ವೀರಾಜಪೇಟೆ, ಜ. 10 : ಸೂರಿಗಾಗಿ ಒತ್ತಾಯಿಸಿ ಸಮೀಪದ ಬಾಳುಗೋಡು ಗ್ರಾಮದಲ್ಲಿ ನಿರಂತರ ಹೋರಾಟಕ್ಕೆ 55 ಕುಟುಂಬಗಳ ಪುರುಷರು, ಮಹಿಳೆಯರು, ಹೆಣ್ಣು ಮಕ್ಕಳು, ಗಂಡು ಮಕ್ಕಳು, ನಿರ್ಗತಿಕರು ಸಿದ್ಧತೆ ನಡೆಸಿದ್ದಾರೆ. ತಾಲೂಕು ಕಚೇರಿಯ ಕಂದಾಯ ಅಧಿಕಾರಿಗಳು ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳನ್ನು ಕಿತ್ತೆಸೆದರೂ ಈ ಕುಟುಂಬಗಳು ಪ್ರತ್ಯೇಕವಾಗಿ ಅಕ್ರಮ ಶೆಡ್ ನಿರ್ಮಾಣದಲ್ಲಿ ತೊಡಗಿದ್ದಾರೆ.ಬಾಳುಗೋಡು ಗ್ರಾಮದಲ್ಲಿನ ಸರ್ವೆ ನಂ 337/1 ರಲ್ಲಿನ ಸರ್ಕಾರಿ ಭೂಮಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆಯಿಂದಲೂ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಲು ಆರಂಭವಾಗಿತ್ತು. ಈ ಸಂಬಂಧ ಮಾಹಿತಿ ಪಡೆದ ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಜತೆಗೆ ಗುಡಿಸಲು ಹಾಕಿಕೊಳ್ಳುತ್ತಿದ್ದವರಿಗೆ ಪೈಸಾರಿ ಜಾಗವನ್ನು ಅತಿಕ್ರಮಿಸುವುದು ಕಾನೂನು ಬಾಹಿರ. ಈ ಪೈಸಾರಿ ಜಾಗವನ್ನು
(ಮೊದಲ ಪುಟದಿಂದ) ಸರ್ಕಾರದ ಬೇರೆ ಉದ್ದೇಶಗಳಿಗೆ ಮೀಸಲಾಗಿಡಲಾಗಿದೆ. ಈ ಜಾಗವನ್ನು ಕೂಡಲೇ ತೆರವುಗೊಳಿಸಬೇಕೆಂದು ಸೂಚನೆ ನೀಡಿದ್ದರು. ನಂತರ ಗುರುವಾರ ಸ್ಥಳಕ್ಕೆ ತೆರಳಿದ ಕಂದಾಯ ಅಧಿಕಾರಿಗಳು ಕೆಲವು ಗುಡಿಸಲುಗಳನ್ನು ಕಿತ್ತೆಸೆದರಲ್ಲದೆ ಕೆಲವನ್ನು ಜಖಂ ಮಾಡಿದರೆಂದು ವಸತಿ ರಹಿತರ ಸಂಘಟನೆ ಇಂದು ಸ್ಥಳಕ್ಕೆ ತೆರಳಿದ ಮಾಧ್ಯಮದವರೊಂದಿಗೆ ದೂರಿದರು.
ಗುಡಿಸಲು ಕಟ್ಟಿಕೊಳ್ಳಲು ಮುಂದಾದ ನಿರ್ಗತಿಕ ಕುಟುಂಬದ ಪ್ರಮುಖರು ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ ನಮ್ಮ ಹಿರಿಯರ ಕಾಲದಿಂದಲೂ ಕಾಫಿ ತೋಟಗಳಲ್ಲಿನ ಲೈನ್ಮನೆಗಳಲ್ಲಿ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ವಾಸಿಸುತ್ತಿದ್ದೆವು. ಇಂದಿನ ಹಲವು ರೀತಿಯ ಸಮಸ್ಯೆಗಳಿಂದಾಗಿ ಬಾಡಿಗೆ ಮನೆಗಳಲ್ಲಿದ್ದು, ಬಡತನದ ರೇಖೆಗಳಿಗಿಂತ ಕೆಳಗಿರುವ ನಾವುಗಳು ಬಾಡಿಗೆ ಕಟ್ಟುವ ಪರಿಸ್ಥಿಯಲ್ಲಿ ಇಲ್ಲ. ಸೂರಿಗಾಗಿ ಅನೇಕ ವರ್ಷಗಳಿಂದ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸರ್ಕಾರ ಸೂರು ಒದಗಿಸುವ ತನಕ ಈ ಪೈಸಾರಿ ಜಾಗವನ್ನು ತೆರವುಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪಂಗಡದ ಜಾಗೃತಿ ಘಟಕದ ಜಿಲ್ಲಾ ಉಸ್ತುವಾರಿ ಸಮಿತಿಯ ಸದಸ್ಯ ಕೆ. ಪಳನಿ ಪ್ರಕಾಶ್ ಸ್ಥಳಕ್ಕೆ ತೆರಳಿದ್ದ ಮಾಧ್ಯಮದವರೊಂದಿಗೆ ಮಾತನಾಡಿ, ವೀರಾಜಪೇಟೆ ಪಟ್ಟಣ ಸೇರಿದಂತೆ ಆರ್ಜಿ, ಬಾಳುಗೋಡು ಹಾಗೂ ಪೆರುಂಬಾಡಿ ವ್ಯಾಪ್ತಿಯಲ್ಲಿನ ಸುಮಾರು 55 ಕ್ಕೂ ಹೆಚ್ಚು ಕುಟುಂಬಗಳು ಸ್ವಂತ ಸೂರಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ. ಇವರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ, ಆದಿವಾಸಿ ಸಮುದಾಯದವರು ಅಧಿಕವಾಗಿ ಇದ್ದಾರೆ. ಬಾಳುಗೋಡು ವ್ಯಾಪ್ತಿಯ ಸರ್ವೆ ನಂ 337/1 ರಲ್ಲಿ ಸುಮಾರು 37.58 ಎಕರೆಯಷ್ಟು ಪೈಸಾರಿ ಭೂಮಿ ಇದೆ. ಆದರೆ ಇಲ್ಲಿ ಕೆಲವು ಭೂಮಿ ಉಳ್ಳವರು ಗುಡಿಸಲು ಕಟ್ಟಿಕೊಂಡು ಪ್ರತಿಭಟನೆ ನಡಸುತ್ತಿರುವ ಪೈಸಾರಿ ಜಾಗದ ಒತ್ತಿನಲ್ಲಿ ಸುಮಾರು ಏಳೂವರೆ ಎಕರೆಗಳಷ್ಟು ಪೈಸಾರಿ ಜಾಗಕ್ಕೆ ಬೇಲಿ ಹಾಕಿದ್ದು ದಾಖಲೆ ವರ್ಗಾವಣೆಗಾಗಿ ಪ್ರಯತ್ನ ನಡೆಸಿದ್ದಾರೆ. ಇದು ಸರ್ವೇ ನಕಾಶೆ ದಾಖಲೆಯಿಂದ ದೃಢ ಪಟ್ಟಿದೆ ಎಂದು ಅತಿಕ್ರಮಿತ ಪೈಸಾರಿಗೆ ಬೇಲಿ ಹಾಕಿರುವುದನ್ನು ಮಾಧ್ಯಮದವರಿಗೆ ತೋರಿಸಿದರು.
ಈ ಸಂದರ್ಭ ಹಾಜರಿದ್ದ ಆದಿವಾಸಿಗಳ ಸಮನ್ವಯ ಸಮಿತಿಯ ಅಧ್ಯಕ್ಷ ವೈ.ಕೆ.ಗಣೇಶ್ ನಿವೇಶನ ರಹಿತರಿಗೆ ಸೂರು ಒದಗಿಸುವವರೆಗೆ ಹೋರಾಟ ಮುಂದುವರಿಯುತ್ತದೆ, ಆದಿವಾಸಿಗಳು ವಸತಿ ರಹಿತರು ಸೂರಿಗಾಗಿ ಪೈಸಾರಿ ಜಾಗ ಕೇಳುವುದು, ಗುಡಿಸಲು ಕಟ್ಟಿಕೊಳ್ಳುವುದು ಕಾನೂನು ಬಾಹಿರವಾಗುವುದಿಲ್ಲ. ಇದು ಆದಿ ವಾಸಿಗಳ ಹಕ್ಕು ಎಂದು ಹೇಳಿದರು. ಈ ಸಂಬಂಧ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸುತ್ತಿರುವ ವಿಚಾರ ತಿಳಿದು ತೆರವಿಗಾಗಿ ಕ್ರಮ ಕೈಗೊಳ್ಳಬೇಕಾಯಿತು. ಆದಿವಾಸಿಗಳು, ವಸತಿ ರಹಿತರು. ನಿರ್ಗತಿಕರು ಸಂಬಂಧಿಸಿದ ಗ್ರಾಮ ಪಂಚಾಯಿತಿ ಮೂಲಕ ಅರ್ಜಿ ಸಲ್ಲಿಸಿ ಸೂರಿಗಾಗಿ ಜಾಗವನ್ನು ಪಡೆಯಬೇಕಾಗಿದೆ. ಏಕಾ ಏಕಿ ಪೈಸಾರಿ ಜಾಗವನ್ನು ಅತಿಕ್ರಮಿಸುವುದು ಸರಿಯಲ್ಲ ಎಂದು ಪೈಸಾರಿ ಜಾಗದ ಅತಿಕ್ರಮಣ ಕಾರರಿಗೆ ಸೂಚನೆ ನೀಡಲಾಯಿತು ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.
ಜಿಲ್ಲಾಧಿಕಾರಿ, ಜನಪ್ರತಿನಿಧಿಗಳ ಭೇಟಿಗೆ ಮನವಿ
ಬಾಳುಗೋಡು ಗ್ರಾಮದ ಪೈಸಾರಿಯಲ್ಲಿ ಗುಡಿಸಲು ಕಟ್ಟಿಕೊಂಡು ಪ್ರತಿಭಟನೆ ನಡೆಸುತ್ತಿರುವ ವಸತಿ ರಹಿತರ ಸ್ಥಳಕ್ಕೆ ಜಿಲ್ಲಾಧಿಕಾರಿ, ಜನ ಪ್ರತಿನಿಧಿಗಳು ಭೇಟಿ ನೀಡುವಂತೆ ಮನವಿ ಮಾಡಿರುವುದಾಗಿ ಪ್ರತಿಭಟನೆಯ ಪ್ರಮುಖ ಎಚ್.ರಾಜು ತಿಳಿಸಿದ್ದು ಈಗಾಗಲೇ ಲಿಖಿತ ಮನವಿ ಸಲ್ಲಿಸಲಾಗಿದೆ ಎಂದರು.
ಮಂಗಳವಾರ ದಿನ ಬಾಳುಗೋಡು ಗ್ರಾಮದ ಪೈಸಾರಿ ಜಾಗದ ಪ್ರತಿಭಟನೆ ಜಾಗಕ್ಕೆ ಗ್ರಾಮ ಲೆಕ್ಕಿಗರಾದ ಅನುಷ ತೆರಳಿದ್ದು, ಗುಡಿಸಲಿನ ಬಳಿ ಪ್ರತಿಭಟನೆಗಾಗಿ ಇರಿಸಿದ್ದ ಡಾ:ಅಂಬೇಡ್ಕರ್ ಅವರ ಛಾಯಾ ಚಿತ್ರವನ್ನು ನೋಡಿ ಪ್ರತಿಭಟನೆಯ ಗುಂಪಿನ ಮುಂದೆ ಡಾ:ಅಂಬೇಡ್ಕರ್ಗೆ ಅವಮಾನ ಮಾಡಿದರೆಂದೂ ಈ ಸಂಬಂಧ ಇಲ್ಲಿನ ಪೊಲೀಸರಿಗೆ ದೂರು ನೀಡುವುದಾಗಿ ಪಳನಿ ಪ್ರಕಾಶ್ ತಿಳಿಸಿದ್ದಾರೆ. - ಡಿ.ಎಂ. ರಾಜ್ಕುಮಾರ್