ಮಡಿಕೇರಿ, ಜ. 11: ಭಾರತದ ಸಂವಿಧಾನ ಪ್ರಕಾರ; ದೇಶದಲ್ಲಿ ಕೇಂದ್ರ ಸರಕಾರವು ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಿದ್ದು; ಇದೀಗ ಅದನ್ನು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರ ಚಿತಾವಣೆಯಿಂದ ಮುಸ್ಲಿಮರು ವಿರೋಧಿಸುತ್ತಿರುವದು ಅಕ್ಷಮ್ಯ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.
ನಗರದ ಬಾಲಭವನದಲ್ಲಿ ಬಿಜೆಪಿ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಜಾಗೃತಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ; ಸಮಾರೋಪ ಭಾಷಣ ಮಾಡಿದ ಬೋಪಯ್ಯ ಅವರು; ಭಾರತವು ಸ್ವಾತಂತ್ರ್ಯ ಪಡೆದ ಬೆನ್ನಲ್ಲೇ ಅಂದಿನ ಕೇಂದ್ರ ಸರಕಾರ ಪ್ರಧಾನಿ ನೆಹರು ಅವರ ನೇತೃತ್ವದಲ್ಲಿ ಭಾರತೀಯ ಪೌರತ್ವ ಕಾಯ್ದೆ ಜಾರಿಗೊಳಿಸಿದ್ದಾಗಿ ಉಲ್ಲೇಖಿಸಿದರು. ಅನಂತರದಲ್ಲಿ ಕಾಲ ಕಾಲಕ್ಕೆ ಈ ಕಾಯ್ದೆ ತಿದ್ದುಪಡಿಯಾಗಿದ್ದು; ಪ್ರಸ್ತುತ ಕೇಂದ್ರ ಸರಕಾರ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಪ್ಘಾನಿಸ್ತಾನ ದೇಶಗಳ ಅಲ್ಪಸಂಖ್ಯಾತ ಶೋಷಿತರ ರಕ್ಷಣೆಗಾಗಿ ಮರು ತಿದ್ದುಪಡಿ ಮಾಡಿದೆ ಎಂದು ನೆನಪಿಸಿದರು.
ಯಾರೊಬ್ಬರ ಹಕ್ಕು ಕಸಿದಿಲ್ಲ : ಕಳೆದ ಡಿ. 9 ರಂದು ಜಾರಿ ಗೊಳಿಸಿರುವ ಪೌರತ್ವ ಕಾಯ್ದೆಯನ್ನು ಭಾರತದ ಉಭಯ ಸಂಸತ್ತು ಅಂಗೀಕರಿಸಿದ್ದು; ರಾಷ್ಟ್ರಪತಿಗಳ ಸಮ್ಮತಿಯೊಂದಿಗೆ ಅನುಷ್ಠಾನ ಗೊಂಡಿದೆ ಎಂದು ಬೊಟ್ಟು ಮಾಡಿದ ಅವರು; ಇಂತಹ ಪರಿಸ್ಥಿತಿಯಲ್ಲಿ ದೇಶದ ಅಮಾಯಕ ಮುಸ್ಲಿಮರನ್ನು ದಿಕ್ಕುತಪ್ಪಿಸುವ ರಾಜಕೀಯ ಷಡ್ಯಂತ್ರ ನಡೆದಿದೆ ಎಂದು ಟೀಕಿಸಿದರು.
2016ರಲ್ಲಿ ತಿದ್ದುಪಡಿ : ಪೌರತ್ವ ಕಾಯ್ದೆಗೆ 2016ರಲ್ಲಿ ತಿದ್ದುಪಡಿ ಯೊಂದಿಗೆ; ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳ ಜಂಟಿ ಸದನ ಸಮಿತಿ ಪರಿಶೀಲನೆ ಬಳಿಕ; ಲೋಕಸಭಾ ಚನಾವಣೆ ಎದುರಾದ ಹಿನ್ನೆಲೆ; ಕಳೆದ ಡಿಸೆಂಬರ್ನಲ್ಲಿ ಹೊಸ ಸಂಸತ್ತು ಅಂಗೀಕಾರ ಪಡೆದಿದ್ದಾಗಿಯೂ ಕೆ.ಜಿ. ಬೋಪಯ್ಯ ನೆನಪಿಸಿದರು.
ದೇಶ ವಿರೋಧಿ ಕ್ರಮ : ಈ ಕಾಯ್ದೆಯನ್ನು ವಿರೋಧಿಸುವ ಪಶ್ಚಿಮ ಬಂಗಾಳ ಹಾಗೂ ಕೇರಳ ಸರಕಾರದ ಮುಖ್ಯಮಂತ್ರಿಗಳ ಸಹಿತ; ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೊಳಿಸಿ ಪ್ರತಿಭಟಿಸುವದು ದೇಶ ವಿರೋಧಿ ಕ್ರಮ ಎಂದು ಅಭಿಪ್ರಾಯಪಟ್ಟ ಅವರು; ಇಂತಹವರ ವಿರುದ್ಧ ಕಾನೂನಿನಂತೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ದ್ವಂದ್ವ ನಿಲುವು : ಬಿಜೆಪಿ ರಾಜ್ಯ ಕಾರ್ಯದರ್ಶಿ ಅಪ್ಪಚೊಟ್ಟೋಳಂಡ ಮನು ಮುತ್ತಪ್ಪ; ಕೇಂದ್ರ ಸರಕಾರ ಜಾರಿಗೊಳಿಸಿರುವ ಪೌರತ್ವ ಕಾಯ್ದೆಯಿಂದ
(ಮೊದಲ ಪುಟದಿಂದ) ಯಾವೊಬ್ಬ ಭಾರತೀಯನಿಗೂ ತೊಂದರೆ ಇಲ್ಲದಿದ್ದರೂ ಮತಬ್ಯಾಂಕ್ ರಾಜಕಾರಣಕ್ಕಾಗಿ ದ್ವಂದ್ವ ನಿಲುವಿನ ಮಂದಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಹಿಂದಿನ ಕಾಂಗ್ರೆಸ್ ಆಳ್ವಿಕೆಯಲ್ಲೂ ಈ ಕಾಯ್ದೆಗೆ ಸಾಕಷ್ಟು ಬಾರಿ ತಿದ್ದುಪಡಿ ತರಲಾಗಿದೆ ಎಂದು ರಾಜ್ಯ ಬಿಜೆಪಿ ಬಿಡುಗಡೆ ಗೊಳಿಸಿರುವ ಕೈಪಿಡಿ ಉಲ್ಲೇಖಿಸಿ ಅವರು ಮಾಹಿತಿ ನೀಡಿದರು.
ಪೌರತ್ವ ಪ್ರೋತ್ಸಾಹಿಸಲು ಕರೆ : ಕೇಂದ್ರ ಸರಕಾರವು ಭಾರತದ ಸುಭದ್ರತೆಗಾಗಿ ಜಾರಿಗೊಳಿಸಿರುವ ಪೌರತ್ವ ಕಾಯ್ದೆಯನ್ನು ಎಲ್ಲರೂ ಅರ್ಥೈಸಿಕೊಂಡು ಬೆಂಬಲಿಸುವಂತೆ ಹಿರಿಯ ನಾಗರಿಕ ಜಿ.ಟಿ. ರಾಘವೇಂದ್ರ ಅವರು ಕರೆ ನೀಡಿದರು. ದೇಶದ ಯಾವೊಬ್ಬ ಮುಸಲ್ಮಾನ ಸೇರಿದಂತೆ ಯಾವದೇ ಮತ, ಧರ್ಮೀಯರಿಗೆ ತೊಡಕಿಲ್ಲದ ಈ ಕಾಯ್ದೆಯ ವಿರುದ್ಧ ಕಾಂಗ್ರೆಸ್ ದುಷ್ಟಶಕ್ತಿಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಸಹಿಸುತ್ತಿಲ್ಲ : ಆರು ವರ್ಷ ದೇಶಕ್ಕೆ ಉತ್ತಮ ಆಡಳಿತ ದೊಂದಿಗೆ ಎಲ್ಲ ಭಾರತೀಯರಿಗೆ ಸಮಾನ ಬದುಕು ಕಲ್ಪಿಸಿರುವ ಕೇಂದ್ರ ಸರಕಾರದ ವಿರುದ್ಧ; ಯಾವದೇ ದೋಷ ಹುಡುಕುವಲ್ಲಿ ವಿಫಲವಾಗಿರುವ ಕಾಂಗ್ರೆಸ್ ಪೌರತ್ವ ಕಾಯ್ದೆ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದೆ ಎಂದು ಟೀಕಿಸಿದ ಮಾಜಿ ನಗರಸಭಾ ಸದಸ್ಯೆ ಮೋಂತಿಗಣೇಶ್, ಪ್ರಧಾನಿ ಮೋದಿ ಸರಕಾರದ ಏಳಿಗೆಯನ್ನು ಸಹಿಸುತ್ತಿಲ್ಲ ಎಂದು ಜರೆದರು.
ಮತಬ್ಯಾಂಕ್ ರಾಜಕಾರಣ : ಕೊಡಗು ಜಿಲ್ಲಾ ಬಿಜೆಪಿಯ ಅಧ್ಯಕ್ಷ ಬಿ.ಬಿ. ಭಾರತೀಶ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ; ದೇಶದಲ್ಲಿ ಸಮಾನ ನಾಗರಿಕ ಕಾಯ್ದೆ ಜಾರಿಗೆ ಆಗ್ರಹಿಸಿದರು. ಪೌರತ್ವ ಕಾಯ್ದೆಯನ್ನು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಮತಬ್ಯಾಂಕ್ಗಾಗಿ ವಿರೋಧಿಸುತ್ತಾ; ದೇಶದ ಮುಸ್ಲಿಮರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರಲ್ಲದೆ; ಕುಶಾಲನಗರ ಹಾಗೂ ಇತರೆಡೆ ಮುಸ್ಲಿಮರ ಮನೆ ಬಾಗಿಲಿಗೆ ‘ಪೌರತ್ವ ಕಾಯ್ದೆ ನಮಗೆ ಅರಿವಿದೆ; ಬೋಧಿಸಲು ಬರಬೇಡಿ’ ಎಂದು ಭಿತ್ತಿಪತ್ರ ಪ್ರದರ್ಶಿಸುತ್ತಿದ್ದಾರೆ ಎಂದು ಬೊಟ್ಟು ಮಾಡಿದರು. ಅಲ್ಲದೇ ಇದೇ ಜನ ಬೀದಿಯಲ್ಲಿ ವಿರುದ್ಧ ಕೂಗಾಡುತ್ತಿದ್ದಾರೆ ಎಂಬದಾಗಿ ಟೀಕಿಸಿದರು.
ಮೋದಿ - ಶಾ ಗುರಿ : ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ವಿರೋಧಿಗಳು ಗುರಿಯಾಗಿಸಿದ್ದು; ಪೌರತ್ವ ಕಾಯ್ದೆಯನ್ನು ಕಾಶ್ಮೀರದಲ್ಲಿ 370ನೇ ವಿಧಿ, ತ್ರಿವಳಿ ತಲಾಕ್, ಅಯೋಧ್ಯಾ ವಿವಾದ ಇತ್ಯರ್ಥದ ಬೆನ್ನಲ್ಲೇ ಜಾರಿಗೊಳಿಸಿದ್ದರಿಂದ ಈ ಮಂದಿಗೆ ಸಹಿಸಲು ಆಗುತ್ತಿಲ್ಲವೆಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಬಿ. ದೇವಯ್ಯ ಅಭಿಪ್ರಾಯಪಟ್ಟರು. ಅಲ್ಲದೆ ದೇಶದಲ್ಲಿ ಸಮಾನ ನಾಗರಿಕ ಕಾನೂನು ಜಾರಿಯಿಂದ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆಂದು ಪ್ರತಿಪಾದಿಸಿದರು.
ದೇಶಹಿತಕ್ಕೆ ಪೂರಕ : ಪೌರತ್ವ ಕಾಯ್ದೆ ಜಾರಿಯಿಂದ ಭವಿಷ್ಯದಲ್ಲಿ ಭಾರತದ ಹಿತಕ್ಕೆ ಒಳಿತಾಗಲಿದ್ದು; ಪಾಕಿಸ್ತಾನ, ಬಾಂಗ್ಲಾ, ಅಪ್ಘಾನಿಸ್ತಾನದ ಅಲ್ಪಸಂಖ್ಯಾತರಿಗೆ ರಕ್ಷಣೆ ದೊರೆಯಲಿದೆ ಎಂದು ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ರವಿಕಾಳಪ್ಪ, ನಾಪೋಕ್ಲುವಿನ ರಮೇಶ್ ಮುದ್ದಯ್ಯ, ಉಪನ್ಯಾಸಕ ಶ್ರೀಧರ ಹೆಗಡೆ ಮೊದಲಾದವರು ಪ್ರತಿಪಾದಿಸಿದರು. ಬಿಜೆಪಿ ಪ್ರಮುಖ ಎಂ.ಕೆ. ಅರುಣ್ಕುಮಾರ್ ಕಾರ್ಯಕ್ರಮ ನಿರೂಪಿಸಿ; ಮಹಿಳಾ ಕಾರ್ಯಕರ್ತೆ ಪ್ರೇಮಾ ರಾಘವಯ್ಯ ಪ್ರಾರ್ಥನೆಯೊಂದಿಗೆ; ಅನಿತಾ ಪೂವಯ್ಯ ಸ್ವಾಗತಿಸಿದರು.
ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್, ಪ್ರಮುಖರಾದ ಡಾ. ನವೀನ್ ಕುಮಾರ್, ವಿ.ಕೆ. ಲೋಕೇಶ್, ಬಿ.ಕೆ. ಜಗದೀಶ್, ಕಾಳಚಂಡ ಅಪ್ಪಣ್ಣ, ಮನು ಮಹೇಶ್, ಸವಿತಾ ರಾಖೇಶ್ ಮತ್ತಿತರರು ಪಾಲ್ಗೊಂಡಿದ್ದರು.