ಆರು ಕಾಲು ಗಳುಳ್ಳ ನಾವುಗಳು ಮನುಷ್ಯ ರಂತೆ ಬೇಧ ಭಾವ ತೋರುವವರಲ್ಲ, ನಮ್ಮಲ್ಲಿ ಜಾತಿ-ಮತ, ಧರ್ಮ, ಭಾಷೆ ಯಾವದೇ ತಾರತಮ್ಯವಿಲ್ಲ. ನಮ್ಮ ಆಶ್ರಯ ಪಡೆದವರನ್ನು ಹಗಲಿರುಳೆನ್ನದೆ ನಮ್ಮ ಒಡಲಲ್ಲಿ ಹೊತ್ತುಕೊಂಡು ಸುರಕ್ಷಿತವಾಗಿ ಅವರವರ ತಾಣಗಳಿಗೆ ತಲಪಿಸುವದೇ ನಮ್ಮ ಗುರಿ.
ಚಳಿ-ಗಾಳಿ-ಮಳೆ ಬಂದರೂ ನಮ್ಮ ಸಂಚಾರ ನಿಲ್ಲಲ್ಲ, ನಿಮ್ಮನ್ನು ನಿಮ್ಮ ಸಂಸಾರವನ್ನು ಹೊತ್ತೊಯ್ಯುವ ನಾವು ನಿಮಗೆ ಬೇರೆ-ಬೇರೆ ಊರುಗಳ ದರ್ಶನ ಮಾಡಿಸುತ್ತೇವೆ. ಪ್ರಕೃತಿಯ ಸುಂದರ ದೃಶ್ಯಗಳನ್ನು ನದಿ-ತೊರೆಗಳನ್ನೂ, ಗಗನಚುಂಬಿ ಕಟ್ಟಡಗಳನ್ನೂ ತೋರಿಸುತ್ತೇವೆ. ನಿಮಗೆ ಆಯಾಸವಾದರೆ ಒರಗಿ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿ ಕೊಡುತ್ತೇವೆ. ಬಡವನೆ ಇರಲಿ, ಶ್ರೀಮಂತನೇ ಬರಲಿ ನಮ್ಮ ಬಳಿ ಒಂದೇ ರೀತಿಯ ಸ್ಥಾನಮಾನ ಮಕ್ಕಳು ಮಹಿಳೆಯರೆಂಬ ಬೇಧ-ಭಾವವನ್ನೂ ನಾವು ಮಾಡಲಾರೆವು.
ನೀವು ಒಳ್ಳೆಯವರೋ ಕೆಟ್ಟವರೋ ಎಂದು ನಾವು ನೋಡುವದಿಲ್ಲ. ಕಾರಣ ನಮ್ಮ ಒಡಲಲ್ಲಿ ಎಲ್ಲರಿಗೂ ಒಂದೇ ರೀತಿಯ ಸ್ಥಾನ ಒಂದೇ ರೀತಿಯ ಗೌರವ. ವಸ್ತು ಸ್ಥಿತಿ ಹೀಗಿದ್ದರೂ ನಿಮ್ಮ ಇಷ್ಟಾರ್ಥ ನೆರವೇರದಾದಾಗ ಅತ್ತೆ ಮೇಲಿನ ಸಿಟ್ಟು ಕೊತ್ತಿ ಮೇಲೆ ಎಂಬಂತೆ ನೀವುಗಳು ನಿರಪರಾಧಿಯಾದ ನಮ್ಮನ್ನು ಸುಡುತ್ತೀರಿ, ನಮ್ಮ ಅಂಗಾಂಗಳಿಗೆ ಕಲ್ಲು ಎಸೆದು ನಜ್ಜುಗುಜ್ಜು ಮಾಡುತ್ತೀರಿ, ನಮ್ಮನ್ನು ಚಲಿಸಲಾಗದ ಸ್ಥಿತಿಗೆ ತಂದು ಹಾಕುತ್ತೀರಿ ನಿಮಗೆ ಎಳ್ಳಷ್ಟೂ ದ್ರೋಹ ಬಗೆಯದ-ಬಯಸದ ನಮ್ಮನ್ನು ನೀವು ಪುಡಿಗಟ್ಟುವದು ಯಾವ ನ್ಯಾಯ ಹೇಳಿ, ಆದುದರಿಂದ ನಿಮಗೆ ಆಗುವ ಲಾಭವೇನು ?
ಬೇಡ ಜನರೆ, ನಿಮ್ಮ ಸ್ವಾರ್ಥಕ್ಕಾಗಿ ನಮ್ಮನ್ನು ಬಲಿಪಶು ಮಾಡಬೇಡಿ ನಾವು ನಿಮಗೆ ಸದಾ ಉಪಕಾರವನ್ನೇ ಮಾಡುತ್ತೇವೆ ಹೊರತು ಚೂರು ಕೂಡ ಉಪದ್ರ ಮಾಡಲಾರೆವು. ಇನ್ನಾದರೂ ನಮ್ಮನ್ನು ನಮ್ಮ ಪಾಡಿಗೆ ಬಿಡಿ, ನ್ಯಾಯದ ಹಾದಿಯಲ್ಲಿ ಹೋರಾಡಿ ಎಂದು ಬಸ್ಗಳು ಹೇಳುತ್ತಿರುವಂತೆ ಕೇಳಿಸುತ್ತಿದೆ. ಆದುದರಿಂದ ಯಾರೆ ತಮ್ಮ ಉದ್ದೇಶ ಮುಂದಿರಿಸಿಕೊಂಡು ಹೋರಾಟ ನಡೆಸುವಾಗ ಬಸ್ಗಳನ್ನು ಸುಡದಿರಿ ಕಲ್ಲು ಹೊಡೆದು ಹಾನಿ ಮಾಡದಿರಿ.
?ಪಾಡೆಯಂಡ ಜಿ. ಮುತ್ತಪ್ಪ,
ಮೂರ್ನಾಡು.