ನಿನ್ನ ಸ್ನೇಹಿತರನ್ನು ತೋರಿಸು ನಿನ್ನ ಗುಣವನ್ನು ಹೇಳುತ್ತೇನೆ’ ಎಂಬ ಮಾತು ಜನಸಾಮಾನ್ಯರಲ್ಲಿ ಪ್ರಚಲಿತ ದಲ್ಲಿದ್ದು, ಈ ನಿಟ್ಟಿನಲ್ಲಿ ಹೇಳುವುದಾದರೆ, ನಮ್ಮ ವ್ಯಕ್ತಿತ್ವವು ಉತ್ತಮವಾಗಿರ ಬೇಕೆಂದರೆ, ನಮ್ಮ ಸ್ನೇಹಿತರೂ ಉತ್ತಮರಾಗಿರಬೇಕು ಅನ್ನುವ ಗುಟ್ಟನ್ನು ಸಾರುತ್ತದೆ. ಆದ್ದರಿಂದ ನಾವು ಉತ್ತಮರೆನಿಸಿದವರನ್ನೇ ಸ್ನೇಹಿತರನ್ನಾಗಿಸಿ ಕೊಳ್ಳಬೇಕಾಗಿರುವದು ಕೂಡಾ ಅಷ್ಟೇ ಸತ್ಯ ಹಾಗೂ ಅಷ್ಟೇ ಮುಖ್ಯ. ನೋವಿನಲ್ಲಿ, ನಲಿವಿನಲ್ಲಿ, ಕಷ್ಟದಲ್ಲಿ, ಸುಖದಲ್ಲಿ ಸ್ಪಂದಿಸುವಂತ ಹೃದಯ ವಂತಿಕೆ ಸ್ನೇಹದಲ್ಲಿ ಇರಬೇಕು. ಆಗಲೇ ನಿಜವಾದ ಸ್ವೇಹಕ್ಕೊಂದು ಅರ್ಥ ಬರೋದು. ಆದರೆ, ಒಮ್ಮೊಮ್ಮೆ ಅನ್ನಿಸುತ್ತೆ ಇಂದಿನ ಆಡಂಬರ ಅಥವಾ ತೋರಿಕೆಯ ಜೀವನದಲ್ಲಿ ಸ್ನೇಹ ಎಂಬ ಎರಡಕ್ಷರಕ್ಕೆ ಬೆಲೆಯಿಲ್ಲ ಎಂದು, ನಿರ್ಮಲವಾದ ಗೆಳೆತನದಲ್ಲಿರಬೇಕಾದ ನಿಷ್ಕಲ್ಮಷ, ನಿಸ್ವಾರ್ಥ, ನಿಷ್ಕಳಂಕ ಮನೋಭಾವ ಎಲ್ಲವೂ ಮರೆಮಾಚುತಿದ್ದು ಸ್ನೇಹ ಎಂಬುದು ನೆಪ ಮಾತ್ರಕ್ಕೆನ್ನುವಂತೆ, ಕೇವಲ ಹೆಸರು ಮಾಡುವತ್ತ, ಸ್ವ ಪ್ರತಿಷ್ಠೆಯನ್ನು ಮೆರೆಯುವತ್ತ ಮಾತ್ರ ತಮ್ಮನ್ನು ಕೇಂದ್ರೀಕರಿಸುತ್ತ, ಎಲ್ಲಕ್ಕಿಂತಲೂ ಮಿಗಿಲಾದ, ಅಮೂಲ್ಯವಾದ ಸ್ನೇಹ ಎಂಬ ಬಂಧವು ಕಳೆದು ಹೋಗುತ್ತಿದೆ ಯೇನೋ ಎಂದು ಅನ್ನಿಸುತ್ತಿದೆ.
ಸ್ನೇಹವೆಂಬ ಮಧುರ ಬಂಧಗಳ ನಡುವೆ ಪ್ರಮುಖವಾಗಿ ಬೇಕಾದದ್ದು ನಂಬಿಕೆ. ಆ ನಂಬಿಕೆ ಬದಲು ಅಲ್ಲಿ ಅನುಮಾನ ಮೂಡಿದಲ್ಲಿ, ಸ್ನೇಹವೆಂಬ ಕೊಂಡಿ ಕಳಚಿ ಬೀಳುವುದಂತೂ ಖಂಡಿತಾ ಈ ರೀತಿಯಾಗಿ, ಸ್ನೇಹವೆಂಬ ಪವಿತ್ರ ಸಂಬಂಧವೂ ಸಹ ಹಲವು ಕಡೆಗಳಲ್ಲಿ ತನ್ನ ಪ್ರಭುದ್ದತೆಯನ್ನು ವಿನಾಶದ ಅಂಚಿಗೆ ತಳ್ಳುತ್ತಿದೆ. ನಾವು ಕಷ್ಟದಲ್ಲಿದ್ದಾಗ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೇ, ನಮಗೆ ಧೈರ್ಯ ತುಂಬಿ, ಜೀವನದಲ್ಲಿ ಮುನ್ನುಗ್ಗು ವಂತೆ ಮಾಡುವುದೇ ನಿಜವಾದ ಸ್ನೇಹ. ಆದರೆ, ಸಹಾಯ ಮಾಡುವ ನೆಪದಲ್ಲೇ, ‘ಏರಿದ ಏಣಿಯನ್ನೇ ಒದೆಯುವಂತಹ’ ಪ್ರತಿಫಲಾಪೇಕ್ಷಿತರು ಅನೇಕರಿದ್ದು, ಗೆಳೆತನ ಅಥವಾ ಸ್ನೇಹದ ಹೆಸರಲ್ಲಿ ಸೋಗು ಹಾಕಿ ಅಪಮಾನಿಸುವವರೇ ಇಂದು ತುಂಬಿ ತುಳುಕುತ್ತಿದ್ದಾರೆ.
ನಾವು ಭಾವನಾಜೀವಿಗಳು. ದೊಡ್ದವರಾಗ್ತಾ ಹೋದ ಹಾಗೆ ನಮ್ಮ ಭಾವನೆಗಳು, ಜೀವನಶೈಲಿ, ಚಿಂತನೆ. ಹೀಗೆ ಎಲ್ಲವೂ ಬದಲಾಗುತ್ತಾ ಸಾಗುತ್ತದೆ. ಅಂತಹ ಸಮಯದಲ್ಲಿ ನಮ್ಮ ಮನದಲ್ಲಿನ ಅನೇಕ ಭಾವನೆ ಗಳನ್ನು ಹಂಚಿಕೊಳ್ಳುವಂತಹ ಒಂದು ಆತ್ಮೀಯವಾದ ಹೃದಯಕ್ಕಾಗಿ ನಮ್ಮ ಮನಸ್ಸು ಪರಿತಪಿಸುತ್ತಿರುತ್ತದೆ. ನನಗೂ ಒಬ್ಬ ಆತ್ಮೀಯ ಮನಸ್ಸು ಬೇಕು ಎಂದು ಪ್ರತಿಯೊಂದು ಮನಸ್ಸಿಗೂ ಅನ್ನಿಸಿರುತ್ತದೆ. ಹೀಗೆ ಆತ್ಮೀಯತೆಯ ಹುಡುಕಾಟದ ಹಾದಿಯಲ್ಲಿ ನಮ್ಮ ಸನಿಹಕ್ಕೆ ಬಂದು, ನಮ್ಮ ಭಾವನೆಗಳಿಗೆ ಸ್ಪಂದಿಸುವಂತಹ ಮನಸ್ಸಿನೊಂದಿಗೆ ನಮ್ಮ ಅಮೂಲ್ಯವಾದ ಸ್ನೇಹ ಆರಂಭಗೊಳ್ಳುತ್ತದೆ. ಆಗ ನಮಗೆ ಎಲ್ಲರೂ ಗೆಳೆಯ, ಗೆಳತಿಯರಾಗಬಹುದು. ಆದರೆ, ಎಲ್ಲರನ್ನೂ ಆತ್ಮೀಯರು ಅನ್ನೋದಕ್ಕೆ ಸಾಧ್ಯಾನೇ ಇಲ್ಲ. ಮುಂದೆ ಸಾಗುತ್ತಾ ಹೋದಂತೆ, ನಮ್ಮ ಜೀವನದಲ್ಲಾದ ನೈಜ ಅನುಭವಗಳು, ಕೆಲವೊಂದು ವಿಷಯಗಳು, ನಮ್ಮ ಮನಸ್ಸೆಂಬ ಪುಟ್ಟ ಕದವನ್ನು ತಟ್ಟಿ-ತಟ್ಟಿ ಎಬ್ಬಿಸಿದ ಹಲವು ಸಂಗತಿಗಳು, ಹಲವು ನೈಜ ಘಟನೆಗಳು, ನಿಜವಾದ ಸ್ನೇಹ ಎಂದರೇನು ? ಎಂಬುದನ್ನು ಅರ್ಥೈಸುತ್ತದೆ. ಸುಖ-ದು:ಖ, ಕಷ್ಟ-ದುಮ್ಮಾನಗಳನ್ನು ಹಂಚಿಕೊಳ್ಳುವ, ಪರಸ್ಪರ ಸಮಾಧಾನಪಡಿಸಿಕೊಳ್ಳುವಂತಹ ಸಂದರ್ಭಗಳು ಹೀಗೆ... ಮೊದಲಾದ ಸಂಗತಿಗಳು ಮಾತ್ರ ಆತ್ಮೀಯತೆಗೆ ತಳಹದಿಯಾಗುತ್ತದೆ. ಆ ಆತ್ಮೀಯತೆಯು ಚಿರಸ್ಥಾಯಿಯಾಗಬೇಕಾದರೆ, ಸ್ನೇಹದಲ್ಲಿ ಅಪನಂಬಿಕೆ ಇರಬಾರದು. ಎಂತಹುದೇ ವಿಷಮ ಪರಿಸ್ಥಿತಿಯಲ್ಲೂ ಸ್ವಪ್ರತಿಷ್ಠೆ ಬಿಟ್ಟು, ಅಂತರಂಗದ ಒಳಹೊಕ್ಕು, ಸ್ನೇಹಕ್ಕಾಗಿ ಮಿಡಿಯಬೇಕು. ಮುಖ್ಯವಾಗಿ ಗೌರವ, ಸಮಾನತೆ, ಅರ್ಥಮಾಡಿಕೊಳ್ಳುವ ಸಾಮಥ್ರ್ಯ, ನಂಬಿಕೆ ಮತ್ತು ನಿಷ್ಠೆ ಇರಬೇಕು.
ಮನಸ್ಸು ಮನಸ್ಸುಗಳ ಬಾಂಧವ್ಯವೇ ಗೆಳೆತನ. ನಮ್ಮ ನಗುವಿಗೆ, ಕಣ್ಣೀರಿಗೆ ಜೊತೆಯಾಗಿ ನಮ್ಮೊಂದಿಗೆ ಬೆರೆಯುವ ಆ ಮತ್ತೊಂದು ಮನಸ್ಸಿನ ರೂಪವೇ ಸ್ನೇಹ. ಆ ಮನಸ್ಸಿನಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷವೇ ಗೆಳೆತನದ ಅಹ್ಲಾದಕ್ಕೆ ಸಾಕ್ಷಿ...ಪರಿಶುದ್ಧ, ನಿಸ್ವಾರ್ಥ, ತ್ಯಾಗದಿಂದ ಕೂಡಿದ ನಿಷ್ಕಲ್ಮಶವಾದ ಸ್ನೇಹ ಸಮಾಜಕ್ಕೂ ಒಳಿತನ್ನು ಮಾಡುತ್ತದೆ. ಸ್ನೇಹದಲ್ಲಿ ಮುನಿಸು, ಕಲಹ, ಕೋಪ, ರಾಜಿ... ಸರ್ವಸಾಮಾನ್ಯ ವಾಗಿರಬೇಕೇ ಹೊರತು, ಅಹಂ ಆಗಲಿ, ದ್ವೇಷವಾಗಲಿ, ಅಧಿಕಾರವಾಗಲಿ ಸುಳಿಯಲೇ ಬಾರದು. ನಮ್ಮ ಸ್ನೇಹ ಸರಿಯಾದ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಬೇಕು. ನಾವು ನಮ್ಮ ವ್ಯಕ್ತಿತ್ವವನ್ನು ಉತ್ತಮಪಡಿಸಿ ಕೊಳ್ಳುವಂತಿದ್ದು ನಾವು ಮಾಡುವ ಸ್ನೇಹ ಕೂಡ ನಮಗೆ ಹಾಗೂ ಬೇರೆಯವರಿಗೆ ದಾರಿದೀಪವಾಗಬೇಕು. ಅಂತಹ ಸ್ನೇಹ ನಮ್ಮನ್ನು ‘ಕತ್ತಲಿನಿಂದ ಬೆಳಕಿನೆಡೆಗೆ’ ಕರೆದೊಯ್ಯುವಂತಿರಬೇಕೇ ವಿನ: ಸ್ನೇಹವನ್ನೇ ಅನುಮಾನಿಸಿ, ಅಪಮಾನಿಸುವುದು ತರವಲ್ಲ.
?ಶರ್ಮಿಳಾ ರಮೇಶ್
ಸೋಮವಾರಪೇಟೆ.