ಕಳೆದ ಸಮಯದ ಬಗ್ಗೆ ಚಿಂತಿಸದೆ ಮುಂದೆ ಇರುವ ಸಮಯದಲ್ಲಿ ಕ್ರಮಬದ್ಧವಾಗಿ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಅಂತಾರಾಷ್ಟ್ರೀಯ ಅಥ್ಲೀಟ್ ಹಾಗೂ ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು.
ಕೊಡಗು ವಿಕಸನ ಸಂಸ್ಥೆ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶನಿವಾರ ಜರುಗಿದ ‘ಪರೀಕ್ಷೆ ಒಂದು ಕ್ರೀಡಾಂಗಣ’ ಕಾರ್ಯಾಗಾರದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಸರಳವಾಗಿ ಪರೀಕ್ಷಾ ಪೂರ್ವ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆರಂಭಿಸಿರುವ ಕಾರ್ಯಾಗಾರದ ಮೊದಲ ಕಾರ್ಯಕ್ರಮ ನಾಪೋಕ್ಲು ಶ್ರೀರಾಮ ಟ್ರಸ್ಟ್ ಹಾಗೂ ಮಡಿಕೇರಿಯ ಸಂತ ಜೋಸೆಫರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಿತು.
ರಾತ್ರಿ ನಿದ್ದೆ ಬಿಟ್ಟು ಓದಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾನಸಿಕ ನೆಮ್ಮದಿ ಕಂಡುಕೊಳ್ಳಲು ನಿದ್ದೆ ಸಹಕಾರಿಯಾಗುತ್ತದೆ. ಪಠ್ಯ ವಿಷಯವನ್ನು ಕಷ್ಟದ ವಿಷಯ ಮತ್ತು ಸುಲಭದ ವಿಷಯ ಅಂತ ವಿಂಗಡಣೆ ಮಾಡಿಕೊಂಡು ಅಧ್ಯಯನ ಮಾಡಿದರೆ ಅಂಕ ಗಳಿಕೆಗೆ ಹೆಚ್ಚಿನ ಸಹಕಾರಿಯಾಗುತ್ತದೆ. ಈ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಸಲಹೆಯಿತ್ತÀರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೆರಿಗ್ರಿನ್ ಎಸ್. ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಕೊಡಗು ವಿಕಸನ ಸಂಸ್ಥೆಯ ಚೈಯ್ಯಂಡ ಸತ್ಯ ಗಣಪತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಇತರರಿದ್ದರು. ಸಂಸ್ಥೆಯ ಕಿಶೋರ್ ರೈ ಕತ್ತಲೆಕಾಡು ಕಾರ್ಯಕ್ರಮ ನಿರೂಪಿಸಿದರು. ಎರಡು ಕಡೆ ಆಯೋಜಿಸಲಾಗಿದ್ದ ಕಾಯಾರ್ಗಾರದಲ್ಲಿ ನಾಪೋಕ್ಲು ಹಾಗೂ ಮಡಿಕೇರಿ ಭಾಗದ ಶಾಲೆಗಳ 1200ಕ್ಕೂ ಅಧಿಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾ. 13 ರಂದು ಮೂರ್ನಾಡು ಹಾಗೂ ಸಿದ್ದಾಪುರದಲ್ಲಿ, 14 ರಂದು ಗೋಣಿಕೊಪ್ಪಲುವಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅರ್ಜುನ್ ದೇವಯ್ಯ ಅವರು ಮಾರ್ಗದರ್ಶನದಲ್ಲಿ ತರಗತಿ ನಡೆಯಲಿದೆ.
ಗೋಣಿಕೊಪ್ಪಲು, ಜ. 11: ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಸ್ವಾಮಿ ವಿವೇಕಾನಂದರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪೊನ್ನಂಪೇಟೆ ಶ್ರೀ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆ ನಿರ್ದೇಶಕರಾದ ಪರಹಿತಾನಂದ ಸ್ವಾಮಿ ಮಹಾರಾಜ್ ಉದ್ಘಾಟಿಸಿ ಮಾತನಾಡಿ ವಿವೇಕಾನಂದರ ತತ್ವ ಆದರ್ಶಗಳು ಸಾರ್ವಕಾಲಿಕವಾಗಿದ್ದು ಯುವ ಜನತೆ ಅವರ ಜೀವನ ಚರಿತ್ರೆಯನ್ನು ಓದಿ ಅದನ್ನು ತಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಧನಂಜಯ ಆಗೋಳಿಕಜೆ ಮಾತನಾಡಿ ಭಾರತದ ಕೀರ್ತಿಯನ್ನು ಜಗತ್ತಿಗೆ ಪರಿಚಯಿಸಿದ ವೀರ ಸನ್ಯಾಸಿ ವಿವೇಕಾನಂದರು ದೇಶದ ಯುವಜನತೆಯ ಮೇಲೆ ಅತ್ಯಂತ ಹೆಚ್ಚಿನ ವಿಶ್ವಾಸವಿಟ್ಟಿದ್ದರು. ಶ್ರದ್ಧೆ, ಏಕಾಗ್ರತೆ, ಆತ್ಮವಿಶ್ವಾಸ, ದಿಟ್ಟತನವನ್ನು ಹೊಂದಿದ್ದ ಅವರ ಬದುಕಿನ ಒಂದೊಂದು ಘಟನೆಗಳೂ ಇಂದಿನ ಯುವಕರು ಸಾಧನೆಯ ಮೆಟ್ಟಿಲುಗಳನ್ನು ಏರಲು ದಾರಿ ದೀಪವಾಗುತ್ತವೆ ಎಂದರು.
ಈ ಸಂದರ್ಭ ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿ ರಾಷ್ಟ್ರ ಮಟ್ಟದ ಜೂನಿಯರ್ ಕಬಡ್ಡಿ ತಂಡಕ್ಕೆ ಆಯ್ಕೆಯಾದ ಆಟಗಾರ ಎಂ.ಎಸ್. ದಿಲ್ಶಾದ್ ಹಾಗೂ ಗೋಣಿಕೊಪ್ಪಲು ಕಾವೇರಿ ಕಲಾಸಿರಿ ತಂಡದ ಕಲಾವಿದ ಹಾಗೂ ಪತ್ರಕರ್ತ ಎಂ.ಎಂ. ಚನ್ನನಾಯಕ ಇವರಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಾಲಿಬೆಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಬಾರ ಪ್ರಾಂಶುಪಾಲ ಕೆ.ಕೆ. ಶೈನಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಸ್ಥಳೀಯ ವಿಜಯ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಪಿ. ನಾರಾಯಣ್, ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಬಿ.ಆರ್. ಗಾಯಿತ್ರಿ ಉಪಸ್ಥಿತರಿದ್ದರು. ಅಫ್ಸಾನ ಪ್ರಾರ್ಥಿಸಿ, ಎನ್ಎಸ್ಎಸ್ ಅಧಿಕಾರಿ ಶಿವದಾಸ್ ಸ್ವಾಗತಿಸಿದರು. ಉಪನ್ಯಾಸಕಿ ಕೆ.ಕೆ. ಸುನಿತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಾಪೆÇೀಕ್ಲು: ಹೊದವಾಡದ ಪ್ರೌಢಶಾಲೆಯ ವಿದ್ಯಾರ್ಥಿಗಳ ಜಾಗೃತಿ ಜಾಥಾ ನಡೆಯಿತು. 18 ವರ್ಷ ತುಂಬಿದ ಯುವಕ ಮತ್ತು ಯುವತಿಯರು ಮತದಾರರಾಗಲು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವಿದ್ಯಾರ್ಥಿಗಳು ಮನವಿ ಮಾಡಿದರು.
ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಾಥಾ ನಡೆಸಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ಅಪರ್ಣಾ, ಶಿಕ್ಷಕಿ ರೂಹಿ, ಶಿಕ್ಷಕ ದೇಸಾಯಿ ಮತ್ತಿತರರು ಇದ್ದರು.ಮಡಿಕೇರಿ: ಕರ್ನಾಟಕ ಅಕಾಡೆಮಿ ಆಫ್ ಮ್ಯಾಥಮ್ಯಾಟಿಕ್ಸ್ನಿಂದ ಚಳ್ಳಕೆರೆಯಲ್ಲಿ ನಡೆದಂತಹ ಮ್ಯಾಥಮ್ಯಾಟಿಕ್ಸ್ -2019 (ರಾಷ್ಟ್ರೀಯ ಗಣಿತ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ) ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯ 28 ವಿದ್ಯಾರ್ಥಿಗಳು ಭಾಗವಹಿಸಿ ಸಾಧನೆ ಮಾಡಿದ್ದಾರೆ.
ಈ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಕೆ.ಎಸ್. ನಮ್ರತಾ (3ನೇ ತರಗತಿ) ರಾಷ್ಟ್ರಮಟ್ಟದಲ್ಲಿ 8ನೇ ರ್ಯಾಂಕನ್ನು ಪಡೆದಿರುತ್ತಾಳೆ ಹಾಗೂ ರಾಜ್ಯಮಟ್ಟದಲ್ಲಿ ಯಾಲಿನಿ ಕೆ. (1ನೇ ತರಗತಿ) ಮೂರನೇ ರ್ಯಾಂಕ್ ಮತ್ತು ಅಲ್ಫಿಯಾ ಎಂ.ಆರ್. (4ನೇ ತರಗತಿ) ಆರನೇ ರ್ಯಾಂಕನ್ನು ಪಡೆದಿರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಯು.ಕೆ.ಜಿ.ಯ ಗಗನ್ ದೀಪ್ ರೈ ಬಿ.ವೈ. 2ನೇ ರ್ಯಾಂಕ್, ಜೀವಿಕಾ ಎ.ಡಿ. (6ನೇ ತರಗತಿ) 8ನೇ ರ್ಯಾಂಕನ್ನು ಪಡೆದಿದ್ದಾರೆ.
ತಾಲೂಕು ಮಟ್ಟದಲ್ಲಿ ತಶ್ರಿಪ್ ಎಂ.ಎ. (2ನೇ ತರಗತಿ) 4ನೇ ರ್ಯಾಂಕ್, ರಿಶಿಕಾ ಪಿ.ಜೆ. (5ನೇ ತರಗತಿ) 3ನೇ ರ್ಯಾಂಕ್ ಪಡೆದಿರುತ್ತಾರೆ. ಈ ಪರೀಕ್ಷೆಗೆ ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯರಾದ ಸುನಿತಾ ಹಾಗೂ ಶಿಕ್ಷಕಿ ಪ್ರತಿಮಾ ಅವರು ಮಾರ್ಗದರ್ಶನವನ್ನು ನೀಡಿದ್ದರು.
ನಾಪೋಕ್ಲು: ಚೆಯ್ಯಂಡಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಲಿಕಲಿ ಕೊಠಡಿಗೆ ನೆಲಹಾಸನ್ನು ಅಳವಡಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಶಾಲೆಯ ಹಳೆಯ ವಿದ್ಯಾರ್ಥಿ ಮುಂಡ್ಯೋಳಂಡ ತಮ್ಮಯ್ಯ ಶಾಲಾ ವಿದ್ಯಾರ್ಥಿಗಳಿಗೆ ಪೆನ್-ಪೆನ್ಸಿಲ್ ಮತ್ತು ಪೌಚ್ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿಳಿಯಂಡ್ರ ರತೀಶಕುಮಾರ್, ಶರಣು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಕೂಡಿಗೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಜ್ಞಾನವನ್ನು ವೃದ್ಧಿಸಿಕೊಳ್ಳುವುದು ಅವಶ್ಯಕ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಹೇಳಿದರು.
ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ ಕಾವೇರಿ ವಿದ್ಯಾರ್ಥಿ ಸಂಘದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಅಕ್ಷರ ಕಲಿತರೆ ಸಾಲದು. ಕಲಿತ ಅಕ್ಷರಗಳನ್ನು ಬಳಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು. ಜ್ಞಾನ ಬೌದ್ಧಿಕ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದರು.
ಜಿ.ಪಂ. ಸದಸ್ಯ ಹೆಚ್.ಆರ್. ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ಈ ಹಂತದಲ್ಲಿಯೇ ಗುರುಗಳು ಬೋಧಿಸಿದ್ದನ್ನು ಮನದಟ್ಟು ಮಾಡಿಕೊಂಡು ತಮ್ಮ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಸ್ಮರಣ ಸಂಚಿಕೆಯನ್ನು ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಬಿಡುಗಡೆ ಮಾಡಿದರು.
ಅಧ್ಯಕ್ಷತೆಯನ್ನು ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಲ್. ರಮೇಶ್ ವಹಿಸಿದ್ದರು. ಮೈಸೂರು ವಿಶ್ರಾಂತ ಪ್ರಾಂಶುಪಾಲ ಪ್ರೊ. ಹೆಚ್.ಸಿ. ಲೋಹಿತಾಶ್ವ ಹುಲ್ಲಟ್ಟಿ ಸಮಾರೋಪ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಹೆಬ್ಬಾಲೆ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಬಸವರಾಜು, ಕಾಲೇಜಿನ ಪ್ರಾಂಶುಪಾಲ ಧರ್ಮಪ್ಪ, ಉಪಾಧ್ಯಕ್ಷ ಸ್ವದೇಶ್ಕುಮಾರ್, ಕಾರ್ಯದರ್ಶಿ ಹೆಚ್.ಆರ್. ನಾಗೇಂದ್ರ, ತೊರೆನೂರು ಪ್ರಾ.ಕೃ.ಪ.ಸ. ಸಂಘ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಗುರುವಂದನಾ ಸಮಿತಿಯ ನಿರ್ದೇಶಕರಾದ ಸುಬ್ರಮಣಿ, ರಾಜನ್, ಮುಖ್ಯೋಪಾಧ್ಯಾಯ ಗಣೇಶ್, ಉದ್ಯಮಿ ಆರ್.ಆರ್. ಕುಮಾರ್, ಹೆಬ್ಬಾಲೆ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್, ಸಿಆರ್ಪಿ ಗಿರೀಶ್, ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಹೆಚ್.ಸಿ. ಜವರಪ್ಪ, ಹೆಚ್.ಜೆ. ಶ್ರೀಧರ್, ಹೆಚ್.ಪಿ. ಚಂದ್ರಕುಮಾರ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.
ಕೂಡಿಗೆ: ಸಾಮಾನ್ಯವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಿ ಹೊಸ ವರ್ಷಾಚರಣೆ ಮಾಡುವುದು ವಾಡಿಕೆ. ಆದರೆ ಕೂಡಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಗೊಳಿಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದರೊಂದಿಗೆ ಸ್ವಚ್ಛತಾ ಅಭಿಯಾನ ಮಾಡುವುದರೊಂದಿಗೆ ಹೊಸ ವರ್ಷಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು.
ಶಾಲೆಯ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ಪ್ರತಿ ದಿನವೂ ಹೊಸ ವರ್ಷವೆಂದು ಭಾವಿಸಿ ಜೀವಿಸಬೇಕು. ಪ್ರತಿ ದಿನವನ್ನು ಸಂತೋಷದಿಂದ ಸ್ವೀಕರಿಸಬೇಕು. ಹೊಸ ವರ್ಷಾಚರಣೆ ಎಂದರೆ ಕೇವಲ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸುವುದಲ್ಲ. ಪರಿಸರಕ್ಕೆ ಪೂರಕವಾಗುವ ಹಾಗೂ ಇತರರಿಗೆ ಸಹಾಯವಾಗುವ ಸಾರ್ಥಕ ಕೆಲಸಗಳನ್ನು ಮಾಡಲು ಇರುವ ಅತ್ಯುತ್ತಮ ಅವಕಾಶ. ಪರಿಸರಕ್ಕೆ ಕಸ ಎಸೆದು ನಂತರ ಯಾವಾಗಲೋ ಸ್ವಚ್ಛಗೊಳಿಸುವ ಬದಲು ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಹಾಗೂ ಸ್ವಚ್ಛತೆಯ ಬಗ್ಗೆ ಪೋಷಕರಲ್ಲಿ ಹಾಗೂ ತಮ್ಮ ನೆರೆಹೊರೆಯವರಲ್ಲಿ ಅರಿವು ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳು ಹೊಸ ಹುಮ್ಮಸ್ಸಿನಿಂದ ಶಾಲೆಯ ಆವರಣದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಶಿಕ್ಷಕರಾದ ಸಂತೋಷ್, ದಿನೇಶ್, ಮಂಜು, ಆಸಿಫ್, ನಾಗೇಂದ್ರ, ಹರಿಣಾಕ್ಷಿ, ಸುನಿತಾ ಮತ್ತಿತರರು ಹಾಜರಿದ್ದರು.