ಮಡಿಕೇರಿ, ಜ. 9: ಆರೋಗ್ಯ ಇಲಾಖೆಯ ಹಲವು ಕಾರ್ಯವಿಧಾನಗಳನ್ನು ಅನುಸರಿಸಿ ಕಾರ್ಯಕ್ಷೇತ್ರಕ್ಕೆ ನಿಗದಿತ ಚೌಕಟ್ಟಿಲ್ಲದೆ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳದ ಕೂಗು ಸರ್ಕಾರದ ಕಿವಿಗೆ ತಟ್ಟಿಲ್ಲ. ವೇತನದಲ್ಲಿ ಸುಧಾರಣೆ ಕಾಣದೇ ಇರುವುದರಿಂದ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಜತೆಗೆ ಸಿಬ್ಬಂದಿಗಳ ಕೊರತೆಯಿಂದಲೂ ಪರಿಪೂರ್ಣ ಸೇವೆ ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ಜಿಲ್ಲೆಯ ಆಶಾ ಕಾರ್ಯಕರ್ತೆಯರನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ 41 ಹುದ್ದೆಗಳ ಕೊರತೆ ಇದ್ದು, ಇದರಿಂದ ಕಾರ್ಯಸಾಧನೆ ಕ್ಷೀಣಿಸುತ್ತಿದೆ.

ಸದಾ ಸಾಂಸಾರಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ 30 ಹೆಚ್ಚು ಕಾರ್ಯಕ್ರಮವನ್ನು ಗ್ರಾಮೀಣ ಭಾಗಗಳಿಗೆ ನಿಗದಿತ ಸಮಯದಲ್ಲಿ ಹೊತ್ತು ತಿರುಗಬೇಕು. ಇವರಿಗೆ ಕಾಡು ಪ್ರಾಣಿಗಳ ಉಪಟಳ ತಪ್ಪಿದ್ದಲ್ಲ. ಕಿಡಿಗೇಡಿಗಳ ಕಿರುಕುಳದ ಸ್ಥಿತಿಯು ಎದುರಿಸುತ್ತಾ ಸದಾ ಭಯದ ನೆರಳಿನಲ್ಲೇ ಆರೋಗ್ಯ ಇಲಾಖೆಯ ಯೋಜನೆಗಳನ್ನು ಗ್ರಾಮದೊಳಗೆ ತಲುಪಿಸುತ್ತಾ ತಮ್ಮ ಸೇವೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಾರೆ. ಆದರೂ ಸರ್ಕಾರ ಇವರ ಸೇವೆಗೆ ಸಮರ್ಪಕ ವೇತನ ಕೊಡುವಲ್ಲಿ ನಿರ್ಲಕ್ಷ್ಯ ತಾಳಿದೆ. ಕೇವಲ 4 ಸಾವಿರ ರೂಪಾಯಿ ವೇತನಕ್ಕೆ ದುಡಿಯುವ ಇವರುಗಳದ್ದು ಆರೋಗ್ಯ ಇಲಾಖೆಯಲ್ಲಿ ಮೌನ ಕ್ರಾಂತಿ.

ಜಿಲ್ಲೆಯ 104 ಪಂಚಾಯಿತಿಗಳು, 291 ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಕೇವಲ 458 ಕಾರ್ಯಕರ್ತರಿದ್ದರೆ. 1000 ಜನರಿಗೆ ಒಬ್ಬ ಆಶಾ ಕಾರ್ಯಕರ್ತರು ಇರಬೇಕು. 5,54,519 ಜನಸಂಖ್ಯೆವುಳ್ಳ ಕೊಡಗು ಜಿಲ್ಲೆಗೆ 502 ಆಶಾ ಕಾರ್ಯಕರ್ತರ ಅವಶ್ಯಕತೆ ಇದೆ.

ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಇವರುಗಳು ಸುರಕ್ಷಿತ ಹೆರಿಗೆ, ಆರೋಗ್ಯವಂತ ಶಿಶುವಿನ ಜನನ, ಆರೈಕೆ ಹಾಗೂ ಪೌಷ್ಟಿಕತೆಯ ಅರಿವು ಮೂಡಿಸುತ್ತ, ಕ್ಷಯ, ಕುಷ್ಠ ರೋಗ, ಮಲೇರಿಯಾ, ಡೆಂಗ್ಯೂ, ಚಿಕೂನ್‍ಗುನ್ಯಾ ಮತ್ತಿತರ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಅವಿರತ ಶ್ರಮಿಸುತ್ತಿದ್ದಾರೆ. ಕುಟುಂಬ ಯೋಜನೆ, ಶೌಚಾಲಯ ಬಳಕೆ, ಗರ್ಭಿಣಿಯರ ಆರೈಕೆ, ಗರ್ಭಿಣಿಯರಿಗೆ ಕಾರ್ಡ್ ಮಾಡಿಸುವುದು, ಗರ್ಭಿಣಿಯರನ್ನು ಆಸ್ಪತ್ರೆಗಳಿಗೆ ಆರೋಗ್ಯ ತಪಾಸಣೆ ಮತ್ತು ಲಸಿಕೆಗೆ ಕರೆದೊಯ್ಯುವುದು, ಶಿಶುವಿಗೆ ಕಾಲಕಾಲಕ್ಕೆ ಅಗತ್ಯ ಲಸಿಕೆಗಳನ್ನು ಕೊಡಿಸುವುದು, ರೋಗ ಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುವುದು, ಪೆÇಲಿಯೋ ಲಸಿಕೆ ಹಾಕಲು ನೆರವಾಗುವುದು, ಎಚ್‍ಐವಿ ಮತ್ತು ಕ್ಷಯ ಪೀಡಿತರನ್ನು ಪತ್ತೆ ಹಚ್ಚುವುದು, ಎಚ್‍ಐವಿ ಮತ್ತು ಕ್ಷಯ ಪೀಡಿತರಿಗೆ ಮಾತ್ರೆಗಳ ವಿತರಣೆ ಗ್ರಾಮೀಣ ಭಾಗಗಳಲ್ಲಿ ಹೊಸ ಕಾಯಿಲೆಗಳನ್ನು ಗುರುತಿಸುವುದು, ಆರೋಗ್ಯ ಶಿಬಿರಗಳಿಗೆ ಜನರನ್ನು ಕರೆತರುವುದು, ಮಹಿಳೆಯರಿಗೆ ಗರ್ಭ ನಿರೋಧಕ ಕ್ರಮಗಳ ಬಗ್ಗೆ ತಿಳಿಸಿಕೊಡುವುದು, ಆರೋಗ್ಯ ಇಲಾಖೆಯ ಎಲ್ಲ್ಲ ಯೋಜನೆಗಳ ಬಗ್ಗೆ ಪ್ರಚಾರ ನಡೆಸುವ ಗ್ರಾಮೀಣ ಸಮಾಜದ ಆರೋಗ್ಯಕರ ಬದಲಾವಣೆಯಲ್ಲಿ ಇವರದ್ದು ಬಹುದೊಡ್ಡ ಸೇವೆಯೇ ಸಲ್ಲುತ್ತಿದೆ. ಈಗ ಹೆಚ್ಚುವರಿಯಾಗಿ ಇಂದ್ರ ಧನುಷ್ ಮಿಷನ್ ಯೋಜನೆಯ ಹೊಣೆಯನ್ನೂ ಹೆಗಲೇರಿದೆ. ಮಾರ್ಚ್ 20ರೊಳಗೆ ಲಸಿಕಾ ಅಭಿಯಾನವನ್ನು ಪೂರ್ಣಗೋಳಿಸಬೇಕು ಎಂಬ ಜವಾಬ್ದಾರಿ ನೀಡಿದೆ. ಇಷ್ಟೆಲ್ಲಾ ಹೊಣೆ ಹೊತ್ತ ಆಶಾ ಕಾರ್ಯಕರ್ತರ ವೇತನ ಹೆಚ್ಚಳದ ಕೂಗು ಸರ್ಕಾರದ ಕಿವಿಗೆ ಮುಟ್ಟಿಲ್ಲ.

ಜಿಲ್ಲೆಯ ಜನಸಂಖ್ಯೆಯ ಅನುಗುಣಕ್ಕೆ ಹೆಚ್ಚಾಗಿ 44 ಆಶಾ ಕಾರ್ಯಕರ್ತರ ಅವಶ್ಯಕತೆ ಇದೆ. 4000 ರೂಪಾಯಿ ವೇತನಕ್ಕೆ ದುಡಿಯುವ ಇವರ ದಣಿವು ಸರಕಾರಕ್ಕೆ ಅರ್ಥ ಆಗದಿರುವುದು ಬೇಸರ. -ಜಗದೀಶ್ ಜೋಡುಬೀಟಿ