ವೀರಾಜಪೇಟೆ, ಜ. 13: ವೀರಾಜಪೇಟೆಯಿಂದ ಆರು ಕಿ.ಮೀ ದೂರದಲ್ಲಿರುವ ಬಾಳುಗೋಡು ಪೈಸಾರಿಯಲ್ಲಿ ಸುಮಾರು 55 ಕುಟುಂಬಗಳು ಗುಡಿಸಲು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ರಾಜ್ಯದ ವಿವಿಧ ಸಂಘಟನೆಗಳ ನಾಯಕರು ಭೇಟಿ ನೀಡಿ ಕೆಲವು ಗಂಟೆಗಳ ಕಾಲ ಪ್ರತಿಭಟನೆಯಲ್ಲಿ ಭಾಗಿಯಾಗಿ ನಿರಾಶ್ರಿತರಿಗೆ ಸರಕಾರ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ಬಾಳುಗೋಡು ಗ್ರಾಮದ ಪೈಸಾರಿಯಲ್ಲಿ ಕಳೆದ 7ದಿನಗಳಿಂದ ಆರ್ಜಿ, ಪೆರುಂಬಾಡಿ, ವೀರಾಜಪೇಟೆ ಪಟ್ಟಣದ ಸುತ್ತಮುತ್ತಲಿನ ಪ್ರದೇಶದ ವಸತಿ ರಹಿತರು, ನಿರ್ಗತಿಕರು ಸೇರಿದಂತೆ ಒಟ್ಟು 55 ಕುಟುಂಬಗಳು ಪ್ರತಿಭಟನೆ ನಡೆಸುತಿದ್ದು ಸರಕಾರದ ಅಂತಿಮ ನಿಲುವಿಗಾಗಿ ಕಾಯುತ್ತಿದ್ದಾರೆ. ಜಾಗದ ಅಳತೆ ಮಾಡಿ ಹಕ್ಕುಪತ್ರ ನೀಡದ ಹೊರತು ಕುಟುಂಬಗಳು ಜಾಗ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ.
ರಾಜ್ಯ ವಿವಿಧ ಸಂಘಟನೆಗಳ ನಾಯಕರುಗಳೊಂದಿಗೆ ಬಾಳುಗೋಡುವಿಗೆ ಭೇಟಿ ನೀಡಿದ ರಾಜ್ಯ ಭೂಮಿ ವಸತಿ ಹಕ್ಕು ಹೋರಾಟ ಸಮಿತಿಯ ಕೊಡಗು ಘಟಕದ ಸಂಚಾಲಕ ಹೇಮಂತ್ ಅವರು ಮಾತನಾಡಿ ವಸತಿ ರಹಿತರು, ನಿರಾಶ್ರಿತರು ಭೂಮಿ ಹಕ್ಕಿಗಾಗಿ ಹೋರಾಡುವುದು ತಪ್ಪಲ್ಲ, ಸರಕಾರ ಹಾಗೂ ಅಧಿಕಾರಿಗಳು ಇವರ ಬೇಡಿಕೆಗಳಿಗೆ ಸ್ಪಂದಿಸಿ ತಕ್ಷಣ ಜಾಗದ ಹಕ್ಕು ಪತ್ರ ನೀಡಿ ಮನೆ ಕಟ್ಟಿಕೊಳ್ಳಲು ಸಹಕರಿಸಬೇಕು ಎಂದರು.
ರಾಜ್ಯ ಬಹುಜನ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಮೊಣ್ಣಪ್ಪ ಪ್ರತಿಭಟನಾಕಾರರ ಬೇಡಿಕೆ ನ್ಯಾಯ ಸಮ್ಮತವಾದದ್ದು. ವಸತಿ ರಹಿತ ಕಾರ್ಮಿಕರು ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯಲ್ಲಿದ್ದು ಸರಕಾರ ವಸತಿ ರಹಿತರನ್ನು ಗುರುತಿಸಿ ನಿವೇಶನವನ್ನು ನೀಡಬೇಕೆಂದು ಒತ್ತಾಯಿಸಿದರು.
ಬಾಳುಗೋಡು ಪ್ರತಿಭಟನಾ ಸ್ಥಳಕ್ಕೆ ಈ ಇಬ್ಬರೊಂದಿಗೆ ರಾಜ್ಯ ಮಡಿಲು ಯೋಜನೆಯ ಆದಿವಾಸಿ ಅಲೇಮಾರಿ ಬುಡಕಟ್ಟು ಮಕ್ಕಳ ಶಿಕ್ಷಣ ಅಭಿವೃದ್ಧಿ ಸಂಘಟನೆಯ ಅರಸು, ಮಡಿಲು ಸಂಸ್ಥೆಯ ಮೈಸೂರು ವಿಭಾಗದ ಸಂಯೋಜಕರಾದ ಮುತ್ತುರಾಜು, ಆದಿವಾಸಿ ಎರವರ ಸಂಘಟನೆಯ ತಾಯಮ್ಮ ಭಾಗವಹಿಸಿದ್ದರು.
ಕೊಡಗು ಜಿಲ್ಲಾ ಹಿಂದುಳಿದ ವರ್ಗಗಳ ಜಾಗೃತಿ ಸಮಿತಿ ಅಧ್ಯಕ್ಷ ಕೆ.ಪಳನಿ ಪ್ರಕಾಶ್, ಎಚ್.ಕೆ.ರಾಜು, ಧರ್ಮ, ಸೌಮ್ಯ, ಶಿಲ್ಪಾ, ಶರತ್, ಅಕ್ಷಯ್, ಶೋಭಾ ಇತರರಿದ್ದರು.