ಮಡಿಕೇರಿ, ಜ. 12: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಮಡಿಕೇರಿ ವತಿಯಿಂದ ಮಡಿಕೇರಿಯ ಸಾಮಥ್ರ್ಯ ಸೌಧ ಕಟ್ಟಡದಲ್ಲಿ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಕ್ಷೇತ್ರ ಸಿಬ್ಬಂದಿಗಳಿಗೆ ಸಾಮಥ್ರ್ಯಾಭಿವೃದ್ಧಿ ತರಬೇತಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಆಗಮಿಸಿದ್ದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತ ಕೀರ್ತನ್ ಹಾಗೂ ಜಿಲ್ಲಾ ಸಂಯೋಜಕಿ ಪ್ರಭಾ ತರಬೇತಿ ನೀಡಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಧಾನ ಮಂತ್ರಿ ಮಾತೃವಂದನ ಯೋಜನೆಯ ತರಬೇತಿಯನ್ನು ಪಡೆದು ಸರಿಯಾದ ಸಮಯದಲ್ಲಿ ಸರಿಯಾದ ಫಲಾನುಭವಿಗಳಿಗೆ ಯೋಜನೆಯ ಸವಲತ್ತು ಸಿಗುವ ಹಾಗೆ ಶ್ರಮಿಸಬೇಕಾಗಿ ತಿಳಿಸಿದರು.

ತರಬೇತಿಯ ಮುಕ್ತಾಯ ಸಮಾರಂಭಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಆಗಮಿಸಿ ತರಬೇತಿಗೆ ಶುಭ ಕೋರಿದರು. ಪ್ರಧಾನ ಮಂತ್ರಿ ಮಾತೃವಂದನ ಯೋಜನೆಯ ಕುರಿತು ಗ್ರಾಮ ಸಭೆಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಕಾರ್ಯಕ್ರಮಗಳಲ್ಲಿ ಮತ್ತಷ್ಟು ಅರಿವು ಮೂಡಿಸಿ ಯೋಜನೆಯ ಸವಲತ್ತುಗಳನ್ನು ಫಲಾನುಭವಿಗಳಿಗೆ ಸಿಗುವಂತೆ ಮಾಡಲು ಕರೆ ನೀಡಿದರು.