ಶನಿವಾರಸಂತೆ, ಜ. 13: ವಿದ್ಯಾರ್ಥಿಗಳು ಆತ್ಮಗೌರವವನ್ನು ಬಲವಾಗಿ ಮೂಡಿಸಿಕೊಂಡು ಸಮಾಜದಲ್ಲಿ ಎತ್ತರವಾಗಿ ಬೆಳೆಯಬೇಕು ಎಂದು ಕೆನಡಾ ಟೊರೆಂಟೋದ ಚಿಂತಕ ಹಾಗೂ ಪತ್ರಕರ್ತ ಬಿ.ವಿ. ನಾಗರಾಜು ಅಭಿಪ್ರಾಯಪಟ್ಟರು. ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಾಗೂ ಪದವಿ ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಮೊದಲಿಗೆ ಪರಿಸರ ಪ್ರಜ್ಞೆಯನ್ನು ಮೂಡಿಸಬೇಕು. ಇರುವ ಪರಿಸರದ ರಕ್ಷಣೆಗೆ ಗಮನ ಕೊಡದಿರಲು ಕೀಳರಿಮೆಯೆ ಕಾರಣ. ಜಾತಿ- ಮತಗಳ ಸಂಕೋಲೆಯಲ್ಲಿ ಬಂಧಿತರಾಗಿ ಜೀವನ ಕಳೆದು ಹೋಗುತ್ತದೆ. ಕೀಳರಿಮೆ ಭಾವನೆಯನ್ನು ದೂರಮಾಡಿ, ವಿದ್ಯಾರ್ಥಿಗಳಿಗೆ ನಿರೀಕ್ಷೆ ಮೂಡಿಸುವಂತಹ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ಹಾಗೂ ವಕೀಲ ಎಚ್.ಎಸ್. ಚಂದ್ರಮೌಳಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿಗೆ ಪ್ರಾಧಾನ್ಯತೆ ನೀಡಬೇಕು. ವಿದ್ಯೆ ಕಲಿತ ಶಾಲೆಗೆ, ಸಮಾಜಕ್ಕೆ ಕೊಡುಗೆ ಕೊಡಬೇಕೆಂಬ ಭಾವನೆ ಮೂಡಿಸಿಕೊಳ್ಳಬೇಕು. ನಾಗರಿಕ ಸಮಾಜದಲ್ಲಿ ವಿದ್ಯಾರ್ಥಿಗಳು ಉತ್ತಮ ಕೊಡುಗೆಗಳಾಗಬೇಕು. ಪ್ರತಿಭಾ ಪುರಸ್ಕಾರಕ್ಕೆ ವಾರ್ಷಿಕೋತ್ಸವ ಉತ್ತಮ ವೇದಿಕೆಯಾಗಿದೆ ಎಂದರು.

ಗೌರವಾಧ್ಯಕ್ಷ ಎಸ್.ಎಸ್. ನಾಗರಾಜ್ ಪ್ರಾಸ್ತಾವಿಕ ನುಡಿಯಾಡಿದರು. ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು. ತಿಂಗಳಾಂತ್ಯಕ್ಕೆ ನಿವೃತ್ತರಾಗಲಿರುವ ಪ್ರಾಂಶುಪಾಲೆ ಪರಿಮಳಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಂಸ್ಥೆ ಉಪಾಧ್ಯಕ್ಷ ಸಿ.ಬಿ. ಶಂಭುಲಿಂಗಪ್ಪ, ಕಾರ್ಯದರ್ಶಿ ಕೆ.ಎಸ್. ಪರಮೇಶ್, ಖಜಾಂಚಿ ಡಾ. ಉದಯಕುಮಾರ್, ನಿರ್ದೇಶಕರಾದ ಕೆ.ಬಿ. ನಾಗರಾಜ್, ಯು.ವಿ. ಶಿವಪ್ರಸಾದ್, ಡಿ.ವಿ. ಹರೀಶ್, ಸಿ.ಟಿ. ನಾಗರಾಜ್, ಬಿ.ಕೆ. ಯತೀಶ್, ಸುಲೋಚನಾ ಗಿರೀಶ್, ಅರುಣಾ ಚಂದ್ರಮೌಳಿ, ಪ್ರಾಂಶುಪಾಲರಾದ ನಿರಂಜನ್, ಪರಿಮಳಾ, ಮುಖ್ಯ ಶಿಕ್ಷಕ ಅಬ್ದುಲ್ ರಬ್, ಉಪನ್ಯಾಸಕರಾದ ಕಿರಣ್‍ಕುಮಾರ್, ಸತೀಶ್, ಅಭಿಲಾಷ್, ಶಿವಕುಮಾರಿ, ಶಿಕ್ಷಕರಾದ ಸೋಮಶೇಖರ್, ಸುನೀಲ್, ಸುಮಾ ಇತರರು ಉಪಸ್ಥಿತರಿದ್ದರು.

ವಾರ್ಷಿಕೋತ್ಸವ ಪ್ರಯುಕ್ತ ನಡೆದ ಕಾರ್ಯಕ್ರಮಗಳನ್ನು ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಜ್ಯ ಉಚ್ಛ ನ್ಯಾಯಾಲಯದ ವಕೀಲರಾದ ಎಚ್‍ಎಸ್ ಚಂದ್ರಮೌಳಿ ಅವರು ಉದ್ಘಾಟಿಸಿದರು. ಚಲನಚಿತ್ರ ನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲ ಮಾತನಾಡಿ ವಿದ್ಯಾರ್ಥಿಗಳು ಇತ್ತೀಚಿನ ಆಧುನಿಕತೆಗೆ ಮಾರುಹೋಗುವ ಭರಾಟೆಯಲ್ಲಿ ತಮ್ಮ ಮೂಲ ಸಂಸ್ಕೃತಿಯನ್ನು ಮೂಲೆಗುಂಪು ಮಾಡುತ್ತಿರುವುದು ಸರಿಯಲ್ಲ ಎಂದರು. ಚಲನಚಿತ್ರ ನಟ ಹಾಗೂ ರಂಗಕರ್ಮಿ ಮಂಡ್ಯ ರಮೇಶ್ ಮಾತನಾಡಿ ನಿಜ ಜೀವನದಲ್ಲಿ ನಡೆಯುವ ಘಟನೆಗಳನ್ನು ಕಲಾವಿದನು ವಿವಿಧ ಭಂಗಿಯಲ್ಲಿ ನಟನೆಯ ಮೂಲಕ ಸತ್ಯಾಂಶವನ್ನು ಇತರರಿಗೆ ತಿಳಿಸುತ್ತಾನೆ. ತನ್ನ ನಿಜ ಜೀವನದಲ್ಲಿ ಅದೆಷ್ಟೋ ನೋವು-ನಲಿವುಗಳಿದ್ದರೂ ಕೂಡ ಯಾರಿಗೂ ತೋರ್ಪಡಿಸದೆ ತನ್ನ ಕಲಾತ್ಮಕ ಜೀವನವನ್ನು ಸಾಗಿಸುತ್ತಾರೆ. ಅಂತಹ ಕಲಾವಿದರಿಗೆ ಗೌರವ ಕೊಡುವಂತಾಗಬೇಕೆಂದರು. ಈ ಸಂದರ್ಭ ಕಾಲೇಜು ಆಡಳಿತ ಮಂಡಳಿಯ. ಪದಾಧಿಕಾರಿಗಳು. ಹಾಗೂ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವರ್ಗದವರು. ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಇತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಂತರ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.