ಮಡಿಕೇರಿ, ಜ. 8: ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವತಿಯಿಂದ 2019-20ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೋಯಿಕೇರಿ ಇಬ್ನಿವಳವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯ ವಾಕ್ಯದೊಂದಿಗೆ ವಾರ್ಷಿಕ ವಿಶೇಷ ಶಿಬಿರವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಡಿ.ಜೆ. ಜವರಪ್ಪ ವಹಿಸಿದ್ದರು.
ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಕಡಗದಾಳು ಗ್ರಾ.ಪಂ. ಸದಸ್ಯೆ ಸರಸ್ವತಿ ರವಿಕುಮಾರ್, ಸುಂದರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಆನಂದ, ಸಹಶಿಕ್ಷಕ ಶಿವಕುಮಾರ್ ಅತಿಥಿಗಳಾಗಿದ್ದರು.
ಪ್ರತಿದಿನವು ಶಿಬಿರದ ದಿನಚರಿ ಯಂತೆ ಪ್ರಾರ್ಥನೆ, ಧ್ವಜಾರೋಹಣ, ಚಿಂತನೆ, ವ್ಯಾಯಾಮ, ಶ್ರಮದಾನ, ಶೈಕ್ಷಣಿಕ ಕಾರ್ಯಕ್ರಮಗಳು, ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಲಾಯಿತು. ಶಾಲಾ ಆವರಣದಲ್ಲಿ ಶ್ರಮದಾನದ ಮೂಲಕ ಶಾಲೆ ಹಾಗೂ ಶಾಲೆಯ ಆವರಣವನ್ನು ಶುಚಿಗೊಳಿಸಲಾಯಿತು. ಬೋಯಿಕೇರಿ ಗ್ರಾಮಕ್ಕೆ ತೆರಳಿ ಅಲ್ಲಿರುವ ಸಮುದಾಯ ಭವನ, ಅಂಗನವಾಡಿ ಕೇಂದ್ರ, ಅಂಚೆ ಕಚೇರಿ, ಬಸ್ ತಂಗುದಾಣ, ಸ್ನೇಹ ಕ್ಲೀನಿಕ್ ಹಾಗೂ ರಸ್ತೆಯ ಬದಿ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಲಾಯಿತು.
ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಪರಿಸರ ಸಂರಕ್ಷಣೆ, ಸ್ವಚ್ಛತೆ, ಸಾಕ್ಷರತೆ, ಸ್ತ್ರೀ ಶಿಕ್ಷಣ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಗ್ರಾಮಸ್ಥರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.
ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಮುಖ್ಯ ವಿಷಯವಾಗಿ ಆರೋಗ್ಯ, ಶಿಕ್ಷಣ, ಪರಿಸರ ಮತ್ತು ಅರಣ್ಯ ಸಂರಕ್ಷಣೆ, ಮಹಿಳಾ ಸಬಲೀಕರಣ, ಸ್ವಚ್ಛತೆಗಾಗಿ ಯುವಜನತೆ, ಕಾನೂನಿನ ಅರಿವು, ವ್ಯಕ್ತಿತ್ವ ವಿಕಸನ, ವೈಜ್ಞಾನಿಕ ಮನೋಭಾವನೆ ಇತ್ಯಾದಿ ವಿಷಯಗಳನ್ನು ಆಯ್ದುಕೊಳ್ಳಲಾಗಿತ್ತು.
ಸಮಾರೋಪ
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಕೆ.ಸಿ. ದಯಾನಂದ ಸಮಾರೋಪ ಭಾಷಣ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ನ್ಯಾಯಾಧೀಶೆ ನೂರುನ್ನೀಸಾ, ಎನ್.ಎಸ್.ಎಸ್.ನಿಂದ ವ್ಯಕ್ತಿತ್ವ ನಿರ್ಮಾಣ, ಸರಳ ಜೀವನ, ನಾಯಕತ್ವ ಗುಣ ಇತ್ಯಾಧಿಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ನಿವೃತ್ತ ಶಿಕ್ಷಕಿ ಹೆಚ್.ಕೆ. ಸರೋಜ ಶಿಬಿರದ ಉದ್ದೇಶವನ್ನು ಈಡೇರಿಸುವಲ್ಲಿ ಶಿಬಿರಾರ್ಥಿಗಳ ಪಾತ್ರ ಎಷ್ಟು ಮುಖ್ಯ ಎಂದು ತಿಳಿಸಿದರು. ಬೋಯಿಕೇರಿ ಶಾಲೆ ಮುಖ್ಯ ಶಿಕ್ಷಕ ಹೆಚ್.ಆರ್. ರಾಜು ಮಾತನಾಡಿ, ಹೆಣ್ಣು ಮಕ್ಕಳು ಶಿಕ್ಷಣದ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.