ಮಡಿಕೇರಿ, ಜ. 10: ಒಂದೊಮ್ಮೆ ಕೊಡಗಿನ ಬಿಳಿಗೇರಿ, ಪಶ್ಚಿಮ ಘಟ್ಟ ಶ್ರೇಣಿಯ ಕೂಜಿಮನೆ, ಸುಟ್ಟತ್‍ಮನೆ, ಸಂಪಾಜೆ ವ್ಯಾಪ್ತಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಹರಳು ಕಲ್ಲು ದಂಧೆ; ದಶಕದ ಹಿಂದೆ ಭಾಗಮಂಡಲ ಬೆಟ್ಟಶ್ರೇಣಿಯ ಪಟ್ಟಿಘಾಟ್ ಪ್ರದೇಶದಲ್ಲಿ ಬೆಳಕಿಗೆ ಬಂದಿದ್ದು; ಇದೀಗ ಮತ್ತೆ ಸುದ್ದಿ ಮಾಡಿದೆ. ಮಡಿಕೇರಿ ತಾಲೂಕಿನ ಬಿಳಿಗೇರಿ ಹಾಗೂ ಸುಟ್ಟತ್‍ಮಲೆಯಲ್ಲಿ ಭಾರೀ ಸದ್ದು ಮಾಡಿದ್ದ ಈ ದಂಧೆಯಿಂದ ಅನೇಕರು ಶ್ರೀಮಂತರಾಗಿದ್ದರೆ; ಕೆಲವರು ಸದ್ದಿಲ್ಲದೆ ಶವವಾಗಿ ಹೋಗಿದ್ದಾರೆ.
ಇನ್ನೊಂದೆಡೆ ಅಂದಿನಿಂದ ಇಂದಿನ ತನಕವೂ ಅಕ್ರಮ ದಂಧೆಕೋರರೊಂದಿಗೆ ಅರಣ್ಯ ಇಲಾಖೆ; ಗಣಿ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕೆಲವರು ಶಾಮೀಲಾಗಿರುವ ಆರೋಪವೂ ಇದೆ. ಪರಿಣಾಮ ಹರಳುಕಲ್ಲು ದಂಧೆ ಒಮ್ಮೆ ಕೂಜಿಮಲೆಯಲ್ಲಿ ನಡೆದರೆ; ಇನ್ನೊಮ್ಮೆ ಸುಟ್ಟತ್‍ಮಲೆಯಲ್ಲಿ ಹಾಗೂ ಮತ್ತೊಮ್ಮೆ ಪಟ್ಟಿಘಾಟ್‍ನಲ್ಲಿ ಗೋಚರಿಸಲಿದೆ. ಈ ದಂಧೆ ಕೋರರಿಗೆ ಸಂಬಂಧಿಸಿದ ಗ್ರಾಮೀಣ ಭಾಗಗಳ ನಿರುದ್ಯೋಗಿ ಯುವಕರು ಆಮಿಷಗಳಿಗೆ ಒಳಗಾಗಿ ಸಹಕಾರ ನೀಡುತ್ತಿರುವ ಪರಿಣಾಮ; ಸಮಯಕ್ಕೆ ತಕ್ಕಂತೆ ಸ್ಥಳ ಬದಲಾಯಿಸಿಕೊಂಡು ಕೃತ್ಯ ಎಸಗುತ್ತಿರುವದು ಬಹಿರಂಗ ಗೊಂಡಿದೆ.
ಕಳೆದ ಎರಡು ದಶಕಗಳಿಂದ ಜಿಲ್ಲೆಯ ಅಲ್ಲಲ್ಲಿ ಲಭ್ಯವಿರುವ ಹರಳು ಕಲ್ಲುಗಳನ್ನು; ಜಿಲ್ಲಾ ಕೇಂದ್ರದಲ್ಲಿ ಸಂಗ್ರÀಹಿಸುತ್ತಿರುವ ದಂಧೆಕೋರರು; ಅನಂತರದಲ್ಲಿ ಮೈಸೂರಿಗೆ ಸಾಗಾಟಗೊಳಿಸಿ; ಅಲ್ಲಿಂದ ದೂರದ ರಾಜಸ್ತಾನಕ್ಕೆ ಕೊಂಡೊಯ್ದು ಭಾರೀ ಮೊತ್ತಕ್ಕೆ ಮಾರಾಟಗೊಳಿಸುತ್ತಿರುವದು ಖಾತರಿಯಾಗಿದೆ.
(ಮೊದಲ ಪುಟದಿಂದ) ಇಂದು ಲಕ್ಷ ಬೆಲೆ : ದಶಕಗಳ ಹಿಂದೆ ಕೊಡಗಿನಲ್ಲಿ ಲಭ್ಯವಿರುವ ಹರಳು ಕಲ್ಲನ್ನು ಮಧ್ಯವರ್ತಿಗಳು ಕೆ.ಜಿ. ಯೊಂದಕ್ಕೆ ನೂರಾರು ರೂಪಾಯಿಗಳಿಗೆ ಖರೀದಿಸಿರುವ ಇತಿಹಾಸವಿದೆ; ಆನÀಂತರದಲ್ಲಿ ಸಾವಿರ ಮೊತ್ತಕ್ಕೆ ಬೆಲೆ ಏರಿಕೆಯಾಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಈ ಹರಳುಗಳ ಮೌಲ್ಯ ಲಕ್ಷಕ್ಕೆ ತಲಪಿದೆ. ಆ ಬೆನ್ನಲ್ಲೇ ದಂಧೆಕೋರರ ಕಾರಸ್ತಾನ ವಿಸ್ತಾರಗೊಂಡಿರುವದು ದೃಢಪಟ್ಟಿದೆ.
ಮಾಮೂಲಿಗೆ ಕಿತ್ತಾಟ : ನಿರಂತರ ಹರಳುಕಲ್ಲು ದಂಧೆಯಿಂದ ವಿವಿಧ ಇಲಾಖೆಗಳ ನಂಟು ಹೊಂದಿರುವ ಮಂದಿ ಸಹಿತ; ಅಕ್ರಮ ವಹಿವಾಟುದಾರರು ಇಂದು ಕೋಟಿ ಕೋಟಿ ಆಸ್ತಿ ಸಂಪಾದಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಅಲ್ಲದೆ ದಂಧೆ ವಿಸ್ತಾರಗೊಳ್ಳುತ್ತಲೇ ಪರಸ್ಪರರಲ್ಲಿ ಹಣಕ್ಕಾಗಿ ಕಿತ್ತಾಟ; ಸಂಶಯ, ಒಡಕು ಕಾಣಿಸಿಕೊಂಡಿದೆ. ಪರಿಣಾಮವಾಗಿ ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಾ; ಪರಸ್ಪರ ಕಾಲಿಗೆ ಕಲ್ಲುಚಪ್ಪಡಿ ಎಳೆದುಕೊಂಡಿರುವ ಸಂಗತಿ ಗೋಚರಿಸಿದೆ.
ಹೀಗಾಗಿ ಈಚೆಗೆ ದಂಧೆಯಲ್ಲಿ ನಿರತರಾಗಿರುವ ಎಂ.ಕೆ. ಸಲೀಂ ಹಾಗೂ ಎಂ.ಡಿ. ಶರೀಫ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಆ ಮಾತ್ರಕ್ಕೆ ಕೃತ್ಯ ನಿಂತಿಲ್ಲ; ಬದಲಾಗಿ ಜೋಡುಪಾಲ, ಮೇಕೇರಿ, ತ್ಯಾಗರಾಜನಗರ, ಮಹದೇವಪೇಟೆ, ಮೈಸೂರಿನ ಒಂದಿಷ್ಟು ದಂಧೆಕೋರರು ತಲೆಮರೆಸಿಕೊಂಡಿದ್ದಾರೆ.
2008ರಲ್ಲಿ ಬೆಳಕಿಗೆ : ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಹರಳುಕಲ್ಲು ದಂಧೆಗೆ ದಶಕದ ಹಿಂದೆ 2008ರಲ್ಲಿ ಸರ್ಧಾರ್ ಎಂಬ ವ್ಯಕ್ತಿ ಗಣಿ ಇಲಾಖೆಯಿಂದ ಪರವಾನಗಿ ಪಡೆದು; ಕೆಲವರೊಂದಿಗೆ ರಹಸ್ಯ ಚಟುವಟಿಕೆ ನಡೆಸುತ್ತಿದ್ದ. ಈ ಬಗ್ಗೆ ಅರಣ್ಯಾಧಿಕಾರಿಗಳು ಕಾವೇರಿ ಸೇನೆಯ ದೂರಿನ ಮೇರೆಗೆ ಕಾನೂನು ಕ್ರಮ ಜರುಗಿಸಿತ್ತು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರು ವಂತಾಗಿ; ರಾಜ್ಯ ಉಚ್ಚನ್ಯಾಯಾಲಯ ನಿರ್ಬಂಧ ವಿಧಿಸಿತ್ತು.
(ಸಶೇಷ)
- ಮಾಹಿತಿ : ಟಿ.ಜಿ. ಸತೀಶ್