ಕುಶಾಲನಗರ: ವೈಕುಂಠ ಏಕಾದಶಿ ಹಿನ್ನೆಲೆ ಕುಶಾಲನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ರಥಬೀದಿಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.

ಆರ್ಯವೈಶ್ಯ ಮಂಡಳಿ ವತಿಯಿಂದ ನಡೆದ ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಅರ್ಚಕ ಪ್ರಮೋದ್ ಭಟ್ ನೇತೃತ್ವದ ತಂಡದಿಂದ ಪೂಜಾ ವಿಧಿಗಳು ನೆರವೇರಿದವು. ಪಂಚಾಮೃತ ಅಭಿಷೇಕ, ಮಹಾಮಂಗಳಾರತಿಯೊಂದಿಗೆ ಮಧ್ಯಾಹ್ನ 12.30 ಕ್ಕೆ ಸ್ವರ್ಗದ ಬಾಗಿಲು ಅನಾವರಣಗೊಳಿಸಲಾಯಿತು. ದೇವಾಲಯ ಆವರಣದಲ್ಲಿ ನಿರ್ಮಿಸಿದ್ದ ಏಳು ದ್ವಾರಗಳ ಮೂಲಕ ಸರದಿ ಸಾಲಿನಲ್ಲಿ ಆಗಮಿಸಿದ ಭಕ್ತವೃಂದ ದೇವಾಲಯದೊಳಗೆ ವೈಕುಂಠ ದ್ವಾರದಲ್ಲಿ ಅಳವಡಿಸಿದ್ದ ಶ್ರೀನಿವಾಸ, ಪದ್ಮಾವತಿ, ಅಲಮೇಲಮ್ಮ ದೇವರ ಮೂರ್ತಿಗಳ ದರ್ಶನ ಪಡೆದರು. ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ. ನಾಗೇಶ್ ಮಾತನಾಡಿ, ಕುಶಾಲನಗರದ ಗೋಲ್ಡನ್ ಟೆಂಪಲ್ ಎಂದು ಖ್ಯಾತಿ ಪಡೆದಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ವೈಕುಂಠ ಏಕಾದಶಿ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶ್ರೀನಿವಾಸನ ದರ್ಶನ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಆರ್ಯವೈಶ್ಯ ಮಂಡಳಿ ಪ್ರಮುಖರಾದ ಎಸ್.ಎನ್.ನರಸಿಂಹಮೂರ್ತಿ, ವಿ.ಎನ್. ವಸಂತಕುಮಾರ್, ಸತ್ಯನಾರಾಯಣ, ವಿ.ಆರ್. ಮಂಜುನಾಥ್ ಸೇರಿದಂತೆ ಮಂಡಳಿಯ ಪದಾಧಿಕಾರಿಗಳು ಇದ್ದರು. ಸಮೀಪದ ಕೊಪ್ಪ ಗ್ರಾಮದ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆಗಳು ಜರುಗಿದವು. ದೇವಾಲಯ ಸೇವಾ ಸಮಿತಿ ಆಶ್ರಯದಲ್ಲಿ ಅರ್ಚಕ ಶ್ರೀಧರ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರ ಪೂಜೆ, ಮಹಾಮಂಗಳಾರತಿ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ರಂಗಪೂಜೆ ಕಾರ್ಯಕ್ರಮ ನಡೆಯಿತು.

ದೇವಾಲಯ ಸಮಿತಿ ಅಧ್ಯಕ್ಷ ನಂದೀಶ್ ರಾವ್, ಉಪಾಧ್ಯಕ್ಷರಾದ ಅಂಬುಜಾಬಾಯಿ, ಮಂಜು, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ರವಿ, ಸಹ ಕಾರ್ಯದರ್ಶಿ ಸ್ವಾಮಿ ಮತ್ತಿತರರು ಇದ್ದರು.ಸೋಮವಾರಪೇಟೆ: ಇಲ್ಲಿನ ಕುರುಹಿನ ಶೆಟ್ಟಿ ಸಮಾಜದ ವತಿಯಿಂದ ಶ್ರೀರಾಮ ಮಂದಿರದಲ್ಲಿ ತೃತೀಯ ವರ್ಷದ ವೈಕುಂಠ ಏಕಾದಶಿಯನ್ನು ಆಚರಿಸಲಾಯಿತು.

ಏಕಾದಶಿ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ, ದೇವರ ದರ್ಶನ, ಸೀತಾ ಬಳಗದಿಂದ ವಿಷ್ಣು ಸಹಸ್ರನಾಮ ಪಠನೆ, ಭಜನಾ ಮಂಡಳಿಯಿಂದ ಸಾಮೂಹಿಕ ಭಜನೆ, ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಹಿಂದೂ ಧಾರ್ಮಿಕ ಆಚರಣೆಗಳ ಮಹತ್ವ ಹಾಗೂ ವೈಶಿಷ್ಟ್ಯಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಸಮಾಜದ ಅಧ್ಯಕ್ಷ ಸತಿನ್ ಸಿದ್ದಪ್ಪ, ಕಾರ್ಯದರ್ಶಿ ಮಂಜುನಾಥ್, ಸೀತಾ ಬಳಗದ ಅಧ್ಯಕ್ಷೆ ಲೀಲಾ ನಿರ್ವಾಣಿ, ಉಪಾಧ್ಯಕ್ಷೆ ಪಂಕಜ, ಕಾರ್ಯದರ್ಶಿ ಸುನಯನ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.