ಸೋಮವಾರಪೇಟೆ, ಜ.13: ಮುಖ್ಯಮಂತ್ರಿಗಳ ಪಟ್ಟಣ ಅಭಿವೃದ್ಧಿ ಯೋಜನೆ ಮತ್ತು ನಗರಾಭಿವೃದ್ಧಿ ಅನುದಾನದಡಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೋಮವಾರಪೇಟೆ ಮಾರುಕಟ್ಟೆಯಲ್ಲಿ ವಾರದ ಸಂತೆ ಸೋಮವಾರ ಮಾತ್ರ ನಡೆದರೆ, ಅಕ್ರಮ ಜೂಜಾಟ ಸೋಮವಾರ ಹೊರತುಪಡಿಸಿ ಉಳಿದೆಲ್ಲ ದಿನಗಳು ನಡೆಯುತ್ತಿವೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಈ ಹೈಟೆಕ್ ಮಾರುಕಟ್ಟೆ ಇದೀಗ ಜೂಜಾಟಗಾರರ ಅಡ್ಡೆಯಾಗಿ ಬಳಕೆಯಾಗುತ್ತಿದೆ. ಇಲ್ಲಿ ಅಂದರ್ ಬಾಹರ್ ಸೇರಿದಂತೆ ಕವಡೆಯಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಪೊಲೀಸರು ಕಾರ್ಯಾಚರಣೆಗಿಳಿದರೆ ಎಸ್ಕೇಪ್ ಆಗುವ ವಿದ್ಯೆಯನ್ನು ಜೂಜುಕೋರರು ಕಲಿತಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಈ ಮಾರುಕಟ್ಟೆ ಸೋಮವಾರಪೇಟೆ ಪೊಲೀಸ್ ಠಾಣೆಯಿಂದ 300 ಮೀಟರ್ ಗಿಂತಲೂ ಹತ್ತಿರವೇ ಇದೆ. ಜೂಜು ಕೇಂದ್ರವನ್ನು ಇನ್ನಿಲ್ಲವಾಗಿಸುವದು ಸೋಮವಾರಪೇಟೆ ಪೊಲೀಸರಿಗೆ ಕಷ್ಟದ ಕೆಲಸವೇನಲ್ಲ ಎಂಬದು ಅರಿತಿದ್ದರೂ ಸಹ ಅಂತಹ ಕಾರ್ಯಕ್ಕೆ ಇಲಾಖೆ ಸಜ್ಜಾಗಿಲ್ಲ ಯಾಕೆ? ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತಿದೆ!
ಹಲವಷ್ಟು ಅಕ್ರಮಗಳಿಗೆ ಗಂಟುಮೂಟೆ ಕಟ್ಟಿರುವ ಇಲ್ಲಿನ ಪೊಲೀಸರು, ಹಾಡಹಗಲೇ ರಾಜಾರೋಷವಾಗಿ ನಡೆಯುತ್ತಿರುವ ಈ ಜೂಜು ಕೇಂದ್ರಕ್ಕೆ ಗಂಟುಮೂಟೆ ಕಟ್ಟುವದು ಅಸಾಧ್ಯವಲ್ಲ. ಚಿಲ್ಲರೆಯಾಟವಿರಲಿ; ಅಥವಾ ನೋಟುಗಳ ಲೆಕ್ಕದಲ್ಲಿರಲಿ, ಜೂಜಾಟ ಅಕ್ರಮ ಎಂಬದು ಪೊಲೀಸರಿಗೂ ತಿಳಿದಿದೆ!
ಈ ಹಿಂದೆ ಜೂಜು ಅಡ್ಡೆಯ ಮೇಲೆ ಧಾಳಿ ನಡೆಸಿದ ಸಂದರ್ಭ ಒಂದಿಬ್ಬರು ಮಾತ್ರ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಆದರೂ ಈ ಜೂಜು ನಿಂತಿಲ್ಲ. ಒಮ್ಮೆ ಪೊಲೀಸ್ ಅತಿಥಿಯಾದವರೂ ಸಹ ಮತ್ತೆ ಮತ್ತೆ ಈ ಜೂಜು ಕೇಂದ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಸರಿಯಾದ ‘ಬುದ್ದಿಮಾತು’ ಹೇಳಿಲ್ಲ ಎಂಬದು ಇದರಿಂದಲೇ ವೇದ್ಯವಾಗುತ್ತಿದೆ.
ಇನ್ನಾದರೂ ಇಂತಹ ಅಕ್ರಮ ಕೇಂದ್ರಗಳಿಗೆ ಪೊಲೀಸರು ಆಸ್ಪದ ಕಲ್ಪಿಸದಿರಲಿ. ಅಷ್ಟಕ್ಕೂ ಪಟ್ಟಣದ ಹೃದಯಭಾಗದಲ್ಲಿಯೇ ಇಂತಹ ಜೂಜು ಕೇಂದ್ರ ಇರುವದು ಇಲಾಖೆಯ ಗೌರವಕ್ಕೂ ಕಪ್ಪುಚುಕ್ಕೆ! ಇಂತಹ ಕಪ್ಪುಚುಕ್ಕೆಯನ್ನು ತಕ್ಷಣ ಶುಚಿಗೊಳಿಸುವ ಕೆಲಸ ಆರಕ್ಷಕರಿಂದ ಆಗಲಿ; ಸೋಮವಾರಪೇಟೆಯ ಪೊಲೀಸರೆಂದರೆ ಜೂಜುಕೋರರಿಗೆ ಒಂದಿಷ್ಟು ಭಯವಾದರೂ ಮೂಡಲಿ! -ವಿಜಯ್