ಮಡಿಕೇರಿ, ಜ. 11: ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ತಾ. 15 ರಂದು ಭಾಗಮಂಡಲದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಗುವುದು ಎಂದು ಟ್ರಸ್ಟ್‍ನ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕೊಡವರಿಗೆ ಅಗಸ್ತ್ಯ ಮಹರ್ಷಿ ಹಾಗೂ ಅಮ್ಮಕೊಡವರಿಗೆ ಕಾವೇರಮ್ಮನ ಶಾಪವಿರುವುದಾಗಿ ಪುರಾಣದಲ್ಲೇ ಉಲ್ಲೇಖವಿದ್ದು, ಇದರ ವಿಮೋಚನೆಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ ಕೊಡವರು ಹಾಗೂ ಅಮ್ಮಕೊಡವರು ಸೇರಿ ಯಜುಃಸಂಹಿತಾ ಯಾಗವನ್ನು ಮಾಡಬೇಕೆಂದು ಪ್ರಶ್ನೆಗಳಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ 2014ರಲ್ಲಿ ಭಾಗಮಂಡಲದಲ್ಲಿ ಈ ಯಾಗ ಹಾಗೂ ಚಂಡಿಕಾ ಯಾಗವನ್ನು ನಡೆಸಲಾಗಿತ್ತು. ಅದಾದ ಬಳಿಕ ಲೋಕಕಲ್ಯಾಣಕ್ಕಾಗಿ ಈ ಕಾರ್ಯ ವನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಅಭಿಲಾಷೆಯಿಂದ ಪ್ರತಿವರ್ಷ ಮಕರ ಸಂಕ್ರಾಂತಿ ಸಂದರ್ಭದಲ್ಲಿ ವಿವಿಧ ದೈವಿಕ ಕೈಂಕರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ವಿವಿರಿಸಿದರು.

ಪ್ರಸಕ್ತ ವರ್ಷವೂ ತಾ.15ರಂದು ಬೆಳಿಗ್ಗೆ 7 ಗಂಟೆಯಿಂದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದ ಬಯಲು ಪ್ರದೇಶದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಶತರುದ್ರ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಾಡಿನ ಜನತೆ ಈ ದೈವೀ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ದೇವಯ್ಯ ಅವರು ಮನವಿ ಮಾಡಿದರು.

ಕಳೆದ ಬಾರಿ ಉತ್ತರ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಈ ಭಾಗದ 7 ಭದ್ರಕಾಳಿ ನೆಲೆಗಳಿರುವ ಪ್ರದೇಶದ ಜನರು ಸಾಮೂಹಿಕ ಪ್ರಾರ್ಥನೆ ಮಾಡುವಂತೆ ಸಲಹೆ ಕೇಳಿ ಬಂದ ಹಿನ್ನೆಲೆಯಲ್ಲಿ ತಾವುಗಳು ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಿದ್ದು, ಅದರಂತೆ 2019ರಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದರೂ, 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂಬುದನ್ನು ಸ್ಮರಿಸಿದ ದೇವಯ್ಯ ಅವರು, ಈಗಾಗಲೇ ಟ್ರಸ್ಟ್ ವತಿಯಿಂದ 7 ವರ್ಷಗಳಿಂದ ವಾರ್ಷಿಕವಾಗಿ ನಡೆಸಿಕೊಂಡು ಬರುತ್ತಿರುವ ದೇವತಾ ಕಾರ್ಯಗಳನ್ನು ಮುಂದುವರಿಸಬೇಕೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಟ್ರಸ್ಟ್‍ನ ಕಾರ್ಯದರ್ಶಿ ಮುಕ್ಕಾಟಿರ ಎ. ನಾಣಯ್ಯ, ಜಂಟಿ ಕಾರ್ಯದರ್ಶಿ ಚೆಯ್ಯಂಡ ಸತ್ಯ ಹಾಗೂ ಟ್ರಸ್ಟಿ ನಾಯಕಂಡ ಕೆ. ಅಯ್ಯಣ್ಣ ಉಪಸ್ಥಿತರಿದ್ದರು.