ಮಡಿಕೇರಿ, ಜ. 9: ದೂರ ಸಂಪರ್ಕ ವ್ಯವಸ್ಥೆಯಲ್ಲಿ ರಾಷ್ಟ್ರದಲ್ಲಿ ಪ್ರಮುಖವಾಗಿರುವ ಭಾರತ್ ಸಂಚಾರ್ ನಿಗಮ್ ನಿಯಮಿತ (ಬಿ.ಎಸ್.ಎನ್.ಎಲ್.) ಸಂಸ್ಥೆಯ ಸೇವೆಯಲ್ಲಿ ಮುಂದಿನ ತಿಂಗಳು ಫೆಬ್ರವರಿಯಿಂದ ಭಾರೀ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಎದುರಾಗಿವೆ. ಈ ಸಂಸ್ಥೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿದ್ದು, ಇದರ ನಿರ್ವಹಣೆÉ ಕಷ್ಟಸಾಧ್ಯವಾಗುತ್ತಿದೆ ಎಂಬ ಕಾರಣದಿಂದಾಗಿ ಬಿ.ಎಸ್.ಎನ್.ಎಲ್. ತನ್ನ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ದೃಢ ನಿಲುವಿಗೆ ಬಂದಿರುವುದರಿಂದ ಇದು ದೂರ ಸಂಪರ್ಕ ವ್ಯವಸ್ಥೆಯ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆ ಇದೀಗ ಬಹುತೇಕ ಖಚಿತವಾಗುತ್ತಿದೆ.
ಕೊಡಗು ಜಿಲ್ಲೆ ಮೊದಲೇ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿ ಈ ಹಿಂದಿನಿಂದಲೂ ದೂರವಾಣಿ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಇದೀಗ ಈ ತಾಪತ್ರಯ ಮತ್ತಷ್ಟು ಉಲ್ಬಣಿಸಲಿದೆ ಎನ್ನಲಾಗುತ್ತಿದೆ. ಈ ಹಿಂದಿನಿಂದಲೂ ಜಿಲ್ಲೆಗೆ ಸಂಬಂಧಿಸಿದಂತೆ ಹೇಳುವುದಾದರೆ ದೂರವಾಣಿ ಸಂಪರ್ಕ - ಸೇವೆಯಲ್ಲಿ ಸರಕಾರಿ ಸ್ವಾಮ್ಯದ ಈ ಸಂಸ್ಥೆಯಲ್ಲಿ ನೂರೆಂಟು ವಿಘ್ನಗಳು ಪದೇ ಪದೇ ಎದುರಾಗುತ್ತಿದ್ದವು. ಅಲ್ಲಲ್ಲಿ ಗ್ರಾಹಕರಿಂದ ಪ್ರತಿಭಟನೆ- ಆಕ್ರೋಶಗಳು ಒಂದೆಡೆಯಾದರೆ ಸಿಬ್ಬಂದಿಗಳ ಕೊರತೆ - ಸಾಮಗ್ರಿಗಳ ಕೊರತೆ, ವಾತಾವರಣದ ವ್ಯತಿರಿಕ್ತ ಪರಿಣಾಮಗಳು ಮತ್ತೊಂದೆಡೆಯಾಗಿ ಗ್ರಾಹಕರು ಸ್ಥಿರದೂರವಾಣಿ- ಮೊಬೈಲ್ ಇಂಟರ್‍ನೆಟ್, ಬ್ರ್ಯಾಡ್‍ಬ್ಯಾಂಡ್ ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳಿಗಾಗಿ ತೀವ್ರ ಪ್ರಯಾಸ ಪಡುತ್ತಿದ್ದುದು ಎಲ್ಲರಿಗೂ ಅರಿವಿದೆ. ಒಂದೊಮ್ಮೆ ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್. ವ್ಯವಸ್ಥೆ ಮಾತ್ರ ಪ್ರಮುಖವಾಗಿದ್ದು, ನಂತರದ ವರ್ಷಗಳಲ್ಲಿ ಸಮಸ್ಯೆಗಳ ಕಾರಣದಿಂದಾಗಿ ಜನತೆ ಖಾಸಗಿ ಕಂಪೆನಿಗಳತ್ತ ಬದಲಾವಣೆಯಾಗಿದ್ದರು. ಇದರಿಂದಾಗಿ ಬಹುತೇಕ ಕಡೆಗಳಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರದೂರವಾಣಿ ಸಂಪರ್ಕಗಳೇ ಇಲ್ಲದಂತಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದರೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಆಧುನೀಕತೆಯ ಪರಿಣಾಮದ ಮೊಬೈಲ್, ಇಂಟರ್‍ನೆಟ್, (ಮೊದಲ ಪುಟದಿಂದ) ಬ್ರ್ಯಾಡ್‍ಬ್ಯಾಂಡ್ ಮತ್ತಿತರ ಸೇವೆಗಳು ಆರಂಭಗೊಂಡಿತ್ತಾದರೂ ‘ನೆಟ್‍ವರ್ಕ್’ನ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಪದೇ ಪದೇ ಎದುರಾಗುತ್ತಿದ್ದವು. ಕೆಲವಾರು ದೂರವಾಣಿ ವಿನಿಮಯ ಕೇಂದ್ರಗಳಿಗೆ ವಿದ್ಯುತ್ ವ್ಯವಸ್ಥೆಯಲ್ಲಿ ತೊಂದರೆ ಎದುರಾದಾಗ ಕನಿಷ್ಟಪಕ್ಷ ಜನರೇಟರ್‍ಗಳಿಗೆ ಇಂಧನ ಪೂರೈಸುವಲ್ಲೂ ಸಂಸ್ಥೆ ವಿಫಲವಾಗುತ್ತಿದ್ದುದು, ಹಿರಿಯ ಅಧಿಕಾರಿಗಳು ಗುಡ್ಡಗಾಡು ಪ್ರದೇಶವಾಗಿದ್ದ ಈ ಜಿಲ್ಲೆಯನ್ನು ತೀರಾ ಕಡೆಗಣಿಸುತ್ತಿದ್ದುದೂ ಇಲ್ಲಿ ಉಲ್ಲೇಖನೀಯ.
ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಎದುರಾದಾಗಲಂತೂ ಜಿಲ್ಲೆಯಾದ್ಯಂತ ದೂರವಾಣಿ- ಮೊಬೈಲ್ ಸಂಪರ್ಕಗಳು ಇಲ್ಲದೆ ಜನತೆ ಶಿಲಾಯುಗದ ಮಾದರಿಯ ಪರಿಸ್ಥಿತಿಯನ್ನು ಎದುರಿಸಿದ ದಾರುಣತೆ ಇನ್ನೂ ಜನತೆಯ ಸ್ಮøತಿಪಟಲದಿಂದ ಮರೆಯಾಗಿಲ್ಲ.
ಫೆ.1ರಿಂದ ನಿವೃತ್ತರಾಗಲಿದ್ದಾರೆ 116 ಮಂದಿ
ಸಿಬ್ಬಂದಿ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬಿ.ಎಸ್.ಎನ್.ಎಲ್. ರಾಷ್ಟ್ರವ್ಯಾಪಿಯಾಗಿ, 50 ವರ್ಷ ಮೇಲ್ಪಟ್ಟಿರುವ ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿ.ಆರ್.ಎಸ್.) ಯನ್ನು ಜಾರಿಗೆ ತಂದಿದೆ. ಇದಕ್ಕೆ ಅರ್ಹತೆ ಇರುವ ಸಿಬ್ಬಂದಿಗಳು ಅರ್ಜಿ ಸಲ್ಲಿಸಲು ಡಿ.3 ಅಂತಿಮ ದಿನವಾಗಿದ್ದು, ಅರ್ಹತೆ ಇದ್ದ ಸುಮಾರು 138ರಷ್ಟು ಸಿಬ್ಬಂದಿಗಳು ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ 116 ಮಂದಿಯ ಅರ್ಜಿಗಳು ಪುರಸ್ಕಾರಗೊಂಡಿದ್ದು, ಇದೇ ಜನವರಿ 31ಕ್ಕೆ 116 ಮಂದಿ ಸಿಬ್ಬಂದಿಗಳು ಸ್ವಯಂ ನಿವೃತ್ತಿ ಹೊಂದಲಿದ್ದಾರೆ.
ಇದ್ದ ಸಿಬ್ಬಂದಿಗಳೇ ಸುಮಾರು 250 ಮಾತ್ರ
ಜಿಲ್ಲೆಯಲ್ಲಿನ ಬಿ.ಎಸ್.ಎನ್.ಎಲ್.ನ ಆಡಳಿತ ಕಚೇರಿ ಕಳೆದ ಆಗಸ್ಟ್ ತಿಂಗಳಿನಲ್ಲೇ ಮೈಸೂರಿಗೆ ವರ್ಗಾವಣೆಯಾಗಿದೆ. ಇಲ್ಲಿ ಕೇವಲ ನಿರ್ವಹಣೆಯ ವ್ಯವಸ್ಥೆ ಮಾತ್ರ ಪ್ರಸ್ತುತ ನಡೆಯುತ್ತಿತ್ತು. ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್.ಗೆ ಸಂಬಂಧಿಸಿದಂತೆ ಇದ್ದ ಒಟ್ಟು ಸಿಬ್ಬಂದಿಗಳ ಸಂಖ್ಯೆಯೇ ಕೇವಲ 250ರಿಂದ 270ರಷ್ಟು ಮಾತ್ರ. ಇದೀಗ ಇವರ ಪೈಕಿ 116ರಷ್ಟು ಸಿಬ್ಬಂದಿಗಳು ಜನವರಿ 31ರಿಂದ ಸ್ವಯಂ ನಿವೃತ್ತಿ ಹೊಂದುತ್ತಿರುವುದರಿಂದ ಜಿಲ್ಲೆಯಲ್ಲಿ ಶೇ.60ಕ್ಕಿಂತಲೂ ಅಧಿಕ ಸಿಬ್ಬಂದಿಗಳ ಸಂಖ್ಯೆ ಕಡಿಮೆಯಾಗಲಿದ್ದು, ಮುಂದಿನ ದಿನಗಳಲ್ಲಿ ತೀರಾ ಸಮಸ್ಯೆ ಎದುರಾಗಲಿರುವುದು ಖಚಿತವೇ ಸರಿ ಎನ್ನಲಾಗುತ್ತಿದೆ.
ಅದರಲ್ಲೂ ನಿವೃತ್ತಿ ಹೊಂದುತ್ತಿರುವ ಸಿಬ್ಬಂದಿಗಳ ಪೈಕಿ ಶೇ.80ರಷ್ಟು ಮಂದಿ ‘ಫೀಲ್ಡ್’ನಲ್ಲಿ ಕೆಲಸ ನಿರ್ವಹಿಸುತ್ತಿದ್ದವರಾಗಿದ್ದಾರೆ. ಲೈನ್‍ಮೆನ್‍ಗಳು, ಜೆ.ಇ., ಇ.ಇ. ಸೇರಿದಂತೆ ‘ಫೀಲ್ಡ್’ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶೇ. 80ರಷ್ಟು ಮಂದಿ ಮನೆಗೆ ಮರಳುತ್ತಿದ್ದಾರೆ.
ಇದರಿಂದಾಗಿ ವಿವಿಧ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಯಾವೊಬ್ಬ ಸಿಬ್ಬಂದಿ ಕೂಡ ಇಲ್ಲದಂತಾಗಲಿದ್ದಾರೆ. ಈಗಾಗಲೇ ದಕ್ಷಿಣ ಕೊಡಗಿನ ಗೋಣಿಕೊಪ್ಪ, ಪೊನ್ನಂಪೇಟೆ, ಹುದಿಕೇರಿ, ಕುಂದ, ಶ್ರೀಮಂಗಲ, ಕುಟ್ಟ, ಬಿರುನಾಣಿಯಂತಹ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಸಿಬ್ಬಂದಿಗಳೇ ಇಲ್ಲ. ಮಡಿಕೇರಿ ತಾಲೂಕು, ಸೋಮವಾರಪೇಟೆ ತಾಲೂಕಿನಲ್ಲೂ ಇಂತಹ ಸಮಸ್ಯೆಗಳಿವೆ. ಈಗಿನ ಸನ್ನಿವೇಶದಲ್ಲಿ ಉಳಿಕೆಯಾಗುವ ಸಿಬ್ಬಂದಿಗಳ ಪೈಕಿ ಒಬ್ಬ ವ್ಯಕ್ತಿಗೆ ಸುಮಾರು ನಾಲ್ಕು ಕೇಂದ್ರಗಳ ಉಸ್ತುವಾರಿಯನ್ನು ನೀಡಲಾಗುತ್ತದೆ ಎನ್ನಲಾಗುತ್ತಿದೆ. ಈ ಹಿಂದೆ ಒಂದೊಂದು ಕೇಂದ್ರವನ್ನೇ ನಿಭಾಯಿಸಲು ತೊಂದರೆ ಇತ್ತು. ಇದೀಗ ನಾಲ್ಕು ಕೇಂದ್ರಗಳ ನಿರ್ವಹಣೆ ಎಂದರೆ ಈ ಪರಿಸ್ಥಿತಿ ಹೇಗಿರಬಹುದೆಂದು ಊಹಿಸಬಹುದಾಗಿದೆ.
ಈ ನಡುವೆ ಕೆಲವೇ ತಿಂಗಳಲ್ಲಿ ಮತ್ತೊಂದು ಮಳೆಗಾಲವೂ ಜಿಲ್ಲೆಯಲ್ಲಿ ಆರಂಭಗೊಳ್ಳಲಿದೆ. ಸಿಬ್ಬಂದಿಗಳ ಸ್ವಯಂ ನಿವೃತ್ತಿ ಬಳಿಕ ಸಂಸ್ಥೆ ಈ ವ್ಯವಸ್ಥೆಯನ್ನು ಸರಿದೂಗಿಸಲು ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಲಿದೆಯೇ ಅಥವಾ ಇನ್ಯಾವ ರೀತಿಯ ಕ್ರಮವನ್ನು ಅನುಸರಿಸಲಿದೆ ಎಂಬ ಕುರಿತಾಗಿ ಇನ್ನೂ ಯಾವುದೇ ಖಚಿತತೆ ಹೊರಬಿದ್ದಿಲ್ಲ.
-ಶಶಿ ಸೋಮಯ್ಯ.