್ಪಟ್ಟಿತು.

ಸರ್ಕಾರದಿಂದ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಹಲವು ಕಾಮಗಾರಿಗಳಿಗೆ ಬಿಡುಗಡೆಯಾದ ರೂ.97 ಲಕ್ಷ ಹಣದಲ್ಲಿ ಕಾಮಗಾರಿ ನಡೆದಿದೆ. ಬಾಕಿ ಉಳಿದಿದ್ದ ಸುಮಾರು ರೂ.3 ಲಕ್ಷ ಹಣದಲ್ಲಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅವರು ಸೋಲಾರ್ ಖರೀದಿ ಮಾಡುವ ವಿಚಾರವನ್ನಾಗಲೀ, ಅಳವಡಿಸುವ ವಿಚಾರವನ್ನಾಗಲೀ ಸದಸ್ಯರಿಗೆ ತಿಳಿಸಿಲ್ಲವೆಂದು ಸದಸ್ಯರಾದ ಕೆ.ವೈ.ರವಿ, ಹೆಚ್.ಎಸ್.ರವಿ, ಮೋಹಿನಿ ಸೇರಿದಂತೆ ಇತರ ಸದಸ್ಯರು ಆರೋಪಿಸಿದರು.

ಕೂಡು ರಸ್ತೆಗಳ ಕಾಮಗಾರಿಗಳ ಬಗ್ಗೆ ಆಯಾ ಭಾಗದ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸಭೆಗೆ ತಿಳಿಸಿದರು. ಬೇಸಿಗೆ ಸಮೀಪಿಸುತಿದ್ದು, ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು. ಸಭೆಗೆ ಬಂದ ಅರ್ಜಿಗಳ ಬಗ್ಗೆ ಸವಿಸ್ತಾರವಾದ ಚರ್ಚೆಗಳು ನಡೆದವು.

ಅಧ್ಯಕ್ಷೆ ಪ್ರೇಮಲೀಲ ಮಾತನಾಡಿ, ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಬಿಡುಗಡೆಯಾಗಿದ್ದ ಅನುದಾನದಲ್ಲಿ ಬಾಕಿ ಉಳಿದಿದ್ದ ಸುಮಾರು ರೂ. 3 ಲಕ್ಷ ಹಣದಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಅವರ ಕ್ರಿಯಾಯೋಜನೆ ಯಡಿಯಲ್ಲಿ ಸೋಲಾರ್‍ನ್ನು ಖರೀದಿಸಿ ಈಗಾಗಲೇ ಅಳವಡಿಸಲಾಗಿದೆ. ಯಾವುದೇ ರೀತಿಯಲ್ಲಿ ಹಣ ದುರುಪಯೋಗವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸೋಲಾರ್ ಖರೀದಿಸಿರುವ ಮತ್ತು ಕಾಮಗಾರಿಗಳನ್ನು ನಡೆಸಿರುವ ದಾಖಲಾತಿಗಳಿವೆ ಎಂದು ಸಭೆಗೆ ತಿಳಿಸಿದರು. ಸದಸ್ಯರ ಸಹಕಾರದೊಂದಿಗೆ ಇನ್ನುಳಿದ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳುವುದಾಗಿ ಹೇಳಿದರು.

ಅಭಿವೃದ್ಧಿ ಅಧಿಕಾರಿ ಅಶ್ವಿನಿ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿ ಅನುದಾನದಲ್ಲಿ ಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸುವ ಬಗ್ಗೆ ಸಭೆಗೆ ತಿಳಿಸಿದರು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಇನ್ನುಳಿದಿರುವ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಿಯಾಯೋಜನೆಗಳು ತಯಾರಾಗಿದ್ದು, ಅದರನ್ವಯ ಕಾಮಗಾರಿಯನ್ನು ನಡೆಸಲಾಗುವುದು. ನಿವೇಶನ ರಹಿತರಿಗೆ ನಿವೇಶನ ಹಂಚುವ ಬಗ್ಗೆ ಅಧಿಕಾರಿ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಹೊಸದಾಗಿ ಮನೆ ನಿರ್ಮಿಸುವವರು ಗ್ರಾಮ ಪಂಚಾಯ್ತಿಯಿಂದ ನಿಯಮಾನುಸಾರ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಹೇಳಿದರು.

ಸಭೆಯಲ್ಲಿ ಸದಸ್ಯರಾದ ಕೃಷ್ಣ, ಕೆ.ಬಿ.ರಾಮಚಂದ್ರ, ರತ್ನಮ್ಮ, ಪುಷ್ಪ, ಜಯಶ್ರೀ, ಚಂದ್ರಿಕಾ, ಕಲ್ಪನ, ಮಂಜಯ್ಯ, ಧನ್ಯ, ಕಾರ್ಯದರ್ಶಿ ಕಾವ್ಯ ಇದ್ದರು.