ಸೋಮವಾರಪೇಟೆ, ಜ. 8: ಪ್ರೌಢಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯ ಹಾಗೂ ಮನೋವಿಕಾಸಕ್ಕೆ ಅನುಗುಣವಾಗಿ ಉತ್ತಮ ಬೋಧನೆ ಮಾಡಿ ಅವರಲ್ಲಿ ಉತ್ತಮ ಕಲಿಕಾ ಪ್ರೇರಣೆ ಬೆಳೆಸುವದರೊಂದಿಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಲು ಹೆಚ್ಚಿನ ಪರಿಶ್ರಮ ವಹಿಸಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.
ಇಲ್ಲಿನ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ, ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಎಲ್ಲಾ ವಿಷಯವಾರು ಶಿಕ್ಷಕರಿಗೆ ಏರ್ಪಡಿಸಿದ್ದ ಪರೀಕ್ಷಾ ಪ್ರೇರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಶಿಕ್ಷಕರು ಶಿಸ್ತು-ಸಂಯಮದೊಂದಿಗೆ ಉತ್ತಮ ಬೋಧನೆ ಮಾಡುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿರುವದು ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಸಹಕಾರಿಯಾಗಿದೆ.
ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಸಂಬಂಧಿಸಿದಂತೆ ಯಾವದೇ ಸಮಸ್ಯೆಗಳಿದ್ದರೆ ತಮ್ಮ ಗಮನಕ್ಕೆ ತಂದರೆ ತಾವು ಅದನ್ನು ಪರಿಹರಿಸುವದಾಗಿ ಭರವಸೆ ನೀಡಿದರು.
ಶಿಕ್ಷಕರು ತಮ್ಮ ಶಾಲಾ ಮಕ್ಕಳ ಕುಟುಂಬದ ಹಿನ್ನೆಲೆ ಹಾಗೂ ಅವರ ಸಾಮಾಜಿಕ ಪರಿಸರದ ಬಗ್ಗೆ ಅಧ್ಯಯನದೊಂದಿಗೆ ಎಸ್‍ಡಿಎಂಸಿ, ಪೋಷಕರು ಮತ್ತು ವಿದ್ಯಾರ್ಥಿಗ ಳೊಂದಿಗೆ ಸಮಾಲೋಚನೆ ನಡೆಸಿ ಮಕ್ಕಳ ಕಲಿಕೆಗೆ ಹೆಚ್ಚಿನ ಪ್ರೇರಣೆ ನೀಡಬೇಕು.
ತಮ್ಮ ಶಾಲೆಯ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳ ರೀತಿಯಲ್ಲೇ ಪ್ರೀತಿ-ವಿಶ್ವಾಸದಿಂದ ಕಂಡು ಅಭ್ಯಾಸ ಮಾಡಿಸುವ ಮೂಲಕ ಆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರು ಶ್ರಮಿಸಬೇಕು ಎಂದು ಶಾಸಕ ರಂಜನ್ ಮನವಿ ಮಾಡಿದರು.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆಯುವ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವದರೊಂದಿಗೆ ಅಂತಹ ಶಾಲೆಗಳ ಗ್ರಂಥಾಲಯಕ್ಕೆ ತಾವು ರೂ.5 ಸಾವಿರ ಮೊತ್ತದ ಪುಸ್ತಕಗಳನ್ನು ಒದಗಿಸುವದಾಗಿ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು, ತಾಲೂಕಿನ ಎಲ್ಲಾ ಪ್ರೌಢಶಾಲೆಗಳಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಹೆಚ್ಚಿಸಲು ಶಿಕ್ಷಕರು ಉತ್ತಮ ಬೋಧನಾ ತಂತ್ರ ಹಾಗೂ ಕೌಶಲ್ಯಗಳ ಮೂಲಕ ಮಕ್ಕಳಲ್ಲಿ ಕಲಿಕಾ ಪ್ರೇರೇಪಣೆ ಮೂಡಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು ಎಂದರು.
10ನೇ ತರಗತಿ ಫಲಿತಾಂಶವನ್ನು ಉತ್ತಮಪಡಿಸುವ ಸಂಬಂಧ ಶಿಕ್ಷಣ ಇಲಾಖೆ ವತಿಯಿಂದ ತಾಲೂಕಿನ ಪ್ರೌಢಶಾಲೆಗಳಲ್ಲಿ ಕೈಗೊಂಡಿರುವ ಪರೀಕ್ಷಾ ಸಿದ್ಧತೆಯ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಪರೀಕ್ಷೆಯನ್ನು ಹಬ್ಬದ ಮಾದರಿಯಲ್ಲಿ ಮಕ್ಕಳು ಸಂಭ್ರಮಿಸುವ ವಾತಾವರಣ ಸೃಷ್ಟಿಸಬೇಕು.
ಶಿಕ್ಷಕರು ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಿ ಅವರಲ್ಲಿ ಕಲಿಕಾ ಪ್ರೇರಣೆ ಮೂಡಿಸುವ ಮೂಲಕ ಆತ್ಮವಿಶ್ವಾಸ ಬೆಳೆಸಬೇಕು ಎಂದರು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಕುಂತಿ ಬೋಪಯ್ಯ, ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿದರು.
ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಫಲಿತಾಂಶಗಳಿಸಿದ ತಾಲೂಕಿನ ವಿವಿಧ ಶಾಲಾ ಮುಖ್ಯಸ್ಥರು, ತಮ್ಮ ಶಾಲೆಗಳಲ್ಲಿ ಹೆಚ್ಚು ಫಲಿತಾಂಶ ಗಳಿಸಲು ಕೈಗೊಂಡಿರುವ ಪರೀಕ್ಷಾ ಕಾರ್ಯಕ್ರಮ ಹಾಗೂ ಕೌಶಲ್ಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ಜಿ.ಪಂ. ಸದಸ್ಯರಾದ ಪೂರ್ಣಿಮ ಗೋಪಾಲ್, ಕುಮುದ ಧರ್ಮಪ್ಪ, ತಾ.ಪಂ. ಸದಸ್ಯೆ ತಂಗಮ್ಮ, ಬಿಆರ್‍ಸಿ ಎಂ.ವಿ. ಮಂಜೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎನ್. ಹೇಮಂತ್‍ಕುಮಾರ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಪಿ. ಧರ್ಮಪ್ಪ, ಕಾರ್ಯದರ್ಶಿ ಎಸ್. ನಾಗರಾಜು, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ದಯಾನಂದ ಪ್ರಕಾಶ್, ತಾಲೂಕು ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎನ್. ವೆಂಕಟನಾಯಕ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್. ಮಂಜುನಾಥ್, ಶಾಲಾ ಮುಖ್ಯೋಪಾಧ್ಯಾಯ ಹ್ಯಾರಿ ಮೋರಸ್, ಶಿಕ್ಷಣ ಸಂಯೋಜಕರು, ಬಿಆರ್‍ಪಿಗಳು, ಸಿಆರ್‍ಪಿಗಳು, ಶಿಕ್ಷಕರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.