ವೀರಾಜಪೇಟೆ, ಜ. 12: ಸಮಾಜ ಸೇವಾ ಮನೋಭಾವದಿಂದ ಸಂಸ್ಥೆಯು ಬೆಳವಣಿಗೆ ಹಾಗೂ ಏಳಿಗೆಯನ್ನು ಕಾಣಬಹುದು ಎಂದು ಲಯನ್ಸ್ ಕ್ಲಬ್‍ನ ರೀಜನಲ್ ಛೇರ್‍ಮನ್ ಎಂ.ಜೆ.ಎಫ್. ಸೋಮಣ್ಣ ಅಭಿಪ್ರಾಯಪಟ್ಟರು.
ವೀರಾಜಪೇಟೆ ಹಾಗೂ ಅಮ್ಮತ್ತಿಯ ಲಯನ್ಸ್ ಕ್ಲಬ್‍ನ ವತಿಯಿಂದ ಇಲ್ಲಿನ ಕೊಡವ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೀಜನಲ್ ಛೇರ್‍ಮನ್ ಅಧಿಕೃತ ಭೇಟಿಯ ಪ್ರಯುಕ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ಥಾಪನೆಯಾದ 46 ವರ್ಷಗಳ ಅವಧಿಯಲ್ಲಿ ವೀರಾಜಪೇಟೆ ಲಯನ್ಸ್ ಕ್ಲಬ್ ಉತ್ತಮ ಸಾಧನೆ ಮಾಡಿರುವುದು ಸ್ಮರಣೀಯ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಉತ್ತರ ಕೊಡಗು, ದಕ್ಷಿಣ ಕೊಡಗಿನಲ್ಲಿ ಪ್ರಕೃತಿ ವಿಕೋಪ ಉಂಟಾದಾಗ ಮನೆ ಮಠ ಕಳೆದುಕೊಂಡ ಸಂತ್ರಸ್ತರ ಬೇಡಿಕೆಗೆ ಸ್ಪಂದಿಸುವುದರೊಂದಿಗೆ ನಿರ್ದಾಕ್ಷಿಣ್ಯವಾಗಿ ಸಹಾಯ ಹಸ್ತ ನೀಡಿದೆ. ಸೇವಾ ಮನೋಭಾವವುಳ್ಳವರಿಂದ ಮುಕ್ತವಾಗಿ ಸಮಾಜ ಸೇವೆ ಮಾಡಲು ಸಾಧ್ಯ. ಅಮ್ಮತ್ತಿಯ ಲಯನ್ಸ್ ಕ್ಲಬ್ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಉತ್ತಮ ಕಾರ್ಯ ವೈಖರಿ, ಸೇವಾ ಸಾಧನೆಯೊಂದಿಗೆ ಮುನ್ನುಗ್ಗುತ್ತಿದೆ. ಈ ಪ್ರವೃತ್ತಿಯನ್ನು ಅಮ್ಮತ್ತಿ ಲಯನ್ಸ್ ಕ್ಲಬ್ ಮುಂದುವರೆಸಲಿ ಎಂದರು.
ವೇದಿಕೆಯಲ್ಲಿ ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಪೊನ್ನಪ್ಪ. ಕಾರ್ಯದರ್ಶಿ ಸವಿತಾ ಬೋಪಣ್ಣ, ಖಜಾಂಚಿ ರಕ್ಷಿತಾ, ವೀರಾಜಪೇಟೆ ಲಯನೆಸ್‍ನ ಪ್ರಥಮ ಮಹಿಳೆ ಸೋನಿ ಪೌಲ್, ಅನಿತಾ ಸೋಮಣ್ಣ, ಖಜಾಂಚಿ ಮಂಡೇಟಿರ ಸುರೇಶ್, ಕಾರ್ಯದರ್ಶಿ ಎ.ಎ. ಅಜಿತ್, ಜಿಆರ್‍ಇ ನವೀನ್ ಕಾರ್ಯಪ್ಪ ಉಪಸ್ಥಿತರಿದ್ದರು.
ವೀರಾಜಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಪೌಲ್ ಕ್ಷೇವಿಯರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಅಧ್ಯಕ್ಷ ತ್ರಿಶೂ ಗಣಪತಿ ನಿರೂಪಿಸಿದರು.