ಮಡಿಕೇರಿ, ಜ.11: ಮಡಿಕೇರಿಯ ದಿ. ಜನರಲ್ ತಿಮ್ಮಯ್ಯ ಅವರ “ಸನ್ನಿ ಸೈಡ್” ನಿವಾಸದ ಪರಿವರ್ತಿತ ಸಂಗ್ರಹಾಲಯಕ್ಕೆ ಇದೀಗ ಮಿಗ್-21 ಯುದ್ಧ ವಿಮಾನ ಸೇರ್ಪಡೆಗೊಂಡಿದೆ. ನಿವೃತ್ತ ಏರ್ ಮಾರ್ಷಲ್ ಕೆ.ಸಿ. ನಂದ ಕಾರ್ಯಪ್ಪ ಅವರ ಪ್ರಯತ್ನದಿಂದ ಅಲಾಹಾಬಾದ್ ನಿಂದ ಈ ವಿಮಾನವು ಬೃಹತ್ ಲಾರಿ ಮೂಲಕ ಮಡಿಕೇರಿಗೆ ತರಲ್ಪಟ್ಟಿದೆ.ಈ ಬಗ್ಗೆ ನಂದ ಕಾರ್ಯಪ್ಪ ಅವರಲ್ಲಿ “ಶಕ್ತಿ” ಮಾಹಿತಿ ಬಯಸಿದಾಗ, ಈ ವಿಮಾನದ ಬಿಡಿ ಭಾಗಗಳನ್ನು ಇದೀಗ ತರಲಾಗಿದೆ. ಇವುಗಳನ್ನೆಲ್ಲ ಒಟ್ಟುಗೂಡಿಸಿ ವಿಮಾನದ ಪೂರ್ಣ ರಚನೆಯನ್ನು ಸಿದ್ಧಪಡಿಸಬೇಕಾಗಿದೆ. ಇದಕ್ಕಾಗಿ ಹೈದರಾಬಾದ್‍ನಿಂದ ವಿಶೇಷ ತಂಡವೊಂದು ಸೋಮವಾರ ಮಡಿಕೇರಿಗೆ ಆಗಮಿಸಲಿದೆ. ಇದನ್ನು ಜೋಡಿಸಲು 10-15 ದಿನಗಳ ಕಾಲಾವಕಾಶ ಬೇಕಾಗಿದೆ ಎಂದು ಅವರು ಮಾಹಿತಿ ಇತ್ತರು. ಪಾಕ್ ಸಮರದಲ್ಲಿ ಪಾತ್ರಈ ಕುರಿತಾಗಿ ಹೆಚ್ಚಿನ ಮಾಹಿತಿ ಬಯಸಿದಾಗ ನಿವೃತ್ತ ಮೇಜರ್ ಬಿದ್ದಂಡ ನಂದ ನಂಜಪ್ಪ ಅವರು ರಷ್ಯಾ ತಯಾರಿತ ಮಿಗ್-21 ಯುದ್ಧ ವಿಮಾನವು
(ಮೊದಲ ಪುಟದಿಂದ) ಪಾಕಿಸ್ತಾನದ ವಿರುದ್ಧ ಸಮರದಲ್ಲಿ 1971 ರಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದರು. ಆಗ ಇದರ ಬೆಲೆ 72 ಲಕ್ಷಗಳಾಗಿತ್ತು. ಆ ಬಳಿಕ ಮಿಗ್-27 ರ ವರೆಗೂ ಈ ವಿಮಾನ ಆಧುನೀಕರಣಗೊಳ್ಳುತ್ತಾ ಹೋಯಿತು. ಈ ಎಲ್ಲ ಯುದ್ಧ ವಿಮಾನಗಳ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಮಿಗ್-29 ಹಾಗೂ ಮಿಗ್-30 ಪ್ರಾಯೋಗಿಕವಾಗಿ ಚಾಲನೆಯ ಲ್ಲಿದೆ. ಈ ಆಧುನೀಕೃತ ಯುದ್ಧ ವಿಮಾನಗಳನ್ನು ಬಳಸಿ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಯನ್ನು ಕೂಡ ಭಾರತ ಹಾರಿಸಬಹುದಾಗಿದೆ ಎಂದು ನಂಜಪ್ಪ ಮಾಹಿತಿಯಿತ್ತರು.
ಸದ್ಯದಲ್ಲಿಯೇ ಮತ್ತೊಂದು ಟ್ಯಾಂಕರ್
ಈಗಾಗಲೇ ಭಾರತದ ಸಮರ ಟ್ಯಾಂಕರ್ ಒಂದು ಸಂಗ್ರಹಾಲಯಕ್ಕೆ ಸೇರ್ಪಡೆಗೊಂಡಿದ್ದು ಇದೀಗ ಮತ್ತೊಂದು ಟ್ಯಾಂಕರ್ ಸದ್ಯದಲ್ಲಿಯೇ ಸಂಗ್ರಹಾಲಯಕ್ಕೆ ಬರಲಿದೆ. ಈ ಟ್ಯಾಂಕರ್ ಅನ್ನು ಹೊರನೋಟ ದಲ್ಲಿಯೇ ಆಕರ್ಷಣೆಗೋಸ್ಕರ ಸಂಗ್ರಹಾಲಯದ ದ್ವಾರದಿಂದ ಹೊರಭಾಗದಲ್ಲಿ ಇರಿಸಲಾಗುತ್ತದೆ. ಅಲ್ಲದೆ 2 “ಆರ್ಟಿಲರಿ ಗನ್” ಗಳನ್ನು ಕೂಡ ತರಿಸಲಾಗುತ್ತಿದೆ. 32 ಅಡಿ ಉದ್ದ, 12 ಅಡಿ ಅಗಲದ ಈ ಗನ್ ಒಂದನ್ನು ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯದಲ್ಲಿ ಹಾಗೂ ಮತ್ತೊಂದನ್ನು ಗೋಣಿಕೊಪ್ಪಲುವಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸ್ಮಾರಕ ಸ್ಥಳದಲ್ಲಿ ಇರಿಸಲಾಗುತ್ತದೆ ಎಂದು ಅವರು ಮಾಹಿತಿಯಿತ್ತರು.