ಮಡಿಕೇರಿ, ಜ. 12: ಜಿಲ್ಲಾ ಫುಟ್ಬಾಲ್ ಸಂಸ್ಥೆ ಹಾಗೂ ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಕ್ಲಬ್ ಇವರ ಸಹಯೋಗದಲ್ಲಿ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಏಪ್ರಿಲ್ 15 ರ ನಂತರ ವಾರಾಂತ್ಯಗಳಲ್ಲಿ ಜಿಲ್ಲಾಮಟ್ಟದ ಪೂರ್ತಿ ದಿನ ಲೀಗ್ ಪಂದ್ಯಾಟವನ್ನು ನಡೆಸಲು ಅಮ್ಮತ್ತಿಯ ಪ್ರೌಢಶಾಲೆಯ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಂದ್ಯಾಟವು ಒಟ್ಟು 90 ನಿಮಿಷ ನಡೆಯಲಿದ್ದು, ಲೀಗ್‍ನಲ್ಲಿ ಭಾಗವಹಿಸಿ ಅಂತಿಮ ಹಂತಕ್ಕೆ ತಲಪಿದ ತಂಡಗಳ ನಡುವೆ ಸೂಪರ್ 8, ನಾಕೌಟ್ ಮಾದರಿಯ ಪಂದ್ಯಾಟಗಳು ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಮೋಹನ್ ಅಯ್ಯಪ್ಪ ಸಭೆಯಲ್ಲಿ ತಿಳಿಸಿದರು. ಮುಂದೆ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅನುಮತಿ ಇಲ್ಲದೆ ಕೊಡಗಿನಲ್ಲಿ ಯಾವುದಾದರೂ ಪಂದ್ಯಾಟ ನಡೆಯುವುದು ಕಂಡುಬಂದಲ್ಲಿ ಅಂತಹ ಕ್ರೀಡಾಕೂಟವನ್ನು ತಡೆಹಿಡಿಯಲಾಗುವುದೆಂದು ಮೋಹನ್ ಅಯ್ಯಪ್ಪ ಹೇಳಿದರು.

ಲೀಗ್ ಪಂದ್ಯಾಟದಲ್ಲಿ ಭಾಗವಹಿಸಿದ ಆಟಗಾರರನ್ನು ಆಯ್ಕೆ ಮಾಡಿ ಜಿಲ್ಲಾ ತಂಡವನ್ನು ಸ್ಥಾಪಿಸಲಾಗುವದೆಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರರ ಸಂಘದ ಅಧ್ಯಕ್ಷ ಪಿ.ಎ. ನಾಗೇಶ್ ತಿಳಿಸಿದರು. ಲೀಗ್ ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರನ್ನು ಆಹ್ವಾನಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಂದರ್ಭ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷೆ ದೇಚಮ್ಮ, ಖಜಾಂಚಿ ದೀಪು ಮಾಚಯ್ಯ, ಲಿಜೇಸ್ ಅಮ್ಮತ್ತಿ, ಜಗದೀಶ್ ಹಾಗೂ ರಕ್ಷಿತ್ ಇದ್ದರು.