ಮಡಿಕೇರಿ, ಜ. 10: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ; ನಿನ್ನೆ ಜರುಗಿದ 11ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ; ವನ್ಯಪ್ರಾಣಿಗಳ ದಾಳಿಯಿಂದ ಸಾವನ್ನಪ್ಪುವ ವೇಳೆಯಲ್ಲಿ ಮೃತರ ಕುಟುಂಬಕ್ಕೆ ರೂ. 7.50 ಲಕ್ಷ ಪರಿಹಾರ ನೀಡಬೇಕೆಂದು ನಿರ್ಣಯದೊಂದಿಗೆ; ಸರಕಾರ ಅಧಿಕೃತ ಘೋಷಣೆ ಹೊರಡಿಸಿದೆ. ಈ ಸಂಬಂಧ ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ ವಿಭಾಗ) ಈ ಮೊದಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.ಅಲ್ಲದೆ ಕಳೆದ ವರ್ಷ 31.1.2019 ರಂದು ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರದಲ್ಲಿ; 2011 ರಿಂದ ಈಚೆಗೆ ವನ್ಯಪ್ರಾಣಿಗಳ ದಾಳಿಗೆ ಸಿಲುಕಿ ಸಾವನ್ನಪ್ಪಿದವರಿಗೆ ಕೇವಲ ರೂ. 5 ಲಕ್ಷ ಪರಿಹಾರ ನೀಡಲಾಗುತ್ತಿದ್ದು; ಈ ಮೊತ್ತವನ್ನು ದಯಾತ್ಮಕ ನಿಟ್ಟಿನಲ್ಲಿ ರೂ. 10 ಲಕ್ಷ ಏರಿಸುವಂತೆ ಗಮನ ಸೆಳೆದಿದ್ದರು.
ಈ ಸಂಬಂಧ ಮುಖ್ಯಮಂತ್ರಿಗಳ ಸಮ್ಮುಖ ಗಂಭೀರ ಚರ್ಚೆಯ ಬಳಿಕ ಕಳೆದ ನಾಲ್ಕು ವರ್ಷಗಳಿಂದ; ರಾಜ್ಯದಲ್ಲಿ ವನ್ಯಮೃಗಗಳ ದಾಳಿಗೆ ಸಿಲುಕಿ ಮೃತಪಟ್ಟಿರುವವರ ಅಂಕಿ ಅಂಶದ ವರದಿ ಪಡೆಯಲಾಗಿದೆ. ಆ ಪ್ರಕಾರ 2015-16ರಲ್ಲಿ ರಾಜ್ಯದಲ್ಲಿ 47 ಮಂದಿ ಸಾವಿಗೀಡಾಗಿದ್ದು; 2016-17ರಲ್ಲಿ 49, 2017-18ರಲ್ಲಿ 36 ಹಾಗೂ 2018-19ರಲ್ಲಿ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭಿಸಿದೆ.
ಈ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರವು; ಪ್ರಸ್ತುತ ದಿನಗಳಿಂದಲೇ ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ರೂ. 5 ರಿಂದ 7.50 ಲಕ್ಷ ಪರಿಹಾರ ಧನ ನೀಡಲು ಆದೇಶಿಸಿ; ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ಷರತ್ತುಗಳು : ಸಂಬಂಧಿಸಿದ ಆದೇಶದಲ್ಲಿ ಈ ಮೊತ್ತವು ಮೃತರ ಕುಟುಂಬಕ್ಕೆ ಭವಿಷ್ಯವರ್ತಿಯಾಗಿ ಅನ್ವಯಿಸತಕ್ಕದ್ದು ಎಂದು ಸ್ಪಷ್ಟ ಸೂಚನೆ ನೀಡಿದೆ. ಅಲ್ಲದೆ ಅರಣ್ಯ ಇಲಾಖೆಯು ಸರಕಾರ ನೀಡುವ ಅನುದಾನದ ಮಿತಿಯಲ್ಲಿ ಬಳಸಿಕೊಳ್ಳುವಂತೆ ನಿರ್ದೇಶಿಸಿದೆ.