ಮಡಿಕೇರಿ, ಜ. 9: ಅಕ್ರಮವಾಗಿ ಭಾರೀ ಮೌಲ್ಯದ ಆನೆದಂತವನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಾಹನ ಸಹಿತ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ಕೊಡಗಿನ ಅಪ್ಪಂಗಳ ಹೆರವನಾಡು ನಿವಾಸಿ ಯಾಗಿದ್ದು, ಮತ್ತೋರ್ವ ಸಕಲೇಶಪುರ ದವನಾಗಿದ್ದಾನೆ. ಬಂಧಿತರಿಂದ ದಂತ ಸಹಿತ ಕೃತ್ಯಕ್ಕೆ ಬಳಸಿದ ಮಾರುತಿ ವ್ಯಾನ್ ಅನ್ನು ವಶಪಡಿಸಿಕೊಳ್ಳಲಾಗಿದೆ.ಅಪ್ಪಂಗಳ ಹೆರವನಾಡು ನಿವಾಸಿ ದಿನೇಶ್ ಪಿ.ಕೆ. ಎಂಬಾತ ಬೆಳ್ತಂಗಡಿ ಮೂಲದವನಾಗಿದ್ದು, ಈತನಿಗೆ ಆ ವ್ಯಾಪ್ತಿಯಲ್ಲಿ ಹಲವರ ಸಂಪರ್ಕ ವಿತ್ತೆನ್ನಲಾಗಿದೆ. ಈತ ಸಕಲೇಶಪುರದ ಕುಮಾರ ಎಂಬಾತನಿಂದ ಅಂದಾಜು ರೂ. 30 ಲಕ್ಷ ಮೌಲ್ಯದ ಎರಡು ಆನೆ ದಂತಗಳನ್ನು ಪಡೆದುಕೊಂಡಿದ್ದು, ಆತನೊಂದಿಗೆ ಧರ್ಮಸ್ಥಳದ ಕಡೆಗೆ ವ್ಯಾನ್‍ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಈ ಪ್ರಕರಣ ವನ್ನು ಬಯಲಿಗೆಳೆದಿದ್ದಾರೆ. ಇದೀಗ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಬೆಳ್ತಂಗಡಿಯ ವಲಯ ಅರಣ್ಯಾಧಿ ಕಾರಿಗಳ ಕಚೇರಿಗೆ ವರ್ಗಾಯಿಸ ಲಾಗಿದೆ. ಆರೋಪಿ ಗಳಿಬ್ಬರು ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.