ಪ್ರತಿಪಕ್ಷಗಳಿಗೆ ಸಚಿವ ಶಾ ಸವಾಲು
ಜಬಲ್ಫುರ, ಜ. 12: ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಭಾರತೀಯರಿಂದ ಪೌರತ್ವ ಕಸಿದುಕೊಳ್ಳುವ ನಿಬಂಧನೆಯನ್ನು ತೋರಿಸಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲು ಹಾಕಿದ್ದಾರೆ. ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಹಾಗೂ ರಾಹುಲ್ ಗಾಂಧಿಗೆ ಚಾಲೆಂಜ್ ಹಾಕುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಈ ದೇಶದ ಯಾವೊಬ್ಬ ಪ್ರಜೆಯಿಂದ ಪೌರತ್ವವನ್ನು ಕಸಿದುಕೊಳ್ಳುವ ಯಾವುದಾದರೊಂದು ನಿಬಂಧನೆಯನ್ನು ತೋರಿಸಲಿ ಎಂದರು. ಮುಂದುವರೆದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, ದೇಶ ವಿಭಜನೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿದೆ ಎಂದು ಆರೋಪಿಸಿದರು. ಪಾಕಿಸ್ತಾನದಿಂದ ವಲಸೆ ಬರುವ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವುದಾಗಿ ಆ ಪಕ್ಷದ ನಾಯಕರು ಭರವಸೆ ನೀಡಿದ್ದರು ಎಂದರು. ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎರಡರಲ್ಲೂ ವಾಸಿಸುತ್ತಿದ್ದ ಹಿಂದೂಗಳು, ಸಿಖ್ಖರು, ಪಾರ್ಸಿಗಳು, ಜೈನರು ಇಲ್ಲಿಗೆ ಬರಲು ಬಯಸಿದ್ದರು, ಆದರೆ ರಕ್ತಪಾತದಿಂದಾಗಿ ಅವರು ಅಲ್ಲಿಯೇ ಇದ್ದರು. ಆಗ ನಮ್ಮ ದೇಶದ ನಾಯಕರು ಅವರನ್ನು ಇಲ್ಲಿಗೆ ಬಂದರೆ ಸ್ವಾಗತಿಸಲಾಗುವುದು ಮತ್ತು ಪೌರತ್ವ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಅಮಿತ್ ಶಾ ತಿಳಿಸಿದರು.
ಇಂದು ಬಿಜೆಪಿ “ಕನಕಪುರ ಚಲೋ”
ಬೆಂಗಳೂರು, ಜ. 12: ಕಪಾಲಿ ಬೆಟ್ಟದಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ನಿರ್ಮಿಸಲು ಉದ್ದೇಶಿಸಿದ್ದ ಏಸುಪ್ರತಿಮೆ ನಿರ್ಮಾಣ ಖಂಡಿಸಿ ತಾ. 13 ರಂದು ಬಿಜೆಪಿ “ಕನಕಪುರ ಚಲೋ” ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಇದರಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಗೂ ಕೆಲ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಕನಕಪುರ ಚಲೋ ಖಂಡಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್, ಕನಕಪುರಕ್ಕೆ ಕೆಟ್ಟ ಹೆಸರು ತರಲೆಂದೇ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಹೀಗಾಗಿ ಕನಕಪುರ ಮತ್ತು ರಾಮನಗರದ ಜನತೆ ಪಕ್ಷದ ಕಾರ್ಯಕರ್ತರು ಯಾವುದೇ ಉದ್ವೇಗಕ್ಕೊಳಗಾಗದೇ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ಕನಕಪುರದ ಮಹಾಜನರು ಶತ-ಶತಮಾನಗಳಿಂದಲೂ ಶಾಂತಿಪ್ರಿಯರು. ಮತೀಯ ಸಾಮರಸ್ಯಕ್ಕೆ ಹೆಸರಾದವರು. ಕಪಾಲ ಬೆಟ್ಟದ ಯೇಸುಪ್ರತಿಮೆ ನಿರ್ಮಾಣ ವಿರೋಧಿಸುವ ನೆಪದಲ್ಲಿ ಕೆಲವು ಮತೀಯ ಶಕ್ತಿಗಳು ಪ್ರಯತ್ನಿಸುತ್ತಿವೆ. ಸುಳ್ಳು ಕಾರಣ, ಕಟ್ಟುಕತೆಗಳನ್ನು ಸೃಷ್ಟಿಸುತ್ತಿವೆ, ವದಂತಿಗಳನ್ನು ಹರಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇಂದು ಕೆಪಿಸಿಸಿ ಸಾರಥ್ಯ ಚರ್ಚೆ
ಬೆಂಗಳೂರು, ಜ. 12: ನಿರೀಕ್ಷಿತ ಕೆಪಿಸಿಸಿ ಸಾರಥ್ಯ ಬದಲಾವಣೆ ವಿಚಾರ ಅಂತಿಮಘಟ್ಟ ತಲುಪಿದ್ದು, ಇನ್ನೆರಡು ದಿನಗಳಲ್ಲಿಯೇ ಪ್ರದೇಶ ಕಾಂಗ್ರೆಸ್ಗೆ ಹೊಸ ಅಧ್ಯಕ್ಷರ ನೇಮಕಾತಿಯಾಗಲಿದೆ. ರಾಜ್ಯ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಸಂಬಂಧ ಚರ್ಚಿಸಲು ಸೋಮವಾರ ಸಂಜೆ ರಾಜ್ಯ ರಾಜಧಾನಿಗೆ ಬರುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆ ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಅಧ್ಯಕ್ಷರ ನೇಮಕ ಸಂಬಂಧ ದಿಲ್ಲಿಗೆ ಬರಲು ಆಯ್ದ ರಾಜ್ಯ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಮತ್ತೊಂದೆಡೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಿವಾಸ ಮತ್ತೊಮ್ಮೆ ಚಟುವಟಿಕೆಯ ಕೇಂದ್ರವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಗಾದಿಗೇರುವ ಪ್ರಮುಖರಾಗುತ್ತಿದ್ದಂತೆಯೇ ಸಾಕಷ್ಟು ಕಾಂಗ್ರೆಸ್ ನಾಯಕರ ಸ್ಪರ್ಧೆಯ ನಡುವೆಯೂ ತಮ್ಮ ಹೆಸರನ್ನು ಮುಂಚೂಣಿಯಲ್ಲಿ ಉಳಿಸಿಕೊಂಡಿದ್ದಾರೆ
ತರಕಾರಿ ಮಾರುತ್ತಿದ್ದವನು ಸಿಎಂ ಆದೆ
ಬೆಂಗಳೂರು, ಜ. 12: ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಬೂಕನ ಕೆರೆಯಲ್ಲಿ ನಿಂಬೆಹಣ್ಣು, ತರಕಾರಿ ಮಾರುತ್ತಿದ್ದವನು ಇಂದು ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ, ಅಚಲ ವಿಶ್ವಾಸವಿದ್ದ ಯಾರು ಬೇಕಾದರೂ ಆಗಬಹುದು ಎಂದು ತಮ್ಮ ಜೀವನವನ್ನೇ ಉದಾಹರಣೆ ನೀಡಿ ವಿದ್ಯಾರ್ಥಿಗಳಿಗೆ ಭವಿಷ್ಯದ ಗುರಿಯೊಂದಿಗೆ ಸಂಕಲ್ಪ ತೊಟ್ಟು ಮುನ್ನಡೆಯುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರದಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳ ವಿತರಣೆ ಯೋಜನೆಯಡಿ ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಹಾಗೂ ಇಂಜಿನಿಯರಿಂಗ್, ಮೆಡಿಕಲ್, ಪಾಲಿಟೆಕ್ನಿಕ್ ಡಿಪ್ಲೊಮಾ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ-ಅನುದಾನಿತ ಕಾಲೇಜುಗಳ 1,09,916 ವಿದ್ಯಾರ್ಥಿಗಳಿಗೆ ರೂ. 311 ಕೋಟಿ ವೆಚ್ಚದಲ್ಲಿ ಲ್ಯಾಪ್ಟಾಪ್ ವಿತರಣೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಂಕೇತಿಕವಾಗಿ ಚಾಲನೆ ನೀಡಿದರು. ಅಲ್ಲದೆ ಯುವ ಸಬಲೀಕರಣ ಕೇಂದ್ರಗಳನ್ನು ಉದ್ಘಾಟಿಸಿದರು.
ಮೃತ ಉಗ್ರರ ಸಂಖ್ಯೆ 3ಕ್ಕೆ ಏರಿಕೆ
ಶ್ರೀನಗರ, ಜ. 12: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ತ್ರಾಲ್ನಲ್ಲಿ ನಡೆಯುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಮತ್ತೋರ್ವ ಉಗ್ರನನ್ನು ಸೇನಾ ಪಡೆಗಳು ಹೊಡೆದುರುಳಿಸಿವೆ. ಆ ಮೂಲಕ ಮೃತ ಉಗ್ರರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ನಲ್ಲಿ ಉಗ್ರರು ಅಡಗಿ ಕುಳಿತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಸೇನಾಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿತು. ಈ ವೇಳೆ ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪ್ರತಿದಾಳಿ ನಡೆಸಿದ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಬಳಿಕ ಕಾರ್ಯಾಚರಣೆ ಮುಂದುವರೆಸಿದ್ದ ಸೇನೆ ಇದೀಗ ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಿದೆ. ಆ ಮೂಲಕ ಕಾರ್ಯಾಚರಣೆಯಲ್ಲಿ ಮೃತಪಟ್ಟ ಉಗ್ರರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಸೋಪಿಯಾನ್ ಜಿಲ್ಲೆಯ ನರ್ಬಾಲ್ ಒಮ್ಪೊರಾ ಪ್ರದೇಶದಲ್ಲಿ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿರುವ ಸೇನಾಪಡೆ, ಶಸ್ತ್ರಾಸ್ತ್ರಗಳು ಹಾಗೂ ಕೆಲ ಪ್ರಮುಖ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.
ಮತ್ತೆ ಐವರು ನಕ್ಸಲರ ಬಂಧನ
ರಾಂಚಿ, ಜ. 12: ನಕ್ಸಲ್ ಪೀಡಿತ ಜಾರ್ಖಂಡ್ನಲ್ಲಿ ಮತ್ತೆ ಐವರು ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ವಾರವಷ್ಟೇ ಪೊಲೀಸರ ಮೇಲೆ ದಾಳಿ ಮಾಡಿ 4 ಪೊಲೀಸರನ್ನು ಹತ್ಯೆಗೈದು ಪರಾರಿಯಾಗಿದ್ದ 7 ಮಂದಿ ನಕ್ಸಲರನ್ನು ಪೊಲೀಸರು ಬಂಧಿಸಿದ್ದರು. ಸೋಮಾವಾರ ತ್ರಿತೀಯ ಪ್ರಸ್ತುತಿ ಕಮಿಟಿಯು (ಟಿಪಿಸಿ) ಈ ನಕ್ಸಲರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲುನಾಥ್ನ ಗಡಿ ಭಾಗದಲ್ಲಿ ನಕ್ಸಲರು ಸಂಚರಿಸುತ್ತಿದ್ದ ವೇಳೆ ಪೊಲೀಸರು 7 ಮಂದಿ ನಕ್ಸಲರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಮತ್ತೆ ಪೊಲೀಸರು ಐದು ಮಂದಿ ನಕ್ಸಲರನ್ನು ಬಂಧಿಸಿದ್ದಾರೆ. ಪಲಮು ಜಿಲ್ಲೆಯ ಹೊರವಲಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಾರ್ಖಂಡ್ ಪೊಲೀಸರು ಐದು ಮಂದಿ ನಕ್ಸಲರನ್ನು ಬಂಧಿಸಿದ್ದಾರೆ.
ಭಾರತಕ್ಕೆ ಧನ್ಯವಾದ ಹೇಳಿದ ವಿಶ್ವಸಂಸ್ಥೆ
ವಾಷಿಂಗ್ಟನ್, ಜ. 12: ನಿಗದಿತ ಅವಧಿಗಿಂತ ಮೊದಲೇ ನೀಡಬೇಕಾದ ಬಾಕಿ ಹಣವನ್ನು ನೀಡಿದ ಕಾರಣಕ್ಕಾಗಿ ವಿಶ್ವಸಂಸ್ಥೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಿದೆ. ವಿಶ್ವಸಂಸ್ಥೆಗೆ ಸದಸ್ಯ ರಾಷ್ಟ್ರಗಳು ನೀಡಬೇಕಾದ ಪೂರ್ಣ ಪ್ರಮಾಣದ ಮೊತ್ತವನ್ನು ಭಾರತ ಸರ್ಕರಾ ನಿಗದಿತ ಸಮಯಕ್ಕೂ ಮೊದಲೇ ಪಾವತಿಸಿದ್ದು, ಈ ಮೂಲಕ ಭಾರತ 193 ಸದಸ್ಯ ರಾಷ್ಟ್ರಗಳ ಪೈಕಿ ನಿಗದಿತ ಅವಧಿಗೂ ಮುನ್ನವೇ ಪೂರ್ಣ ಹಣ ಪಾವತಿಸಿದ ನಾಲ್ಕನೇ ರಾಷ್ಟ್ರವಾಗಿದೆ. ಇದೇ ಕಾರಣಕ್ಕೆ ವಿಶ್ವಸಂಸ್ಥೆ ಭಾರತಕ್ಕೆ ಧನ್ಯವಾದ ತಿಳಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ರ ವಕ್ತಾರ ಸ್ಟಿಫನ್ ಗುಜರಿಕ್ ನಾಲ್ಕೂ ರಾಷ್ಟ್ರಗಳಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಸೈಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿದ್ದು, ಈಗಾಗಲೇ ಕೆಲವರು ಹಣ ಪಾವತಿ ಗುರಿಯನ್ನು ಸಾಧಿಸಿದ್ದಾರೆ. ಇನ್ನೂ ಅನೇಕರು ಇದನ್ನು ಸಾಧಿಸುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ.