ಮಡಿಕೇರಿ, ಜ. 9: ಪತ್ರಿಕೋದ್ಯಮದ ಶಿಕ್ಷಣ ಮುಗಿಸಿ, ದೃಶ್ಯಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಲು ಬಯಸುವ ವಿದ್ಯಾರ್ಥಿಗಳಿಗೆ ಎಲ್ಲಕ್ಕಿಂತ ಜ್ಞಾನ ಭಂಡಾರ ಅತಿ ಅಗತ್ಯ ಎಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಕಿವಿಮಾತು ಹೇಳಿದರು.
ಮಡಿಕೇರಿಯ ಫೀ.ಮಾ. ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗ, ಹಳೆ ವಿದ್ಯಾರ್ಥಿಗಳ ಸಂಘ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‍ಕ್ಲಬ್ ಆಶ್ರಯದಲ್ಲಿ, ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ನಡೆಯುತ್ತಿರುವ `ಬಹುಮಾಧ್ಯಮ ಕಾರ್ಯಾಗಾರ'ದಲ್ಲಿ ಮೂರನೇ ದಿನ ಕಾರ್ಯಕ್ರಮ ನಿರೂಪಣೆ ಬಗ್ಗೆ ಸವಿತಾ ರೈ ಮಾತನಾಡಿದರು. ಪತ್ರಿಕೋದ್ಯಮದಲ್ಲಿ ಈಜುವುದು ಅಷ್ಟೊಂದು ಸುಲಭ ಸಾಧ್ಯವಲ್ಲ. ಆದರೆ, ವಿಶೇಷ ಪ್ರತಿಭೆಗಳಿಗೆ ಇಲ್ಲಿ ಸಾಕಷ್ಟು ಅವಕಾಶಗಳಿವೆ ಎಂದ ಅವರು, ಭಾಷಾ ಶುದ್ಧತೆ, ವ್ಯಾಕರಣಗಳ ಜೊತೆಗೆ, ಹಾವ-ಭಾವ, ಭಂಗಿಗಳೂ ನಿರೂಪಕರಿಗೆ ಅಗತ್ಯ ಎಂದರು. ಇದಕ್ಕಾಗಿ ಆ್ಯಂಕರ್‍ಗಳು ಕಾಯಾ ವಾಚಾ ಮನಸಾ ಸಿದ್ಧತೆ ಮಾಡಿಕೊಳ್ಳಬೇಕು. ಸಂದರ್ಶನ, ವಾರ್ತಾ ವಾಚನಗಳ ಸಂದರ್ಭ ಆಯಾ ಪರಿಸ್ಥಿತಿಗೆ ತಕ್ಕಂತೆ ಭಾವ ಬದಲಿಸಿಕೊಳ್ಳುವ ಜಾಣ್ಮೆ ಇರಬೇಕು ಎಂದು ಹೇಳಿದರು.
ಬಲುಕಷ್ಟ: ದೃಶ್ಯ ಮಾಧ್ಯಮಗಳ ನಿರ್ವಹಣೆ ಬಗ್ಗೆ ಮಾತನಾಡಿದ ಕೊಡಗು ಚಾನಲ್ ವ್ಯವಸ್ಥಾಪಕ ಜಿ.ವಿ.ರವಿಕುಮಾರ್, ಸ್ಥಳೀಯ ದೃಶ್ಯವಾಹಿನಿ ಆರಂಭಿಸುವುದು ಅಷ್ಟೊಂದು ಸುಲಭಸಾಧ್ಯವಲ್ಲ ಎಂದರು. ಜಾಹೀರಾತುಗಳೇ ದೃಶ್ಯವಾಹಿನಿಯ ಜೀವಾಳ. ಇದಕ್ಕಾಗಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಪೈಪೋಟಿಗಳನ್ನು ಎದುರಿಸಿಕೊಂಡು, ಜಾಹೀರಾತು ಸಂಗ್ರಹಿಸಬೇಕಾಗುತ್ತದೆ. ಜೊತೆಗೆ ಹೊಣೆಗಾರಿಕೆ ನಿಭಾಯಿಸುವ ಶಕ್ತಿಯೂ ಇರಬೇಕು. ಸ್ಥಳೀಯ ವಾಹಿನಿಗಳಲ್ಲಿ `ಆಲ್ ಇನ್ ಒನ್' ಎಂಬಂತೆ ಎಲ್ಲ ಕೆಲಸಗಳನ್ನು ಮಾಡುವ ಚಾಕಚಕ್ಯತೆ ಇರಲೇಬೇಕು ಎಂದು ರವಿಕುಮಾರ್ ಹೇಳಿದರು.
ನಶಿಸದ ಮೌಲ್ಯ: ಕಾರ್ಯಕ್ರಮಗಳ ನಿರ್ವಹಣೆ ಬಗ್ಗೆ ಮಾತನಾಡಿದ ಚಾನಲ್ 24 ನಿರ್ದೇಶಕ ಜೈರಸ್ ಥಾಮಸ್ ಅಲೆಕ್ಸಾಂಡರ್, ಪತ್ರಕರ್ತರಿಗೆ ಜನ ಸಂಪರ್ಕ ಅತ್ಯಂತ ಮುಖ್ಯ ಎಂದರು. ಒಬ್ಬ ವ್ಯಕ್ತಿಯಲ್ಲಿರುವ ಮೌಲ್ಯಗಳು ಯಾವತ್ತಿಗೂ ನಾಶವಾಗುವುದಿಲ್ಲ. ಈ ಮೌಲ್ಯಗಳೇ ಸದಾ ನಮಗೆ ಬೆನ್ನೆಲುಬಾಗಿ ನಿಲ್ಲುತ್ತವೆ. ವಿಷಯವನ್ನು ಜನರ ಮುಂದೆ ಅಭಿವ್ಯಕ್ತ ಮಾಡುವ ಜಾಣ್ಮೆ, ತಾಳ್ಮೆ, ಛಲ ಮತ್ತು ತಾಲೀಮುಗಳು ಪತ್ರಕರ್ತರ ಜೀವಾಳ ಎಂದು ಅಲೆಗ್ಸಾಂಡರ್ ಹೇಳಿದರು. ಪತ್ರಿಕೋದ್ಯಮವು ಇತರ ವೃತ್ತಿಗಳಂತೆಯೇ ಮೌಲ್ಯಾಧಾರಿತವಾದುದು. ಯಾವುದೇ ವಿಷಯದ ಬಗ್ಗೆ ಪರಿಣತಿ ಪಡೆಯುವುದು ಪತ್ರಕರ್ತನಿಗೆ ಅಗತ್ಯ ಎಂದು ಅಲೆಕ್ಸಾಂಡರ್ ಅಭಿಪ್ರಾಯಿಸಿದರು.
ಈ ವೇಳೆ ಕಾಲೇಜಿನ ಹಿಂದಿನ ಪ್ರಾಂಶುಪಾಲರು ಹಾಗೂ ಕೊಡವ ಅಕಾಡೆಮಿ ಅಧ್ಯಕ್ಷೆ ಡಾ. ಪಾರ್ವತಿ ಅಪ್ಪಯ್ಯ, ಹಳೆ ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷ ಚರ್ಮಣ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ರಮೇಶ್ ಕುಟ್ಟಪ್ಪ, ಪದಾಧಿಕಾರಿ ವಿಘ್ನೇಶ್ ಭೂತನಕಾಡು ಮತ್ತಿತರರು ಹಾಜರಿದ್ದರು. ಕಾರ್ಯಕ್ರಮವನ್ನು ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು.