ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಿತು.
ಶಾಲಾ ಆವರಣದಲ್ಲಿ ವಿಶಾಲವಾದ ರಂಗಮಂಟಪ ನಿರ್ಮಾಣ ಮಾಡಿ ಅಲ್ಲಿ ವಿವಿಧ ಮನರಂಜನಾ ಕಾರ್ಯಕ್ರಮ ನಡೆಸಲಾಯಿತು. ಪ್ರಮುಖವಾಗಿ ಶಾಲಾ ಮಕ್ಕಳಿಂದ ಮಂಗಳೂರು ಶೈಲಿಯ ಯಕ್ಷಗಾನ ನೃತ್ಯ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್, ಜಂಟಿ ನಿರ್ದೇಶಕ ತಿರುಮಲ್ಲೇಶ್, ತಾ.ಪಂ. ಸದಸ್ಯೆ ಪುಷ್ಪ, ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ, ಡಯಟ್ನ ಹಿರಿಯ ಉಪನ್ಯಾಸಕ ಕೆ.ವಿ. ಸುರೇಶ್, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಪಿ. ಶೇಖರ್ ಮುಂತಾದವರು ಹಾಜರಿದ್ದರು.
ಶಾಲಾ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಸ್ವಾಗತಿಸಿ, ಸಹ ಶಿಕ್ಷಕ ಪ್ರಕಾಶ್ ನಿರೂಪಿಸಿ, ಶಿಕ್ಷಕ ಕರಿಯಪ್ಪ ಶಾಲಾ ವರದಿ ವಾಚಿಸಿದರು. ಶಾಸಕ ರಂಜನ್ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.ಸುಂಟಿಕೊಪ್ಪ: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1991-92ನೇ ಸಾಲಿನ 7ನೇ ತರಗತಿ ವಿದ್ಯಾರ್ಥಿಗಳು ತಮ್ಮ ಸಂಘಟನೆ ವತಿಯಿಂದ ಶಾಲೆಗೆ ಇನ್ವರ್ಟರ್ ಅನ್ನು ಕೊಡುಗೆಯಾಗಿ ನೀಡಿದರು.
1991-92ನೇ ಸಾಲಿನ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ತಾವು ವಿದ್ಯಾರ್ಜನೆ ಪಡೆದ ಶಾಲೆಗೆ ತಮ್ಮ ಸಂಘಟನೆಯ ವತಿಯಿಂದ ಇನ್ವರ್ಟರ್ ಅನ್ನು ಶಾಲಾ ಮುಖ್ಯೋಪಾಧ್ಯಾಯಿನಿ ವೀರಾ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ 1991-92ನೇ ಸಾಲಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಇದ್ದರು.ಸೋಮವಾರಪೇಟೆ: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಪ್ರೇರಣಾದಾಯಕವಾಗಿದ್ದು, ಯುವ ಜನಾಂಗ ಅವರ ಆದರ್ಶ ಪಾಲಿಸಬೇಕು ಎಂದು ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್. ಸದಾನಂದ ತಿಳಿಸಿದರು.ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಅಂಗವಾಗಿ ಪಟ್ಟಣದ ಮಾನಸ ಸಭಾಂಗಣದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸ್ವರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಯುವ ಜನಾಂಗ ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸುಭೀಕ್ಷ ಸಮಾಜ ನಿರ್ಮಿಸಬೇಕೆಂದರು.
ಜಯಂತ್ಯೋತ್ಸವ ಸಮಿತಿ ಕಾರ್ಯದರ್ಶಿ ಎಸ್.ಮಹೇಶ್ ಮಾತನಾಡಿ, ವಿವೇಕಾನಂದರ ವಿಚಾರಧಾರೆಗಳನ್ನು ಇಂದಿನ ವಿದ್ಯಾರ್ಥಿಗಳಲ್ಲಿ, ಯುವಕರಲ್ಲಿ ಬಿತ್ತುವ ದೃಷ್ಟಿಯಿಂದ ಕಳೆದ ಏಳು ವರ್ಷಗಳಿಂದ ವಿವೇಕಾನಂದ ಜಯಂತಿ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ವರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಮಾನಸ ಹಾಲ್ನ ಮಾಲೀಕರು ಹಾಗೂ ಉದ್ಯಮಿಗಳಾದ ಬಿ.ಎಸ್. ಶ್ರೀಧರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ರಮೇಶ್, ವಿವೇಕಾನಂದ ಜಯಂತ್ಯೋತ್ಸವ ಸಮಿತಿ ಖಜಾಂಜಿ ಮೃತ್ಯುಂಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ಎಲ್.ಕೆ.ಜಿ. - ಯು.ಕೆ.ಜಿ ಯಿಂದ 4ನೇ ತರಗತಿವರೆಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ವಾಮಿ ವಿವೇಕಾನಂದರ ಛದ್ಮವೇಶ ಸ್ಪರ್ಧೆ, 5ರಿಂದ 7ನೇ ತರಗತಿಯವರೆಗೆ ವಿವೇಕಾನಂದರ ಬಗ್ಗೆ ನಿಮಗೇನು ಗೊತ್ತು? ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಿತು.ಸುಂಟಿಕೊಪ್ಪ: ದೇಶದ ಪ್ರಜಾಪ್ರಭುತ್ವ ಉಳಿಸಿ ಬೆಳೆಸಬೇಕಾದರೆ ಯುವಜನತೆ ತಾವು ಮತದಾನದ ಹಕ್ಕು ಹೊಂದಿದ್ದರೆ ದೇಶದ ಪ್ರಜಾಪ್ರಭುತ್ವ ಉಳಿಯಲಿದೆ ಎಂದು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪಿ. ಸೋಮಚಂದ್ರ ಹೇಳಿದರು.
ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾರರ ನೋಂದಾಣಿ ಜಾಗೃತಿ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಉಪನ್ಯಾಸಕ ಪಿ. ಸೋಮಚಂದ್ರ ಮಾತನಾಡಿ, ಮತದಾನ ನಮಗೆ ನೀಡಿರುವ ಪವಿತ್ರ ಹಕ್ಕು 18 ವರ್ಷ ತುಂಬಿದ ಎಲ್ಲರೂ ಮತದಾನ ಮಾಡಲು ಉತ್ಸುಕರಾಗಬೇಕು ಮತದಾನವು ನಮ್ಮ ಜವಬ್ಧಾರಿ ಹಾಗೂ ಹೊಣೆಗಾರಿಕೆ ದೇಶದ ಪ್ರಜಾಪ್ರಭುತ್ವ ಉಳಿವು ನಾವು ಮಾಡುವ ಮತದಾನದ ಮೇಲೆ ಅವಲಂಭಿತವಾಗಿದೆ ಎಂದರು. ಪ್ರಾಸ್ತಾವಿಕವಾಗಿ ಉಪನ್ಯಾಸಕಿ ಕೆ.ಸಿ. ಕವಿತ ಮಾತನಾಡಿ, 1.1.2020ಕ್ಕೆ 18 ವರ್ಷ ತುಂಬಿದ ಎಲ್ಲರೂ ಕಡ್ಡಾಯವಾಗಿ ನಮೂನೆ 6 ಅನ್ನು ಬಳಸಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾವಣಿ ಮಾಡಿಸಿಕೊಂಡು ಮತದಾನದ ಹಕ್ಕನ್ನು ಹೊಂದಿಕೊಳ್ಳಬೇಕೆಂದರು. ಕಾಲೇಜು ವತಿಯಿಂದ ಆಯೋಜಿತ ಜಾಥಾಕ್ಕೆ ಸಮಾಜ ಶಾಸ್ತ್ರ ಉಪನ್ಯಾಸಕಿ ಮಂಜುಳಾ ಮತ್ತು ಬೆಳ್ಳಿಯಪ್ಪ ಮತದಾನ ಮತ್ತು ಚುನಾವಣೆ ಸಂಬಂಧಿಸಿದ ಘೋಷಣೆಗಳನ್ನು ಕೂಗುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಉಪನ್ಯಾಸಕರಾದ ಈಶ, ಪಿಲಿಫ್ವಾಸ್, ಸುಕನ್ಯ ಮತ್ತಿತರರು ಇದ್ದರು.