ಸೋಮವಾರಪೇಟೆ, ಜ. 11: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿನ ಸಾಹಿತ್ಯ ಪರಿಷತ್ ಭವನದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು, ರಾಷ್ಟ್ರಭಕ್ತಿಯ ಗಾನ ಸುಧೆ ಹರಿಸಿದರು.

ದೇಶದ ನೆಲ, ಜಲ, ಸೈನಿಕ ಪರಂಪರೆ, ಸ್ವಾತಂತ್ರ್ಯ ಹೋರಾಟ ಗಾರರು, ರಾಷ್ಟ್ರದ ಮಹಾನ್ ನಾಯಕರು, ರೈತರ ಕುರಿತಾಗಿ ಮೂಡಿಬಂದ ಗೀತೆಗಳನ್ನು ಒಬ್ಬರಿಗಿಂತ ಮತ್ತೊಬ್ಬರು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿ ಚಪ್ಪಾಳೆ ಗಿಟ್ಟಿಸಿದರು.

ಇದಕ್ಕೂ ಮುನ್ನ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಹಿರಿಯ ವಕೀಲ ಹೆಚ್.ಸಿ. ನಾಗೇಶ್ ಅವರು ಮಾತನಾಡಿ, ಶಾಲಾ ಮಕ್ಕಳು ಪ್ರಾರಂಭಿಕ ಹಂತದಲ್ಲಿಯೇ ಸ್ಪರ್ಧಾತ್ಮಕ ಮನೋಭಾವನೆ ಬೆಳಸಿಕೊಂಡರೆ ಉತ್ತಮ ಜ್ಞಾನದೊಂದಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ ಎಂದರು.

ಮಕ್ಕಳು ಸೃಜನಾತ್ಮಕ ಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವದರೊಂದಿಗೆ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಯಲ್ಲೂ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಸ್.ಡಿ ವಿಜೇತ್ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಕಾರ್ಯದರ್ಶಿಗಳಾದ ಕೆ.ಎ. ಆದಮ್, ಎಲ್.ಎಂ.ಪ್ರೇಮ, ಪದಾಧಿಕಾರಿಗಳಾದ ಕವನ್ ಕಾರ್ಯಪ್ಪ, ಹೆಚ್.ಬಿ. ಜಯಮ್ಮ, ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಸುಮಾ ಸುದೀಪ್, ಕೆ.ಪಿ. ಸುದರ್ಶನ್, ನ.ಲ. ವಿಜಯ, ಶರ್ಮಿಳಾ ರಮೇಶ್, ನಳಿನಿ ಗಣೇಶ್, ಎ.ಪಿ. ವೀರರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಂತರ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ “ಬಲಿಷ್ಠ ಭಾರತ ನಿರ್ಮಾಣದಲ್ಲಿ ಯುವಜನತೆ ಪಾತ್ರ” ಎಂಬ ವಿಷಯದಲ್ಲಿ ಪ್ರಬಂಧ, ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಾಷ್ಟ್ರ ಧ್ವಜ ಸ್ತಂಭ ಸಹಿತ ಚಿತ್ರ ಬಿಡಿಸುವ ಸ್ಪರ್ಧೆ, ದೇಶಭಕ್ತಿ ಗೀತೆಗಾಯನ ಸ್ಪರ್ಧೆ ನಡೆಯಿತು.