ಮಡಿಕೇರಿ, ಜ. 10: ತಾ.10ರ ಶುಕ್ರವಾರ ಬೆಳಿಗ್ಗೆ ಸುಮಾರು 6.30ರ ಸಮಯವಾಗಿತ್ತು. ನಸುಕು ಹರಿದಿದ್ದರೂ ಈ ಪ್ರದೇಶದಲ್ಲಿ ದಟ್ಟವಾಗಿ ಮಂಜು ಆವರಿಸಿತ್ತು. ಮಂಜು ಮುಸುಕಿದ ವಾತಾವರಣದ ನಡುವೆ ಮಹಿಳೆಯೋರ್ವರು ಎಂದಿನಂತೆ ‘ವಾಕಿಂಗ್’ನಲ್ಲಿ ನಿರತರಾಗಿದ್ದರು. ಇದು ಹೆದ್ದಾರಿ ರಸ್ತೆಯಾಗಿದ್ದರಿಂದ ಅಂತಹ ಆತಂಕ ಪಡುವ ಅಗತ್ಯವಿರದ್ದರಿಂದ ತಮ್ಮ ಪಾಡಿಗೆ ಇವರು ಹೆಜ್ಜೆ ಹಾಕುತ್ತಿದ್ದರು.ಆದರೆ; ಮುಂದೆರಗಿದ್ದು ದಿಢೀರ್ ಆಘಾತ. ಮುಖ್ಯ ರಸ್ತೆಯಲ್ಲೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿಬಿಟ್ಟಿತ್ತು ಒಂದು ರೀತಿಯಲ್ಲಿ ಮಹಿಳೆ ಹಾಗೂ ಸಲಗ ಎದುರು - ಬದುರಾದಂತಹ ಸನ್ನಿವೇಶ. ಗಾಬರಿಗೊಂಡ ಮಹಿಳೆ ಬದುಕಿದೆಯಾ ಬಡಜೀವವೇ ಎಂಬಂತೆ (ಮೊದಲ ಪುಟದಿಂದ) ಬೊಬ್ಬೆ ಹಾಕಿ ಓಡಲಾರಂಬಿಸಿದರೆ; ಸಲಗವೂ ಘೀಳಿಡುತ್ತಾ ಇವರನ್ನು ಅನತಿ ದೂರ ಅಟ್ಟಾಡಿಸಿತ್ತು. ತಿರುಗಿ ನೋಡದೆ ಓಡಿದ ಮಹಿಳೆ ಸ್ವಲ್ಪದೂರದಲ್ಲಿ ಆಶ್ರಯವೆಂಬಂತೆ ಕಂಡು ಬಂದ ಮನೆಯೊಂದರ ಒಳಗೆ ಓಡಿ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.
ಇದು ನಡೆದಿದ್ದು ವೀರಾಜಪೇಟೆ - ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಬರುವ ಬಿಟ್ಟಂಗಾಲ ಅಂಬಟ್ಟಿಯಲ್ಲಿ. ಅಲ್ಲಿನ ನಿವಾಸಿ ಚೇಂದ್ರಿಮಾಡ ರಾಣಿಪೊನ್ನಪ್ಪ ಅವರು ತಮ್ಮ ಎಂದಿನ ವಾಕಿಂಗ್ನಲ್ಲಿ ನಿರತರಾಗಿದ್ದಾಗ ಈ ಘಟನೆ ನಡೆದಿದೆ. ಈ ಸ್ಥಳದ ಸನಿಹದಲ್ಲೇ ಯಜ್ಞ ಟ್ರಾವರ್ನ್ ಇದ್ದು ಅಲ್ಲಿಂದ ಇದನ್ನು ವೀಕ್ಷಿಸಿದ ಕೆಲವರು ಮಹಿಳೆಯ ಕಥೆ ಮುಗಿದಂತೆ ಎಂದು ಮಾತನಾಡಿಕೊಂಡಿದ್ದರಂತೆ.
ರಾಣಿ ಅವರು ತಿರುಗಿ ನೋಡದೆ ಓಡುತ್ತಿದ್ದಾಗ ಸನಿಹದ ಗದ್ದೆ ಏರಿಯಲ್ಲಿ ವ್ಯಕ್ತಿಯೋರ್ವರು ನಡೆದು ಬರುತ್ತಿದ್ದುದನ್ನು ಕಂಡು ‘ಆನೆ.., ಆನೆ..,’ ಎಂದು ಬೊಬ್ಬಿಟ್ಟಿದ್ದಾರೆ. ಇದರಿಂದ ಆ ವ್ಯಕ್ತಿಯೂ ಅಲ್ಲಿಂದ ಕಾಲ್ಕಿತ್ತು ಬಚಾವಾಗಿದ್ದಾರೆ. ರಾಣಿ ಅವರು ಅಲ್ಲಿನ ಮೂರಿರ ಕುಟುಂಬದ ಮನೆಯ ರಕ್ಷಣೆ ಪಡೆದಿದ್ದು; ಬಳಿಕ ಈ ವಿಚಾರವನ್ನು ಸನಿಹ ವರ್ತಿಗಳಿಗೆಲ್ಲ ಸಾಧ್ಯವಾದಷ್ಟು ತಿಳಿಸಲಾಗಿದೆ. ಕೆಲಸಮಯ ಇದೇ ವ್ಯಾಪ್ತಿಯಲ್ಲಿದ್ದ ಸಲಗ ಅಲ್ಲಿನ ನಿವಾಸಿಯೊಬ್ಬರ ತೋಟದ ಗೇಟ್ ಅನ್ನು ಮುರಿದು ಹಾಕಿದ್ದು; ಕೃಷಿ ಫಸಲನ್ನು ಧ್ವಂಸಗೊಳಿಸಿದೆ. ಆನೆಯ ಇರುವಿಕೆ ಅರಿತು ಅಲ್ಲಿನ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಇನ್ನಿಬ್ಬರು ಮಹಿಳೆಯರು ಅಪಾಯದಿಂದ ತಪ್ಪಿಸಿಕೊಂಡರಂತೆ.
ಈ ಘಟನೆಯ ಬಗ್ಗೆ ‘ಶಕ್ತಿ’ಯೊಂದಿಗೆ ಭಯ ಮಿಶ್ರಿತರಾಗಿದ್ದ. ರಾಣಿ ಅವರು ತಮ್ಮ ಭಯಾನಕ ಅನುಭವವನ್ನು ಹಂಚಿಕೊಂಡರು. ಬೆಳಿಗ್ಗೆ ಇದೇ ಸಮಯದಲ್ಲಿ ಹಲವಾರು ವಿದ್ಯಾರ್ಥಿಗಳು, ಕಂಪ್ಯೂಟರ್ ಮತ್ತಿತರ ತರಬೇತಿಗೆಂದು ತೆರಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಈ ಸಂದರ್ಭದಲ್ಲಿ ಯಾವ ವಾಹನವೂ ರಸ್ತೆಯಲ್ಲಿ ಬಾರಲಿಲ್ಲ ಎಂದು ತಿಳಿಸಿದರು. ಆನೆ ಬಳಿಕ ಗದ್ದೆಯಲ್ಲಿ ಓಡುತ್ತಿದ್ದುದನ್ನು ಸನಿಹದ ಯಾರೋ ಮೊಬೈಲ್ನಲ್ಲಿ ವೀಡಿಯೋ ಮಾಡಿದ್ದು; ಇಂದು ಸಾಮಾಜಿಕ ಜಾಲತಾಣದಲ್ಲಿ ಇದು ಹರಿದಾಡುತ್ತಿತ್ತು.
ಕಳೆದ ಕೆಲವು ದಿನಗಳಿಂದ ಈ ವ್ಯಾಪ್ತಿಯಲ್ಲಿ ದಟ್ಟವಾಗಿ ಮಂಜು ಆವರಿಸುತ್ತಿದ್ದು; ತಿರುಗಾಡುವವರು ಎಚ್ಚರದಿಂದಿರಬೇಕೆಂದು ರಾಣಿ ಪೊನ್ನಪ್ಪ ಅವರು ‘ಶಕ್ತಿ’ ಮೂಲಕ ವಿನಂತಿಸಿದ್ದಾರೆ. - ಶಶಿ