ಕುಶಾಲನಗರ, ಜ. 12: ತಾ. 20 ರಂದು ಬೆಂಗಳೂರಿನಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ರ್ಯಾಲಿ ನಡೆಯಲಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಈ.ಸಿ. ರಂಗಸ್ವಾಮಿ ತಿಳಿಸಿದರು.

ಕುಶಾಲನಗರದಲ್ಲಿ ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೀದಿ ಬದಿ ವ್ಯಾಪಾರಿಗಳು ರಾಜ್ಯದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು ಬಜೆಟ್‍ನಲ್ಲಿ ಅನುದಾನ ಮೀಸಲಿರಿಸುವ ಮೂಲಕ ಪರಿಹಾರ ಕಂಡುಹಿಡಿಯಬೇಕು. ಬೀದಿ ಬದಿ ವ್ಯಾಪಾರಿಗಳ ನಿಗಮ ಮಂಡಳಿ ರಚನೆ ಮಾಡುವ ಮೂಲಕ ಮೂಲಭೂತ ವ್ಯವಸ್ಥೆ ಕಲ್ಪಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿದರು.

ವ್ಯಾಪಾರಿಗಳು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕಿದೆ. ವ್ಯಾಪಾರಿಗಳು ಪ್ಲಾಸ್ಟಿಕ್ ಬದಲಾಗಿ ಬಟ್ಟೆ ಕೈಚೀಲಗಳನ್ನು ಉಪಯೋಗಿಸಲು ಮುಂದಾಗುವುದರೊಂದಿಗೆ ಗ್ರಾಹಕರಲ್ಲಿ ಕೂಡ ಈ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದರು.

ಒಕ್ಕೂಟದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್. ಜಗದೀಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಉದಯಕುಮಾರ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಸಂಘಟಿತರಾಗುವ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಿದೆ. ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು, ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದರು. ಒಂದೇ ಸೂರಿನಡಿ ನೆಲೆ ಕಲ್ಪಿಸಲು ಪಂಚಾಯಿತಿ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಸೋಮವಾರಪೇಟೆ ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಮಹದೇವಸ್ವಾಮಿ ಮಾತನಾಡಿ, ಸರಕಾರ ಜಾರಿಗೆ ತಂದಿರುವ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಂ. ಅಣ್ಣಯ್ಯ, ಮುನಿಲಕ್ಷ್ಮಿ, ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಜಗಣ್ಣ, ಕಾರ್ಯದರ್ಶಿ ಅನ್ವರ್ ಶಿರಹಟ್ಟಿ, ಸಂಚಾರ ಪೊಲೀಸ್ ಠಾಣಾಧಿಕಾರಿ ಅಚ್ಚಮ್ಮ, ಪ್ರೆಸ್ ಕ್ಲಬ್ ಟ್ರಸ್ಟ್ ಅಧ್ಯಕ್ಷ ಹೆಚ್.ಎಂ. ರಘು, ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷೆ ಸೆಲೀನಾ ಡಿಕುನ್ನ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಕೆ.ಬಿ. ರಾಜು, ಒಕ್ಕೂಟದ ಸಲಹೆಗಾರರಾದ ಕೆ.ಟಿ. ಶ್ರೀನಿವಾಸ್, ಟಿ.ಆರ್. ಪ್ರಭುದೇವ್, ಎನ್. ಮೋಹನ್‍ಕುಮಾರ್ ಮಾತನಾಡಿ, ನೂತನ ಸಮಿತಿ ಸದಸ್ಯರಿಗೆ ಶುಭ ಹಾರೈಸಿದರು. ಇದೇ ಸಂದರ್ಭ ನೂತನ ಸಮಿತಿ ಸದಸ್ಯರನ್ನು ಮತ್ತು ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸಭೆಗೂ ಮುನ್ನ ಕುಶಾಲನಗರ ಬೀದಿ ಬದಿ ವ್ಯಾಪಾರಿಗಳ ಪಟ್ಟಣ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿನ ವಿಜೇತರ ವಿಜಯೋತ್ಸವ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ನಡೆದು ಸಂಘದ ಸದಸ್ಯರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ತೆರಳಿದರು. ಇದೇ ಸಂದರ್ಭ ಒಕ್ಕೂಟದ ಮೂಲಕ ಪ್ಲಾಸ್ಟಿಕ್ ಬಳಕೆ ತಡೆಗಟ್ಟುವ ಹಿನ್ನೆಲೆ ವ್ಯಾಪಾರಿಗಳಿಗೆ ಬಟ್ಟೆಯ ಕೈಚೀಲಗಳನ್ನು ಕುಶಾಲನಗರ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಉದಯಕುಮಾರ್ ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.

ಸಮಿತಿಯ ಪ್ರಮುಖರಾದ ಕೆ. ರವಿ, ಫಯಾಜ್ ಪಾಷಾ, ಆರ್.ವಿ. ಸತೀಶ್, ಎಸ್.ಎಸ್. ಗಣೇಶ್, ಜಯಂತಿ, ಲಕ್ಷ್ಮಿ, ಮಾದೇವಿ, ಸುಜಾತ ಮತ್ತು ಪ.ಪಂ. ಕಾರ್ಯಾಲಯದ ಶೋಭಾ, ನರಸಿಂಹಮೂರ್ತಿ, ಸ್ವಾಮಿಗೌಡ, ಚೇತನ, ಅಪ್ಪಾಜಿ ಶೆಟ್ಟಿ, ಒಕ್ಕೂಟದ ಪ್ರಮುಖರು, ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.