ಮಡಿಕೇರಿ, ಜ. 11: ಕೊಡಗಿನಲ್ಲಿ ಹವಮಾನ ವ್ಯತ್ಯಾಸದಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭ; ಪೌಷ್ಠಿಕ ಆಹಾರವೂ ಆಗಿರುವ ಅಣಬೆ ಬೇಸಾಯದಿಂದ ಆರ್ಥಿಕ ಸುಧಾರಣೆ ಕಂಡುಕೊಳ್ಳಲು ಸಾಧ್ಯವೆಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಭಿಪ್ರಾಯಪಟ್ಟರು.

ಮಡಿಕೇರಿ ತಾಲೂಕು ಪಂಚಾಯಿತಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಹಾಗೂ ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೊಡಗಿನಲ್ಲಿ ಕಾಫಿ, ಏಲಕ್ಕಿ, ಕಾಳುಮೆಣಸು ಮುಂತಾದ ಬೆಳೆಗ ಳೊಂದಿಗೆ; ಪ್ರಾಕೃತಿಕ ಹಾನಿಯಿಂದ ಭತ್ತಕ್ಕೂ ತೊಡಕು ಉಂಟಾಗಿರುವ ಕಾರಣ; ಸರಕಾರಗಳ ಸಹಾಯ ಧನದೊಂದಿಗೆ ಅಣಬೆ ಬೆಳೆಯಲು ಮುಂದಾಗು ವದರೊಂದಿಗೆ; ಆರ್ಥಿಕ ಸುಧಾರಣೆ ಕಂಡುಕೊಳ್ಳುವಂತೆ ಅವರು ಸಲಹೆಯಿತ್ತರು.

ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ವ್ಯಾಪಕ ಮಳೆಯಾಗು ತ್ತಿರುವುದರಿಂದ ಕಾಫಿ ಪಸಲು ಕೈಗೆ ಸಿಗುತ್ತಿಲ್ಲ. ಆದ್ದರಿಂದ ಕಾಳು ಮೆಣಸು, ಕಿತ್ತಳೆ, ಬಾಳೆ, ಅಣಬೆ, ಹೀಗೆ ಉಪ ಕೃಷಿ ಕೈಗೊಂಡಾಗ ಆರ್ಥಿಕವಾಗಿ ಕೈ ಹಿಡಿಯಲಿವೆ ಎಂದು ಅಧ್ಯಕ್ಷರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅವರು, ರೈತರು ಬೇಸಾಯದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಕಾಫಿ, ಭತ್ತ, ಅಡಿಕೆ ಬೆಳೆಯನ್ನು ಬೆಳೆಯುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ ಬೆಳೆಯುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವಂತಾಗಬೇಕು. ರೈತರು ಮಿಶ್ರ ಬೆಳೆ ಬೆಳೆಯಬೇಕು. ಅಣಬೆ ಬೆಳೆ ಕೂಡ ಇದಕ್ಕೆ ಪೂರಕವಾಗಿದೆ ಎಂದು ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ರಾಯ್ ತಮ್ಮಯ್ಯ ಸಲಹೆ ನೀಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಎಸ್.ಚಂದ್ರಶೇಖರ್ ಮಾತನಾಡಿ ಅಣಬೆ ಪೌಷ್ಟಿಕ ಆಹಾರವಾಗಿದ್ದು, ಪ್ರೋಟೀನ್ ಅಂಶ ಹೆಚ್ಚಾಗಿದೆ. ಆದ್ದರಿಂದ ಅಣಬೆಯನ್ನು ಉಪ ಕಸುಬು ಆಗಿ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಅಣಬೆ ಬೇಸಾಯಕ್ಕೆ 1.50 ಲಕ್ಷ ರೂ.ವರೆಗೆ ಸಹಾಯಧನ ಕಲ್ಪಿಸಲಾಗುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳುವಂತಾಗ ಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.

ಬೇಸಾಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ಬಸವಲಿಂಗಯ್ಯ ಮಾತನಾಡಿ ಭತ್ತ ಬೇಸಾಯ, ಜೇನು ಕೃಷಿ ಜೊತೆಗೆ ಅಣಬೆ ಬೇಸಾಯದಲ್ಲಿ ಕೃಷಿಕರು ತೊಡಗಿಸಿಕೊಳ್ಳು ವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಅರಣ್ಯ ಕಾಲೇಜಿನ ಡಾ. ಕೆಂಚಾರೆಡ್ಡಿ, ಮಡಿಕೇರಿ ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಕವಿತ ಭೀಮಯ್ಯ, ತೋಟಗಾರಿಕಾ ಸಹಾಯಕ ಪ್ರಾಧ್ಯಾಪಕಿ ಡಾ. ವಿದ್ಯಾಶ್ರೀ, ಹಾರ್ಟಿ ಕ್ಲಿನಿಕ್ ವಿಷಯ ತಜ್ಞ ಡಾ. ಬಿ.ಸಿ. ನಾಚಪ್ಪ, ಇತರರು ಇದ್ದರು. ಸಹಾಯಕ ತೋಟಗಾರಿಕ ಅಧಿಕಾರಿ ಎಸ್.ವಿ. ರಾಮದಾಸ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.