ಮಡಿಕೇರಿ, ಜ. 9: ಜಿಲ್ಲಾ ಪಂಚಾಯಿತಿ ಜಾಗದಲ್ಲಿದ್ದ ಮನೆ ಗಳನ್ನು ಜಿ.ಪಂ. ಭವನ ನಿರ್ಮಾಣ ಮಾಡುವ ಸಂಬಂಧ ಈ ಹಿಂದೆ ತೆರವುಗೊಳಿಸಲಾಗಿದ್ದು; ಇದುವರೆಗೂ ಅಲ್ಲಿಂದ ತೆರವುಗೊಂಡ ಕುಟುಂಬ ಗಳಿಗೆ ಮನೆ ನಿರ್ಮಾಣವಾಗಿಲ್ಲ ಎಂಬ ಕುರಿತು ಮಡಿಕೇರಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆ. ನಿಡುಗಣೆ ಗ್ರಾ.ಪಂ. ಅಧ್ಯಕ್ಷೆ ರೀಟಾ ಮುತ್ತಣ್ಣ ಈ ಕುರಿತು ಪ್ರಸ್ತಾಪಿಸಿದರು. ಮಾರ್ಚ್ ಒಳಗಾಗಿ ಮನೆ ನಿರ್ಮಾಣವಾಗದಿದ್ದರೆ ಪ್ರತಿಭಟನೆ ನಡೆಸಲು ನಿರಾಶ್ರಿತರು ತೀರ್ಮಾನಿಸಿದ್ದಾರೆ ಎಂದು ಹೇಳಿದರು. ಮನೆ ನಿರ್ಮಾಣ ವಿಚಾರದಲ್ಲಿ ಕಂದಾಯ ಇಲಾಖೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನವಗ್ರಾಮ ಯೋಜನೆಯಡಿ 60 ಮನೆಗಳ ನಿರ್ಮಾಣಕ್ಕಾಗಿ ಕರ್ಣಂಗೇರಿಯಲ್ಲಿ ಜಾಗ ಗುರುತಿಸ ಲಾಗಿತ್ತು. ಆದರೆ ಆ ಜಾಗದಲ್ಲಿ ಪ್ರಕೃತಿ ವಿಕೋಪದಿಂದ ಮನೆ ಕಳೆದು ಕೊಂಡವರಿಗೆ ಮನೆ ನೀಡಲಾಯಿತು. ಈ ವೇಳೆ ಮತ್ತೊಂದು ಜಾಗದಲ್ಲಿ ನವಗ್ರಾಮ ನಿರ್ಮಾಣ ಮಾಡುವದಾಗಿ ಜಿಲ್ಲಾಡಳಿತ ಭರವಸೆ ನೀಡಿತ್ತು. ಆದರೆ ಇದುವರೆಗೆ ಅದೂ ಕೂಡ ನಿರ್ಮಾಣ ವಾಗಿಲ್ಲ ಎಂದು ವಿಷಾದಿಸಿದರು.ಇದಕ್ಕೆ ಧನಿಗೂಡಿಸಿದ ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಅವರು ಜಿ.ಪಂ. ಜಾಗದಿಂದ ತೆರವುಗೊಂಡ ಕುಟುಂಬಗಳಿಗೆ ಇದುವರೆಗೂ ಮನೆ ನಿರ್ಮಿಸಿಕೊಡಲಿಲ್ಲ ಎಂಬದು ಜಿಲ್ಲಾಡಳಿತದ ಬೇಜವಬ್ದಾರಿತನವನ್ನು ಎತ್ತಿ ತೋರಿಸುತ್ತದೆ. ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರಲ್ಲದೆ ಉಳ್ಳವರಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸುವ ಜಿಲ್ಲಾಡಳಿತ; ಇಲ್ಲದವರನ್ನು ಕಡೆಗಣಿ ಸುತ್ತದೆ ಎಂದು ಆರೋಪಿಸಿದರು. ತಹಶೀಲ್ದಾರ್ ಮಹೇಶ್ ಅವರು ಪ್ರತಿಕ್ರಿಯಿಸಿ ಎಲ್ಲದಕ್ಕೂ ನೀತಿ ನಿಯಮ ಎಂಬದು ಇದೆ. ಅದಕ್ಕನುಗುಣವಾಗಿ ಕೆಲಸ ಮಾಡಬೇಕಾಗುತ್ತದೆ ಈ ಬಗ್ಗೆ ಅರಿಯದೆ ಜಿಲ್ಲಾಡಳಿತವನ್ನು ದೂರುವದು ಸರಿಯಲ್ಲ ಎಂದರು. ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಶೀಘ್ರವಾಗಿ ಮನೆ ನಿರ್ಮಿಸಿಕೊಡುವಂತೆ ಅಧ್ಯಕ್ಷೆ ಶೋಭಾ ಮೋಹನ್ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಮೆನುವಿನಲ್ಲಿರು ವಂತೆ ಆಹಾರ ವಿತರಣೆ ಆಗುತ್ತಿಲ್ಲ. ಈ ಬಗ್ಗೆ ಅಧ್ಯಕ್ಷರು ಪರಿಶೀಲಿಸಿ ಕ್ರಮಕೈಗೊಳ್ಳುವಲ್ಲಿ ಬದ್ಧತೆ ತೋರುತ್ತಿಲ್ಲ ಎಂದು ಸದಸ್ಯ ನಾಗೇಶ್ ಕುಂದಲ್ಪಾಡಿ ದೂರಿದರು. ಪೆರಾಜೆ ವಸತಿ ನಿಲಯದಲ್ಲಿ ಗೋದಿಯೇ ಇಲ್ಲ ಎಂದು ಹೇಳಿದರು. (ಮೊದಲ ಪುಟದಿಂದ) ಪ್ರತಿಕ್ರಿಯಿಸಿದ ತಾ.ಪಂ. ಇಓ ಲಕ್ಷ್ಮಿ ಅವರು ಗೋದಿ ವಿತರಣೆ ವಿಚಾರದಲ್ಲಿ ಈ ಹಿಂದಿನ ಅಧಿಕಾರಿಗಳ ನಿರ್ಲಕ್ಷ್ಯತೆ ಇತ್ತು ಆದರೆ ಈಗ ಸಮಸ್ಯೆ ಇಲ್ಲ. ಆದಷ್ಟು ಶೀಗ್ರ ಗೋದಿ ಸರಬರಾಜು ಮಾಡುವಂತೆ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.

ಸದಸ್ಯ ಅಪ್ರುರವೀಂದ್ರ ಮಾತನಾಡಿ; ಅರೆಕಾಡುವಿನಲ್ಲಿ ಸ್ಮಶಾನಕ್ಕೆ ಹಾಗೂ ಕಸ ವಿಲೇವಾರಿಗೆ ಜಾಗವಿಲ್ಲ. ಈ ಬಗ್ಗೆ ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 15 ದಿನಗಳ ಒಳಗಾಗಿ ಈ ಬಗ್ಗೆ ಮಾಹಿತಿ ನೀಡುವದಾಗಿ ತಹಶೀಲ್ದಾರ್ ಮಹೇಶ್ ಹೇಳಿದರು. ಪೂವಲೆಮನಿ ಕಾಲೋನಿಯಲ್ಲಿ ಅಂಗನವಾಡಿ ಕಟ್ಟಡ ಇಲ್ಲದ ಬಗ್ಗೆ ಹಾಗೂ ತಾಪ್ರಿಕಾಡು ಗ್ರಾಮದಲ್ಲಿ ಅಂಗನವಾಡಿ ಕಟ್ಟಡದ ಜಾಗಕ್ಕೆ ದಾಖಲಾತಿ ಮಾಡಿಕೊಡುವ ವಿಚಾರದ ಸಂಬಂಧ ತಾ.ಪಂ. ಅಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂದು ಸದಸ್ಯ ದಬ್ಬಡ್ಕ ಶ್ರೀಧರ್ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಅಧ್ಯಕ್ಷೆ ಶೋಭಾ ಮೋಹನ್ ವಿನಾಕಾರಣ ನಮ್ಮ ಮೇಲೆ ಆರೋಪ ಹೊರಿಸಬೇಡಿ ಎಂದು ಪ್ರತ್ಯುತ್ತರ ನೀಡಿದರು. ಮಧ್ಯಪ್ರವೇಶಿಸಿದ ಸದಸ್ಯ ನಾಗೇಶ್ ಕುಂದಲ್ಪಾಡಿ 15 ದಿನದಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಸಭೆ ನಡೆಸಿ ಈ ಸಂಬಂಧ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಸಲಹೆಯಿತ್ತರು. ಸ್ಥಾಯಿ ಸಮಿತಿ ಅಧ್ಯಕ್ಷ ಕೊಡಪಾಲು ಗಣಪತಿ ಇದಕ್ಕೆ ಸಮ್ಮತಿಸಿದರು.

ಕೆಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರುಗಳನ್ನು ದಿಢೀರನೆ ವರ್ಗಾಯಿಸಲಾಗುತ್ತಿದೆ ಈ ಬಗ್ಗೆ ಸ್ಥಳೀಯ ಪ್ರತಿನಿಧಿಗಳಿಗೆ ಮಾಹಿತಿಯೇ ಇರುವದಿಲ್ಲ ಎಂದು ದಬ್ಬಡ್ಕ ಶ್ರೀಧರ್ ಹೇಳಿದರು. ಎಸ್‍ಡಿಎಂಸಿಗೆ ಈ ಬಗ್ಗೆ ತೀರ್ಮಾನಿಸುವ ಅಧಿಕಾರವಿದೆ ಒಬ್ಬರನ್ನೆ ಮುಂದುವರೆಸಬೇಕೆಂಬ ನಿಯಮ ಇಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ತಿಳಿಸಿದರು.

ಸದಸ್ಯ ರಾಯ್ ತಮ್ಮಯ್ಯ ಮಾತನಾಡಿ; ಸರ್ಕಾರದಿಂದ 34 ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮಾತ್ರ ಮನೆಗಳನ್ನು ನೀಡಲಾಗಿದೆ. ಉಳಿದವರಿಗೆ ಮಾಸಿಕ ಬಾಡಿಗೆಯನ್ನು ಕೂಡ ನಿಲ್ಲಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುವದಾಗಿ ತಹಶೀಲ್ದಾರ್ ಮಹೇಶ್ ಹೇಳಿದರು.