ಕುಶಾಲನಗರ, ಜ. 12: ಕುಶಾಲನಗರದ 122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ತಂಡವೊಂದನ್ನು ಕಣಕ್ಕಿಳಿ ಸಲಾಗಿದೆ ಎಂದು ಕುಶಾಲನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯದಂತೆ 13 ಮಂದಿ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಆಯ್ಕೆ ಮಾಡಲಾಗಿದೆ. ಈ ಬಾರಿ ಚುನಾವಣೆಗೆ ಹಲವು ಯುವ ಮುಖಂಡರಿಗೆ ಸ್ಪರ್ಧೆಗೆ ಅನುಕೂಲ ಮಾಡಿಕೊಡಲಾಗಿದೆ. ಮುಳ್ಳುಸೋಗೆ ಸಾಮಾನ್ಯ ಕ್ಷೇತ್ರದಿಂದ ಗಣಿಪ್ರಸಾದ್, ಗ್ರಾಮಾಂತರ ಸಾಮಾನ್ಯ ಮಹಿಳೆ ಕ್ಷೇತ್ರಕ್ಕೆ ವನಿತಾ, ಗೊಂದಿಬಸವನಹಳ್ಳಿ ಗ್ರಾಮಾಂತರ ಸಾಮಾನ್ಯ ಕ್ಷೇತ್ರಕ್ಕೆ ಕೆ.ಆರ್. ಸತೀಶ್, ಗುಡ್ಡೆಹೊಸೂರು ಗ್ರಾಮಾಂತರ ಸಾಮಾನ್ಯ ಕ್ಷೇತ್ರಕ್ಕೆ ಜಿ. ಮನುಕುಮಾರ್, ಕುಶಾಲನಗರ ಸಾಮಾನ್ಯ ಕ್ಷೇತ್ರಗಳಿಗೆ ಜಿ.ಎಲ್. ನಾಗರಾಜ್, ರಜನಿಕಾಂತ್, ಹೆಚ್.ಡಿ. ಶಿವಾಜಿ, ಕುಶಾಲನಗರ ಸಾಮಾನ್ಯ ಮಹಿಳಾ ಕ್ಷೇತ್ರಕ್ಕೆ ಎಸ್.ಸಿ. ಮಂಜುಳಾ, ಹಿಂದುಳಿದ ವರ್ಗ ಎ ಮೀಸಲು ಕ್ಷೇತ್ರಕ್ಕೆ ನಿಸಾರ್ ಅಹಮದ್, ಪ್ರಭುದೇವ್, ಪರಿಶಿಷ್ಟ ಪಂಗಡದ ಅಭ್ಯರ್ಥಿಯಾಗಿ ಅಣ್ಣಯ್ಯ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಹೆಚ್.ಡಿ. ನಂದಕುಮಾರ್, ಸಾಲಗಾರರಲ್ಲದ ಕ್ಷೇತ್ರಕ್ಕೆ ಶೇಖರೇಗೌಡ ಅವರನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.
ಪ.ಪಂ. ಸದಸ್ಯ ಬಿ. ಅಮೃತ್‍ರಾಜ್ ಮಾತನಾಡಿ, ಬಿಜೆಪಿ ವತಿಯಿಂದ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜ್ಞಾನ ಹೊಂದಿರುವವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಹೆಚ್.ಡಿ. ಶಿವಾಜಿ, ಸೋಮವಾರಪೇಟೆ ತಾಲೂಕು ಯುವ ಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಹಿಂದುಳಿದ ವರ್ಗಗಳ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎನ್. ದೇವರಾಜ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಪ್ರವೀಣ್ ಇದ್ದರು.