ಗೋಣಿಕೊಪ್ಪಲು, ಜ. 8: ಭಾರತ ದೇಶವನ್ನು ಸ್ವಚ್ಛವಾಗಿಡಲು ಎಲ್ಲರ ಸಹಕಾರ ಅತ್ಯವಶ್ಯಕ ಎಂದು ಸ್ವಚ್ಛ ಭಾರತ್‍ನ ಕರ್ನಾಟಕ ಪ್ರಾಂತ್ಯದ ಸಂಯೋಜಕಿ ದೀಪಿಕಾ ಕರೆ ನೀಡಿದರು.
ಗೋಣಿಕೊಪ್ಪಲುವಿನ ಸ್ಪೈಸ್ ರಾಕ್ ಹೊಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಸರ್ಕಾರದ ಸ್ವಚ್ಛ ಭಾರತ್ ಜಾಗೃತಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನ ಮಡಿಕೇರಿ ಹಾಗೂ ನಾಗರ ಹೊಳೆ ಭಾಗವು ಪ್ರವಾಸೋಧ್ಯಮದ ಪ್ರದೇಶವಾಗಿರುವುದರಿಂದ ಸ್ವಚ್ಛತೆಯನ್ನು ಕಾಪಾಡುವ ಹಿತದೃಷ್ಟಿಯಲ್ಲಿ ಪ್ರವಾಸೋದ್ಯಮದ ಪಾಲುದಾರಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಹೋಮ್‍ಸ್ಟೇ, ರೆಸಾರ್ಟ್, ರೆಸ್ಟೋರೆಂಟ್, ಹೊಟೇಲ್, ಟಾಕ್ಸಿ ಚಾಲಕರಲ್ಲಿ ವಿಶೇಷವಾಗಿ ಜಾಗೃತಿ ಮೂಡಿಸಬೇಕಾಗಿದೆ. ಈ ಹಿನ್ನೆಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ. ಸಾರ್ವಜನಿಕವಾಗಿ ಎಲ್ಲಡೆ ಜಾಗೃತಿ ಮೂಡಿಸಬೇಕೆಂದು ದೀಪಿಕಾ ತಿಳಿಸಿದರು.
ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರವಾಸೋದ್ಯಮದ ಸಂಯೋಜಕ ವಿ. ಚೇತನ್ ಮಾತನಾಡಿ, ಕಸ ಮುಕ್ತ ಪಂಚಾಯಿತಿಗಳಾಗಿ ಜಿಲ್ಲೆಯ ಎಲ್ಲ ಪಂಚಾಯಿತಿಗಳು ಕೆಲಸ ನಿರ್ವಹಿಸಬೇಕು. ಈ ಹಿನ್ನೆಲೆ ಸ್ವಚ್ಛ ಭಾರತ್ ಮಿಷನ್ ವತಿಯಿಂದ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಸಾರ್ವಜನಿಕರಿಗೆ ಹೆಚ್ಚಾಗಿ ಜಾಗೃತಿ ಮೂಡಿದಲ್ಲಿ ಸ್ವಚ್ಛತೆ ಕಾಪಾಡಲು ಅನುಕೂಲವಾಗಲಿದೆ ಎಂದರು. ಸ್ವಚ್ಛ ಭಾರತ್‍ನ ಜಿಲ್ಲಾ ಸಂಯೋಜಕ ಅಜ್ಜಿಕುಟ್ಟಿರ ಸೂರಜ್ ಮಾತನಾಡಿ, ದಕ್ಷಿಣ ಕೊಡಗಿನ ಪ್ರಮುಖ ಪಂಚಾಯಿತಿಗಳಲ್ಲಿ ಹಸಿರು ದಳದ ಸಹಕಾರ ಪಡೆದು ಕಸ ಮುಕ್ತ ಪಂಚಾಯಿತಿಯಾಗಿ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಇದಕ್ಕಾಗಿ ರೂ. 20 ಲಕ್ಷ ಅನುದಾನ ಮೀಸಲಿದೆ. ಇದೀಗ ಗೋಣಿಕೊಪ್ಪ, ಕುಟ್ಟ, ಶ್ರೀಮಂಗಲ, ಪೊನ್ನಂಪೇಟೆ ಪಂಚಾಯಿತಿಗಳಲ್ಲಿ ಕಸ ನಿರ್ಮೂಲನೆಗೆ ಒಂದು ಹಂತಕ್ಕೆ ಬಂದಿದೆ. ಹಸಿ, ಒಣಕಸವನ್ನು ಬೇರ್ಪಡಿಸಿ ಒಣಕಸವನ್ನು ಮರು ಬಳಕೆಗೆ ಕಳುಹಿಸಿಕೊಡಲಾಗುತ್ತಿದೆ. ಕೆಲವೆಡೆ ಕಸ ವಿಲೇವಾರಿಗಾಗಿ ಜಾಗದ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಸೂಕ್ತ ಸ್ಥಳ ನೀಡುವ ಭರವಸೆ ನೀಡಿದ್ದಾರೆ. ಸಾರ್ವಜನಿಕರ ಸಹಕಾರವಿಲ್ಲದೆ ಕಸ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಇವರ ಸಭೆಗೆ ತಿಳಿಸಿದರು. ವೈಲ್ಡ್‍ಲೈಫ್ ಸೊಸೈಟಿಯ ಕರ್ನಲ್ ಮುತ್ತಣ್ಣ ಮಾತನಾಡಿ, ಪ್ರವಾಸೋದ್ಯಮ ದೊಂದಿಗೆ ಸ್ವಚ್ಛ ಭಾರತ್ ಮಿಷನ್ ಜಂಟಿಯಾಗಿ ಇಂತಹ ಕಾರ್ಯಕ್ರಮ ಗಳು ನಡಸುತ್ತಿರುವುದು ಶ್ಲಾಘನೀಯ. ಜಾಗೃತಿ ಹೆಚ್ಚಾದಲ್ಲಿ ಕಸ ನಿರ್ಮೂಲನೆ ಆಗಲಿದೆ ಎಂದರು. ಚೇಂಬರ್‍ನ ಹಿರಿಯರಾದ ಎಂ.ಪಿ. ಕೇಶವ್ ಕಾಮತ್ ಮಾತನಾಡಿ, ಕೊಡಗಿನ ಪ್ರವಾಸೋದ್ಯಮವು ಕೇವಲ ಮಡಿಕೇರಿ ಹಾಗೂ ಕುಶಾಲನಗರಕ್ಕೆ ಸೀಮಿತ ಗೊಂಡಿವೆ. ಇದು ವೀರಾಜಪೇಟೆ ತಾಲೂಕಿಗೆ ವಿಸ್ತಾರವಾಗಬೇಕು. ಈ ಭಾಗದಲ್ಲೂ ಅನೇಕ ಪ್ರವಾಸಿ ತಾಣಗಳಿವೆ. ಈ ಬಗ್ಗೆ ಪ್ರಚಾರ ಕಡಿಮೆ ಇರುವುದರಿಂದ ಸಮಸ್ಯೆ ಎದುರಾಗಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡಿದರು. ಗೋಣಿಕೊಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ನಗರದಲ್ಲಿ ಕಸ ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆಲವು ಸಂದರ್ಭಗಳಲ್ಲಿ ಪೊಲೀಸ್ ಪ್ರಕರಣ ದಾಖಲು ಮಾಡಲಾಗಿದೆ. ಇದೀಗ ಕಸ ಹತೋಟಿಗೆ ಬಂದಿದ್ದು ಒಣ ಕಸವನ್ನು ಬೇರ್ಪಡಿಸಿ ಮರು ಬಳಕೆಗೆ ಬಳಸಿಕೊಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್, ಗೋಣಿಕೊಪ್ಪ ಚೇಂಬರ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿಯಾದ ತೆಕ್ಕಡ ಕಾಶಿ, ಖಜಾಂಚಿ ಮನೋಹರ್, ನಿರ್ದೇಶಕರಾದ ರಾಜಶೇಖರ್, ಎಂ.ಪಿ. ಕೇಶವ್‍ಕಾಮತ್, ಚೇಂದಂಡ ಸುಮಿ ಸುಬ್ಬಯ್ಯ, ಸೇರಿದಂತೆ ಚಂದನ್ ಕಾಮತ್, ಅಮ್ಮತ್ತಿಯ ನವೀನ್, ವಿವಿಧ ರೆಸ್ಟೋರೆಂಟ್‍ನ ಮಾಲೀಕರು, ಇನ್ನಿತರರು ಹಾಜರಿದ್ದರು. ಚೇಂಬರ್‍ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ಸ್ವಚ್ಛ ಭಾರತ್‍ನ ಪ್ರತಿಜ್ಞಾವಿಧಿ ಭೋದಿಸಿದರು. ಜಿಲ್ಲಾ ಪ್ರವಾಸೋದ್ಯಮದ ಸಂಯೋಜಕ ವಿ. ಚೇತನ್ ಸ್ವಾಗತಿಸಿ, ವಂದಿಸಿದರು. ಎಲ್‍ಇಡಿ ಪರದೆಯ ಮೂಲಕ ಸ್ವಚ್ಛ ಭಾರತದ ವೀಡಿಯೋ ಚಿತ್ರ ತೋರಿಸಲಾಯಿತು.
- ಹೆಚ್.ಕೆ. ಜಗದೀಶ್