ವೀರಾಜಪೇಟೆ, ಜ. 9: ಅಲ್ಪಸಂಖ್ಯಾತ ನಾಗರಿಕರಿಗೆ ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಅರಿವು ಮೂಡಿಸುವ ನಿಟ್ಟಿನಲ್ಲಿ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರ ತಂಡ ಇಂದು ಪಟ್ಟಣದಲ್ಲಿ ಜನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ಪಾಕಿಸ್ತಾನ, ಆಫಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಶೋಷಣೆಗೆ ಒಳಗಾಗಿ ಭಾರತದಲ್ಲಿ ನಿರಾಶ್ರಿತರಾಗಿ ನೆಲೆನಿಂತ 2014ರ ಡಿಸೆಂಬರ್ 31ಕ್ಕಿಂತ ಮೊದಲು ಭಾರತಕ್ಕೆ ಪ್ರವೇಶಿಸಿದ ಹಿಂದು, ಬೌಧ, ಸಿಖ್, ಪಾರ್ಸಿ, ಹಾಗೂ ಕ್ರೈಸ್ತರಿಗೆ ಪೌರತ್ವ ನೀಡಲಾಗುವುದು. ಇದರಿಂದ ಯಾವುದೇ ಕಾರಣಕ್ಕೂ ಭಾರತದಲ್ಲಿನ ಮುಸ್ಲಿಮರಿಗೆ ತೊಂದರೆ ಆಗುವುದಿಲ್ಲ. ಅಸ್ಸಾಂನಲ್ಲಿ ಮಾತ್ರ ಎನ್.ಆರ್.ಸಿ. ಜಾರಿ ಮಾಡಲಾಗಿದೆ. ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಿಮ್ಮನ್ನು ಮುಂದಿಟ್ಟುಕೊಂಡು ಅವರುಗಳು ತಮ್ಮ ಕೆಲಸ ಕಾರ್ಯಗಳನ್ನು ನಡೆಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಲಾಯಿತು.

ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಯಮುನಾ ನಾಣಯ್ಯ, ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಿದ್ದರು.