ಮಡಿಕೇರಿ, ಜ. 11: ನಗರದ ಗೌಡ ಸಮಾಜದ ಬಳಿಯ ಕಿರಿದಾದ ಜಾಗದಲ್ಲಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ್ಥಾಪನೆಗೆ ಮುಂದಾಗಿರುವ ಆಡಳಿತ ವ್ಯವಸ್ಥೆಯ ಕ್ರಮಕ್ಕೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಅವರು, ನಗರದಲ್ಲಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಭಿವೃದ್ಧಿ ಸೇರಿದಂತೆ ಜಿಲ್ಲೆಯಲ್ಲಿ ಸರಕಾರ ಕೈಗೊಂಡಿರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೊಡಗಿನ ಎಲ್ಲಾ ಗೌಡ ಸಮಾಜಗಳು ಹಾಗೂ ಕೊಡಗು ಗೌಡ ಸಮಾಜಗಳ ಒಕ್ಕೂಟ ಸ್ವಾಗತಿಸುತ್ತದೆ.

ಆದರೆ ಈಗಾಗಲೇ ಸ್ಥಾಪನೆಗೊಂಡು ಶತಮಾನ ಪೂರೈಸಿರುವ ಕೊಡಗು ಗೌಡ ವಿದ್ಯಾಸಂಘ ಹಾಗೂ ಕೊಡಗು ಗೌಡ ಸಮಾಜದ ಬಳಿ ಇರುವ ಕೇವಲ 25-30 ಸೆಂಟ್ ಜಾಗದಲ್ಲಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಆಕ್ಷೇಪವಿದೆ ಎಂದು ಹೇಳಿದರು.

ಕೊಡಗು ಗೌಡ ವಿದ್ಯಾ ಸಂಘ ಹಾಗೂ ಕೊಡಗು ಗೌಡ ಸಮಾಜದ ಕಟ್ಟಡಗಳಲ್ಲಿ ಗೌಡ ಜನಾಂಗದ ಕಾರ್ಯಕ್ರಮಗಳಲ್ಲದೆ ಹಲವಾರು ಸಭೆ, ಸಮಾರಂಭಗಳು ಪ್ರತಿನಿತ್ಯ ನಡೆಯುತ್ತಿರುತ್ತವೆ.

ಅಲ್ಲದೆ ವಿವಾಹ ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ವಾಲಗ, ಧ್ವನಿ ವರ್ಧಕಗಳ ಬಳಕೆ ಮಾಡಲಾ ಗುವುದಲ್ಲದೆ, ಕೆಲವು ಸಂದರ್ಭಗಳಲ್ಲಿ ಕೊಡಗಿನ ಸಂಪ್ರದಾಯದಂತೆ ಮದ್ಯ ಸರಬರಾಜಿನ ವ್ಯವಸ್ಥೆಯೂ ಇರುತ್ತದೆ. ಮತ್ತೊಂದೆಡೆ ಅಗಲ ಕಿರಿದಾಗಿರುವ ಗುಡ್ಡೆಮನೆ ಅಪ್ಪಯ್ಯ ಗೌಡ ರಸ್ತೆಯಲ್ಲಿ ಈಗಾಗಲೇ ವಾಹನ ದಟ್ಟಣೆ ಹೆಚ್ಚಿರುವುದರಿಂದ ಯಾವುದೇ ಕಾರಣಕ್ಕೂ ಈ ಪ್ರದೇಶ ಕಾಲೇಜು ನಿರ್ಮಾಣಕ್ಕೆ, ಅದರಲ್ಲೂ ಮಹಿಳಾ ಕಾಲೇಜ್‍ಗೆ ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಮಹಿಳಾ ಕಾಲೇಜ್‍ನ್ನು ಸರ್ಕಾರದ ನಿಯಮದಂತೆ ವಿಸ್ತಾರವಾದ, ಎಲ್ಲಾ ಮೂಲಭೂತ ಸೌಕರ್ಯವಿರುವ ಸೂಕ್ತ ಜಾಗದಲ್ಲಿ ನಿರ್ಮಾಣ ಮಾಡಲಿ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳಿಗೆ ಹಾಗೂ ನಾಲ್ವರು ಶಾಸಕರಿಗೆ ಕಳೆದ ಸಾಲಿನ ಜುಲೈ ತಿಂಗಳಿನಲ್ಲೇ ಮನವಿ ಸಲ್ಲಿಸಿ ಮಹಿಳಾ ಕಾಲೇಜ್‍ಗೆ ಈ ಪ್ರದೇಶ ಸೂಕ್ತವಲ್ಲವೆಂದು ತಿಳಿಸಲಾಗಿತ್ತು. ಆದರೆ ನಮ್ಮ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಒಂದು ವೇಳೆ ಜನಾಂಗದ ಅಭಿವೃದ್ಧಿಗೆ ಅಡಚಣೆ ಮಾಡುವ ಉದ್ದೇಶ ದಿಂದಲೇ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮುಂದಾದಲ್ಲಿ ಮುಂದಿನ ಚುನಾವಣೆಯಲ್ಲಿ ಗೌಡ ಜನಾಂಗ ಅದಕ್ಕೆ ಸೂಕ್ತ ಪ್ರತ್ಯುತ್ತರವನ್ನು ನೀಡಲಿದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ಸಂಘದ ಅಧ್ಯಕ್ಷ ಪೇರಿಯನ ಜಯಾನಂದ ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ, ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಹಾಗೂ ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಉಪಸ್ಥಿತರಿದ್ದರು.