ಮಡಿಕೇರಿ, ಜ. 9: ಇಲ್ಲಿನ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಈಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯ ಗೋಚರ ಫಲದಂತೆ, ನಿನ್ನೆಯಿಂದ ದೋಷ ಪರಿಹಾರ ಪೂಜೆಗಳೊಂದಿಗೆ; ಮುಂದಿನ ಮಾರ್ಚ್25ರಂದು ದೇವರಿಗೆ ಅಷ್ಟಬಂಧ ಬ್ರಹ್ಮಕಲ ಶೋತ್ಸವ ನೆರವೇರಿಸಲು ಸಂಕಲ್ಪ ಕೈಗೊಳ್ಳಲಾಯಿತು. ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯಗಳೊಂದಿಗೆ ಧಾರ್ಮಿಕ ವಿಧಿ - ವಿಧಾನಗಳು ಜರುಗಿತು.
ಸನ್ನಿಧಿಯಲ್ಲಿ ಅಘೋರ ಹೋಮ, ದುರ್ಗಾಪೂಜೆ, ಮಹಾಗಣಪತಿ ಹೋಮ, ಪವಮಾನ ಹೋಮ, ತಿಲ ಹೋಮಗಳನ್ನು ನೆರವೇರಿಸು ವುದರೊಂದಿಗೆ ಪ್ರೇತಗಳನ್ನು ಆಹ್ವಾನಿಸಿ ಉಚ್ಚಾಟನೆ ಮುಖಾಂತರ ವಿಷ್ಣು ಸಾಯುಜ್ಯ ಕಲ್ಪಿಸಲಾಯಿತು. ಸನ್ನಿಧಿಯಲ್ಲಿ ಸಂಭವಿಸಬಹುದಾದ ದೋಷಗಳ ನಿವೃತ್ತಿಗಾಗಿ ಗೋಪೂಜೆ, ಸುವಾಸಿನಿ ಪೂಜೆ, ದ್ವಾದಶ ಬ್ರಾಹ್ಮಣ ಸೇವೆಯೊಂದಿಗೆ ಶ್ರೀ ಓಂಕಾರೇಶ್ವರನಿಗೆ ಏಕಾದಶ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಕೈಗೊಳ್ಳಲಾಯಿತು.
ಓಂಕಾರೇಶ್ವರ ಮತ್ತು ಪರಿವಾರ ದೇವತೆಗಳಿಗೆ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕೈಂಕರ್ಯದೊಂದಿಗೆ; ಧಾರ್ಮಿಕ ವಿಧಿಗಳನ್ನು ಪೂರೈಸಿದ ಬಳಿಕ ಮಹಾಪೂಜೆ ನಡೆಯಿತು. ಈ ಸಂದರ್ಭ ಪದ್ಮನಾಭ ತಂತ್ರಿಗಳು ಆಶಯ ನುಡಿಗಳೊಂದಿಗೆ ಭವಿಷ್ಯದಲ್ಲಿ ಎಲ್ಲ ಸಂಕಲ್ಪಿತ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವಂತೆ ಸಂಕಲ್ಪ ಬೋಧಿಸಿದರು.
ಬರುವ ಮಾರ್ಚ್ 19ರಂದು ದೇವತಾ ಕೈಂಕರ್ಯಗಳನ್ನು ಆರಂಭಿಸುವುದರೊಂದಿಗೆ, ಮಾ. 25ರಂದು ಚಾಂದ್ರಮಾನ ಯುಗಾದಿಯ ಪರ್ವ ದಿವಸ ಶ್ರೀ ಓಂಕಾರೇಶ್ವರ ದೇವರ ಅಷ್ಟಬಂಧ ಬ್ರಹ್ಮಕಲ ಶೋತ್ಸವವನ್ನು ಶುಭ ಮುಹೂರ್ತದಲ್ಲಿ ನೆರವೇರಿಸ ಲಾಗುವುದು ಎಂದು ದಿನಾಂಕ ಪ್ರಕಟಿಸಿದರು. ಈ ವೇಳೆ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಸದಸ್ಯರುಗಳಾದ ಉದಯಕುಮಾರ್, ಪ್ರಕಾಶ್ ಆಚಾರ್ಯ, ಸುನಿಲ್ ಕುಮಾರ್, ಕವಿತಾ ಕಾವೇರಮ್ಮ ಸೇರಿದಂತೆ ಅರ್ಚಕರುಗಳಾದ ಸಂತೋಷ್ ಭಟ್, ಆದರ್ಶ್ ಭಟ್, ಪುರೋಹಿತ ವರ್ಗ ಹಾಗೂ ಸದ್ಭಕ್ತರು ಪಾಲ್ಗೊಂಡಿದ್ದರು. ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಪಾಲೂರಿನ ಬೊಳ್ಳಿಯಂಡ ಹರೀಶ್, ನಿವೃತ್ತ ಅಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.