ಗೋಣಿಕೊಪ್ಪಲು, ಜ.10: ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರುಗ ಮತ್ತು ಕುರ್ಚಿ ಗ್ರಾಮದಲ್ಲಿ ಪುಂಡಾನೆಗಳು ಹಾಗೂ ವ್ಯಾಘ್ರನ ಹಾವಳಿ ಮಿತಿಮೀರಿದ್ದು ಕೂಡಲೇ ಕಾಡಾನೆಗಳು ಮತ್ತು ಕೃಷಿಕರ ಜಾನುವಾರುಗಳನ್ನು ಭಕ್ಷಣೆ ಮಾಡುತ್ತಿರುವ ಹುಲಿಗಳನ್ನು ಸೆರೆ ಹಿಡಿದು ಬೇರೆಡೆಗೆ ಸಾಗಿಸುವಂತೆ ನೊಂದ ಗ್ರಾಮಸ್ಥರು ಮನವಿ ಮಾಡಿದ್ದಾರೆ.ಬೀರುಗ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗ ಶ್ರೀ ಪೆರುಮಳೇಶ್ವರ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ಸಭೆ ಸೇರಿದ ಬೀರುಗ, ಕುರ್ಚಿ ಗ್ರಾಮಸ್ಥರು ಈಗಾಗಲೇ ಶ್ರೀಮಂಗಲ ವಲಯಾ ರಣ್ಯಾಧಿಕಾರಿಗಳಿಗೆ ನಷ್ಟ ಪರಿಹಾರ ಕೋರಿ 300ಕ್ಕೂ ಅಧಿಕ ಅರ್ಜಿ ಸಲ್ಲಿಸಿದ್ದು ಇತ್ತ ಪರಿಹಾರವೂ ಇಲ್ಲ ಅತ್ತ ವನ್ಯಪ್ರಾಣಿಗಳ ಉಪಟಳ ಹತ್ತಿಕ್ಕಲು ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳಲು ಯಾವದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿ ರುವದು ಕಂಡು ಬಂದಿಲ್ಲ ಎಂದು ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಮಡಿಕೇರಿ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂಭಾಗ, ಹುಣಸೂರು ವನ್ಯಜೀವಿ ಡಿಸಿಎಫ್ ಮತ್ತು ಸಿಎಫ್ ಕಚೇರಿ ಮುಂಭಾಗ ಹಾಗೂ ಬೆಂಗಳೂರು ಮಲ್ಲೇಶ್ವರಂ ನಲ್ಲಿರುವ ಅರಣ್ಯ ಭವನ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವದಾಗಿ ಗ್ರಾಮಸ್ಥರು ಇಲಾಖಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬೀರುಗ ಮತ್ತು ಕುರ್ಚಿ ಗ್ರಾಮಗಳು ಬೃಹ್ಮಗಿರಿ ವನ್ಯಜೀವಿ ವಲಯದ ಸರಹದ್ದಿನಲ್ಲಿರುವದ ರಿಂದಾಗಿ ಅಭಯಾರಣ್ಯದಿಂದ ನಿರಂತರ ಕಾಡುಪ್ರಾಣಿಗಳು ರೈತರ ಮಡಿಗಳಿಗೆ,

(ಮೊದಲ ಪುಟದಿಂದ) ತೋಟಗಳಿಗೆ ಬಂದು ಕೃಷಿ ಫಸಲು ನಷ್ಟಮಾಡುತ್ತಿವೆ ಎಂದು ತಮ್ಮ ದುಃಖ ದುಮ್ಮಾನವನ್ನು ತೋಡಿಕೊಂಡಿದ್ದಾರೆ.

ಬೀರುಗ, ವೆಸ್ಟ್ ನೆಮ್ಮಲೆ, ಕುರ್ಚಿ ವ್ಯಾಪ್ತಿಯಲ್ಲಿ, ಪಾಚಿಮಲೆ ವ್ಯಾಪ್ತಿಯಲ್ಲಿ 700 ಎಕರೆಗೂ ಅಧಿಕ ಕಂದಾಯ ಮತ್ತು ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಹಲವು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿಕೊಂಡು ತೋಟ ಮಾಡಿದ್ದಾರೆ. ಇಲ್ಲಿರುವ ಗೋಮಾಳವೂ ಅತಿಕ್ರಮಣಗೊಂಡಿದ್ದು, ಇದರ ತೆರವು ಕಾರ್ಯ ಮಾಡದಿರುವದು, ಆನೆ ಕಾರಿಡಾರ್ ಯೋಜನೆ ಅನುಷ್ಠಾನಗೊಳ್ಳದಿರುವದು ಆನೆ, ಹುಲಿ, ಕಾಡೆಮ್ಮೆ, ಕಾಡುಹಂದಿ ಉಪಟಳ ಅಧಿಕಗೊಳ್ಳಲು ಕಾರಣ ಎಂದು ಕೆಲವು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಯಾವದೇ ಕೃಷಿಕರು ಅಕ್ರಮ ಸಕ್ರಮಕ್ಕೆ ಕೇವಲ 5 ಎಕರೆಗೆ ಮಾತ್ರ ಅರ್ಹರು.ಆದರೆ, ಬೀರುಗ ವ್ಯಾಪ್ತಿಯಲ್ಲಿ ಕೆಲವರು 50 ಎಕರೆಗೂ ಅಧಿಕ ಕಾಫಿ ತೋಟ ಮಾಡಿಕೊಂಡಿರುವದು, ಆನೆಯ ಮೇವಿನ ಕೊರತೆ ಹಿನ್ನೆಲೆ ಕಳೆದ 5 ವರ್ಷಗಳಿಂದ ಕಾಡಾನೆ ಉಪಟಳ ಅಧಿಕವಾಗಲು ಕಾರಣ ಎನ್ನಲಾಗಿದೆ.

300 ಎಕರೆ ಗೋಮಾಳ ಒತ್ತುವರಿ ಹಿನ್ನೆಲೆ ಇಲ್ಲಿನ ಜಾನುವಾರು ಸಾಕಾಣೆಗೂ ಮೇವಿನ ಕೊರತೆ ಉಂಟಾಗಿದೆ. ಇತ್ತೀಚೆಗೆ ಸುಮಾರು 10ಕ್ಕೂ ಅಧಿಕ ಜಾನುವಾರುಗಳು ಇರ್ಪು,ಕುರ್ಚಿ, ನೆಮ್ಮಲೆ, ಬೀರುಗ ವ್ಯಾಪ್ತಿಯಲ್ಲಿ ಹುಲಿಯಿಂದ ಕೊಲ್ಲಲ್ಪಟ್ಟಿದ್ದು ರೈತಾಪಿ ವರ್ಗದ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಆನೆ ಫಾರ್ಮ್ ಮಾಡಲಿ

ಕಳೆದ 10 ವರ್ಷದಿಂದೀಚೆಗೆ ಕೊಡಗು ಜಿಲ್ಲೆಯಲ್ಲಿ ಆನೆ ಉಪಟಳ ಎಲ್ಲೆ ಮೀರಿದೆ. ಕೋಟಿಗಟ್ಟಲೆ ಕೃಷಿ ಫಸಲು ನಷ್ಟವಾಗಿದೆ. ಬಾಳೆ,ತೆಂಗು,ಅಡಿಕೆ, ಭತ್ತದ ಪೈರುಗಳಲ್ಲದೆ ಹಣ್ಣಿನ ಮರಗಳು, ಹಲಸು ಇತ್ಯಾದಿಗಳಲ್ಲದೆ, ಇದೀಗ ಕಾಫಿ ಹಣ್ಣುಗಳನ್ನೂ ತಿನ್ನುವ ಮೂಲಕ ರೈತರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಕಾಳು ಮೆಣಸು ಬಳ್ಳಿಗಳೂ ಕಾಡಾನೆ ಓಡಾಟಕ್ಕೆ ಸಿಲುಕಿ ಫಸಲು ನೆಲಕಚ್ಚಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.

ಮದ್ರೀರ ವಿಷ್ಣು ಮಾತನಾಡಿ ಆನೆಚೌಕೂರು ವನ್ಯಜೀವಿ ವಲಯದಲ್ಲಿ ಸುಮಾರು ಸಾವಿರ ಎಕರೆ ಅರಣ್ಯಕ್ಕೆ ಸೋಲಾರ್ ತಂತಿಬೇಲಿ ಅಳವಡಿಸಿ ಪುಂಡಾನೆಗಳನ್ನು ಸೆರೆ ಹಿಡಿದು ಬಿಡಲಿ.’ಆನೆ ಫಾರ್ಮ್’ ನಲ್ಲಿ ಆನೆಗೆ ಸಾಕಷ್ಟು ಕುಡಿಯುವ ನೀರು ವ್ಯವಸ್ಥೆ, ಆನೆ ಮೇವನ್ನೂ ಬೆಳೆಸಲಿ.ನಾವು ರೈತರೂ ಆನೆಗೆ ಬೇಕಾದ ಮೇವು ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಅಮೇರಿಕಾದಲ್ಲಿ ಕಾಡುಕುದುರೆ ಸಂತತಿ ಅಧಿಕಗೊಂಡಾಗ ಸರ್ಕಾರವೇ ಗುಂಡು ಹೊಡೆದು ನಿಯಂತ್ರಣಕ್ಕೆ ತರಲು ಆದೇಶ ನೀಡುತ್ತದೆ. ಆಸ್ಟ್ರೇಲಿಯಾದಲ್ಲಿ ಕಾಂಗರೂ ಸಂತತಿ ಹೆಚ್ಚಳವಾದಾಗಲೂ ಗುಂಡು ಹೊಡೆದು ನಿಯಂತ್ರಿಸಲಾಗುತ್ತಿದೆ. ಭಾರತದಲ್ಲಿಯೂ ಆನೆ, ಹುಲಿ, ಕಾಡು ಹಂದಿಗೆ ಗುಂಡು ಹೊಡೆದು ಸರ್ಕಾರವೇ ನಿಯಂತ್ರಿಸಲಿ ಎಂದು ತಮ್ಮ ಅಸಮಾಧಾನ ಹೊರ ಹಾಕಿದರು.

ಅಜ್ಜಮಾಡ ಟಿ.ಚಂಗಪ್ಪ ಅವರು ಮಾತನಾಡಿ, ಕಳೆದ 7-8 ವರ್ಷಗಳಿಂದ ವನ್ಯ ಪ್ರಾಣಿ ಹಾವಳಿ ಈ ಭಾಗದಲ್ಲಿ ಮಿತಿಮೀರಿದೆ. ಕಾಡುಕೋಣ, ಹುಲಿ, ಆನೆ, ಕಾಡುಹಂದಿ ಉಪಟಳ ಅಧಿಕವಾಗಿದೆ. ಅರಣ್ಯ ಇಲಾಖೆಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರೂ ಕಳೆದ 15 ತಿಂಗಳಿನಿಂದಲೂ ಸಮರ್ಪಕ ಪರಿಹಾರ ವಿತರಣೆಯಾಗಿಲ್ಲ.2018 ರ ಪರಿಹಾರ ಹಣವೇ ಕೃಷಿಕರಿಗೆ ಇನ್ನೂ ಸಿಕ್ಕಿಲ್ಲ. ಆನೆಕಂದಕ, ಸೋಲಾರ್ ವಿದ್ಯುತ್ ತಂತಿ ಬೇಲಿ ಅಳವಡಿಕೆ ಕಾರ್ಯ ನಿಧಾನಗತಿಯಲ್ಲಿದೆ. ಒಂದು ಬಾಳೆಗಿಡಕ್ಕೆ ರೂ.170 ಹಾಗೂ ಕಾಫಿ ಗಿಡಕ್ಕೆ ತಲಾ ರೂ.200 ಪರಿಹಾರ ಏನೇನೂ ಸಾಲದು ಪರಿಹಾರ ಮೊತ್ತ ಗಣನೀಯವಾಗಿ ಹೆಚ್ಚಳವಾಗಬೇಕು.ಪರಿಹಾರ ವಿಳಂಬ ಮಾಡದೆ ವಿತರಿಸಬೇಕು.ಇಲ್ಲವೆ ವನ್ಯಪ್ರಾಣಿಗಳಿಗೆ ಗ್ರಾಮಸ್ಥರು ಗುಂಡು ಹೊಡೆದು ಹತ್ಯೆಗೆಯ್ಯಲೂ ಹಿಂದೇಟೂ ಹಾಕುವದಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಚಿವರು ವೈಜ್ಞಾನಿಕ ಪರಿಹಾರ ಮಾರ್ಗೋಪಾಯದ ಬಗ್ಗೆ ಚಿಂತನೆ ಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ಹೇಳಿದರು.

ಮೇ ವರೆಗಿನ ಪರಿಹಾರ ಬಂದಿದೆ

2018-19 ನೇ ಸಾಲಿನಲ್ಲಿ ಒಟ್ಟು 906 ಅರ್ಜಿ ಸ್ವೀಕಾರವಾಗಿದ್ದು, ಮೇ ತಿಂಗಳಿನವರೆಗಿನ ಪರಿಹಾರ ಮೊತ್ತ ಬಿಡುಗಡೆಗೊಂಡಿದ್ದು ಶೀಘ್ರವೇ ವಿತರಣೆ ಮಾಡಲಾಗುವದು ಎಂದು ಶ್ರೀಮಂಗಲದ ಉಪ ವಲಯಾರಣ್ಯಾಧಿಕಾರಿ ಎನ್.ಬಿ. ಹರೀಶ್‍ಕುಮಾರ್ ಮಾಹಿತಿ ನೀಡಿದರು. ಇನ್ನೂ ಬೀರುಗ, ಕುರ್ಚಿ ಗ್ರಾಮದ ಸುಮಾರು 300 ಅರ್ಜಿದಾರರಿಗೆ ಪರಿಹಾರ ನೀಡಲು ಬಾಕಿಯಾಗುತ್ತದೆ ಎಂದು ಹೇಳಿದರು.

ರಬ್ಬರ್ ಗುಂಡು ನೀಡಿ!

ವಿದೇಶದಲ್ಲಿ ಆನೆಗಳನ್ನು, ಕಾಡು ಪ್ರಾಣಿಗಳನ್ನು ಓಡಿಸಲು ಪಟಾಕಿ ಸಿಡಿಸುವದಿಲ್ಲ. ರಬ್ಬರ್ ಗುಂಡುಗಳನ್ನು ಬಳಸಲಾಗುತ್ತದೆ. ಪಟಾಕಿಯನ್ನು ಸಿಡಿಸಿದ ಸಂದರ್ಭ ಆನೆಗಳು ಓಡುವದರಿಂದ ಕಾಫಿ ಗಿಡಗಳು ಮುರಿದು ನಷ್ಟ ಉಂಟಾಗುತ್ತದೆ. ಕೆಲವು ಆನೆಗಳು ಇದೀಗ ಪಟಾಕಿಗೂ ಬೆದರುತ್ತಿಲ್ಲ. ಈ ನಿಟ್ಟಿನಲ್ಲಿ ನಮಗೆ ರಬ್ಬರ್ ಗುಂಡು ತರಿಸಿಕೊಡಿ. ಆನೆಯನ್ನು ನಾವೇ ಓಡಿಸುತ್ತೇವೆ ಎಂದು ಮದ್ರೀರ ವಿಷ್ಣು ಅರಣ್ಯ ಇಲಾಖೆಗೆ ಸಲಹೆ ನೀಡಿದರು. ಇದೇ ಸಂದರ್ಭ ಆನೆ ಓಡಿಸಲು ‘ಪೆಪ್ಪರ್ ಸ್ಪ್ರೇ’ ( ಕಾಳುಮೆಣಸು ಪುಡಿ ಎರಚಲು) ಕೊಡಿ ಎಂದೂ ಕೆಲವು ಬೆಳೆಗಾರರು ಇಲಾಖೆಗೆ ಬೇಡಿಕೆ ಇಟ್ಟ ಪ್ರಸಂಗವೂ ನಡೆಯಿತು.

ಹನುಮಂತ ಬೆಟ್ಟದಿಂದ ಇಳಿದು ಬರುವ ಕಾಡಾನೆ ಹಿಂಡು

ಕಾಡಾನೆಗಳು ಮೇವಿಗಾಗಿ ಬ್ರಹ್ಮಗಿರಿ ವನ್ಯಜೀವಿ ವಲಯದ, ಇರ್ಪು ಬೆಟ್ಟ ಶ್ರೇಣಿಯ ಹನುಮಂತ ಬೆಟ್ಟದಿಂದ ಎರಡು ಹಾದಿಯ ಮೂಲಕ ಕಾಫಿ ತೋಟಕ್ಕೆ ನುಸುಳಿ ಬರುತ್ತವೆ. ಅವೆರಡು ಭಾಗದಲ್ಲಿ ಸೋಲಾರ್ ವಿದ್ಯುತ್ ಬೇಲಿ( ಹ್ಯಾಂಗಿಂಗ್ ಫೆನ್ಸ್) ತುರ್ತು ನಿರ್ಮಾಣವಾಗಬೇಕಾಗಿದೆ. ಈಗಾಗಲೇ ಸುಮಾರು 4.5 ಕಿ.ಮೀ.ವಿದ್ಯುತ್ ಬೇಲಿ ನಿರ್ಮಾಣವಾಗಿದೆ. ಪಾಚಿಬೈಲು, ಇರ್ಪು, ಕುರ್ಚಿ,ಕುಂಬಾರಕಟ್ಟೆ,ಬೀರುಗದಲ್ಲಿ ವಾರದಲ್ಲಿ 5 ದಿನಗಳು ಇತ್ತೀಚೆಗೆ ಆನೆ, ಹುಲಿ ಉಪಟಳ ಅಧಿಕವಾಗಿದೆ. ನಮಗೆ ಪರಿಹಾರ ನೀಡದಿದ್ದರೂ ಪರವಾಗಿಲ್ಲ. ವನ್ಯಪ್ರಾಣಿಗಳ ಕಾಟ ತಪ್ಪಿಸಿ ಎಂದು ಕೆಲವರು ಅಭಿಪ್ರಾಯಪಟ್ಟರು.

ಪ್ರತಿಭಟನೆ ಎಚ್ಚರಿಕೆ

ಇಲಾಖಾಧಿಕಾರಿಗಳಿಗೆ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಗೊತ್ತಿಲ್ಲ. ಬೀರುಗ ಮತ್ತು ಕುರ್ಚಿ ಗ್ರಾಮದಲ್ಲಿ ದಿನನಿತ್ಯ ಭಯದ ವಾತಾವರಣವಿದ್ದು, ಕಾಫಿ ಕೊಯ್ಲಿಗೂ ಕಾರ್ಮಿಕರ ಕೊರತೆ ಇದೆ.ಎಲ್ಲೆಡೆಯೂ ಹಸಿಕಾಫಿಯನ್ನೇ ನೇರ ಮಾರಾಟಮಾಡಲಾಗುತ್ತಿದೆ. ರೈತರು ಬೇಸತ್ತಿದ್ದು ಮಡಿಕೇರಿ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ, ಹುಣಸೂರು ವನ್ಯ ಜೀವಿವಿಭಾಗದ ಡಿಸಿಎಫ್ ಮತ್ತು ಸಿ ಎಫ್ ಕಚೇರಿಯ ಮುಂದೆ ಪ್ರತಿಭಟನೆ ಹಾಗೂ ಹಂತ ಹಂತವಾಗಿ ಬೆಂಗಳೂರು ಅರಣ್ಯ ಭವನದ ಕಚೇರಿ ಎದುರು ಅಮರಾಣಾಂತ ಉಪವಾಸ ಸತ್ಯಾಗ್ರಹ ಮಾಡಲಾಗುವದು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಗ್ರಾಮಸ್ಥರಾದ ಅಜ್ಜಮಾಡ ವೇಣು, ಅಜ್ಜಮಾಡ ಟಿ ಚಂಗಪ್ಪ, ಅಜ್ಜಮಾಡ ಸುಬ್ಬಯ್ಯ, ಅಜ್ಜಮಾಡ ಪಿ.ಮಂದಣ್ಣ, ಅಜ್ಜಮಾಡ ಲವ ಕುಶಾಲಪ್ಪ, ಅಜ್ಜಮಾಡ ಪ್ರಮೀಳಾ ಕರುಂಬಯ್ಯ, ಅಜ್ಜಮಾಡ ಕುಶಾಲಪ್ಪ, ಮದ್ರೀರ ವಿಷ್ಣು, ಕಟ್ಟೇರ ಅರಸು ಅಚ್ಚಪ್ಪ, ಚರಿತ್ರ, ಸಾವಿತ್ರಿ, ದರ್ಶನ್, ಬಾಳೇಯಡ ಅಶೋಕ್, ಕುಂಜ್ಞಂಗಡ ರಮೇಶ್, ಅಯ್ಯಮಾಡ ಉದಯ, ಅರಣ್ಯ ಇಲಾಖೆಯ ಮಲ್ಲನಗೌಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದು ವನ್ಯಪ್ರಾಣಿಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕುರಿತು ಚರ್ಚೆ ನಡೆಸಿದರು.

-ಟಿ.ಎಲ್.ಶ್ರೀನಿವಾಸ್