ಸೋಮವಾರಪೇಟೆ,ಜ.9: ಎನ್.ಆರ್.ಸಿ. ಹಾಗು ಸಿ.ಎ.ಎ. ಕಾಯ್ದೆಗಳು ಆದಿವಾಸಿಗಳು, ದಲಿತರು ಹಾಗೂ ಅಲ್ಪಸಂಖ್ಯಾತರ ದುಡಿಯುವ ವರ್ಗಕ್ಕೆ ಅಪಾಯಕಾರಿಯಾಗಿದ್ದು, ಕೊಡಗಿನಲ್ಲಿರುವ 60 ಸಾವಿರ ಆದಿವಾಸಿಗಳಿಗೆ ಸಂಕಷ್ಟ ಎದುರಾಗಲಿದೆ ಎಂದು ಪ್ರಗತಿಪರ ಜನಾಂದೋಲನ ವೇದಿಕೆಯ ಮುಖಂಡ ಪಿ.ಆರ್.ಭರತ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆಗಳಿಲ್ಲದ ಆದಿವಾಸಿಗಳು ಪೌರತ್ವ ಕಳೆದುಕೊಂಡು ನಿರಾಶ್ರಿತರ ಕೇಂದ್ರ ಸೇರಿಕೊಂಡು ಜೀವ ಬಿಡಬೇಕಾಗುತ್ತದೆ. ಪೌರತ್ವ ಸಾಬೀತು ಪಡಿಸಲು ಇವರ ಹತ್ತಿರ ದಾಖಲೆಗಳಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಪೌರತ್ವ ನೋಂದಣಿ ಕಾಯ್ದೆಗಳನ್ನು ವಿರೋಧಿಸಿ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ತಾ.11ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದ್ದು, ಮನುಷ್ಯ ಪ್ರೀತಿಯ ಸಂದೇಶ ಸಾರುವ ಜನಾಂದೋಲನ ದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಲಿದ್ದಾರೆ ಎಂದರು. ಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಕೆ.ಪಿ.ದಿನೇಶ್, ಕೆ.ಎ.ಆದಂ, ಎಚ್.ಎಂ. ಸೋಮಪ್ಪ ಉಪಸ್ಥಿತರಿದ್ದರು.