ಆಟಗಳಲ್ಲಿ ನಾನಾ ವಿಧ. ಬುದ್ಧಿವಂತಿಕೆ, ಕೌಶಲ್ಯಗಳಿಗೆ ಸವಾಲಾಗುವ ಆಟಗಳಿಗೆ ಲೆಕ್ಕವೇ ಇಲ್ಲ. ಇಂತಹ ಆಟಗಳ ಸಾಲಿನಲ್ಲಿ ಜಾನಪದ ಆಟಗಳು ಬಹಳ ಹಿಂದಿನಿಂದಲೇ ತಮ್ಮದೇ ಆದ ರೀತಿಯಲ್ಲಿ ಬೆಳೆದು ಬಂದು ಜನರಿಗೆ ಮನೋರಂಜನೆಯ ಜೊತೆ, ಕ್ರೀಡಾ ಕೌಶಲ್ಯ ಮತ್ತು ಆರೋಗ್ಯ ಭಾಗ್ಯಗಳನ್ನು ನೀಡಿದೆ ಜಾನಪದ ಆಟಗಳಂತೂ ಭಾರೀ ಮನೋರಂಜನೆಯೊಂದಿಗೆ, ಹೆಚ್ಚಿನ ವೆಚ್ಚವಿಲ್ಲದೆ ಕೌಶಲ್ಯಗಳ ಕರಾಮತ್ತಿನೊಂದಿಗೆ ಇರುವ ಆಟಗಳು ಇವು ಪ್ರಕೃತಿಯ, ಜನ ಜೀವನದ ಜೊತೆಯಲ್ಲೇ, ಅದರ ಆಚರಣೆಯಲ್ಲೇ ಬೆಳೆದು ಬಂದ ಕ್ರೀಡಾ ಸಂಪತ್ತಾಗಿರುತ್ತದೆ. ಇಂದಿಗೂ ಹಲವಾರು ಜಾನಪದ ಆಟಗಳು ಜನಮನದಲ್ಲಿ ಸ್ಥಾಪಿತವಾಗಿ, ಈ ಆಟಗಳನನು ಆಡಲಾಗುತ್ತಿದೆ. ಅಂತಹ ಆಟಗಳಲ್ಲಿ ರೋಚಕತೆಯನ್ನು ಹೊಂದಿದ ಆಟ, ಜಾನಪದ ಸಂಪತ್ತನ್ನು ನೈಪುಣ್ಯತೆಯನ್ನು ಹೊರಬೀರುವ ಆಟ ಲಗೋರಿ ಆಟ, ಈ ಆಟವನ್ನು ಸಣ್ಣವರಿರುವಾಗ ಹೆಚ್ಚಿನವರು ಆಡಿದ್ದಾರೆ. ಈಗಲೂ ಆಡುತ್ತಿದ್ದಾರೆ.

ಈ ಲಗೋರಿ ಆಟವು ಬೇರೆ-ಬೇರೆ ಪ್ರದೇಶಗಳಲ್ಲಿ ಬೇರೆಯದೇ ರೀತಿಯಲ್ಲಿ ಆಡಲಾಗುತ್ತಿದ್ದು, ಅದೊಂದು ಜಾನಪದ ಕ್ರೀಡೆಯಾಗಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಈ ಕ್ರೀಡೆಗೆ ಜಾಗತಿಕ ಮನ್ನಣೆ ದೊರೆಯಬೇಕು ಎನ್ನುವ ಕಾರಣಕ್ಕಾಗಿ ಬೆಳವಣಿಗೆ ದೃಷ್ಟಿಯಿಂದಲೂ, ಆಟದ ಮೂಲಕ್ಕೆ ಚ್ಯುತಿ ಬರದ ಹಾಗೆ ಅಸೋಸಿಯೇಶನ್ ಕೂಡ ಬಂದಿದೆ. ಗ್ರಾಮಾಂತರ ಪ್ರದೇಶದಲ್ಲಂತೂ ಈ ಕ್ರೀಡೆ ಭಾರೀ ಜನಪ್ರಿಯತೆಯೊಂದಿಗೆ ಬೆಳೆದು ಬಂದ ಕ್ರೀಡೆಯಾಗಿದೆ. ಜನ ಆಡುವ ಸುಲಭದ ಮನೋರಂಜನೆಯ ಕ್ರೀಡೆಯೂ ಆಗಿದೆ.

ಆಡುವ ಬಗೆ : ಲಗೋರಿಯಲ್ಲಿ ಎರಡು ತಂಡಗಳು ಪರಸ್ಪರ ಎದುರಾಳಿಗಳಾಗಿದ್ದು, ಪ್ರತೀ ತಂಡದಲ್ಲೂ 7 ಜನರಿರಬೇಕು. ಆರಂಭಕ್ಕೆ ಮುನ್ನ ನಿರ್ಣಾಯಕರು ಎರಡೂ ತಂಡದ ನಾಯಕರನ್ನು ಕರೆದು ನಾಣ್ಯ ಚಿಮ್ಮುಗೆಯನ್ನು ಮಾಡಬೇಕು. ಗೆದ್ದ ನಾಯಕ ಬಿಲ್ಡರ್ಸ್ ಅಥವಾ ಫೀಲ್ಡರ್ಸ್ ಆಯ್ಕೆ ಮಾಡಬೇಕು. ಫೀಲ್ಡರ್ ಆಗಿ ಮತ್ತೊಮ್ಮೆ ಬಿಲ್ಡರ್ ಆಗಿ ಆಡಿದಾಗ ಒಂದು ಇನ್ನಿಂಗ್ಸ್ ನಂತರ 2ನೇ ಇನ್ನಿಂಗ್ಸ್ ಇರುವದು. ಎರಡು ಇನ್ನಿಂಗ್ಸ್‍ಗಳು ಕೊನೆಗೊಳ್ಳುವಾಗ ಹೆಚ್ಚು ಅಂಕಗಳನ್ನು ಗಳಿಸಿರುವ ತಂಡ ಜಯಶಾಲಿ ಯಾಗುವದು, ಸಮವಾದರೆ ಟ್ರೈಬ್ರೇಕರ್ ವ್ಯವಸ್ಥೆಯಿಂದ ವಿಜೇತರನ್ನು ನಿರ್ಧರಿಸಲಾಗುವದು.

ಫೀಲ್ಡರ್ಸ್ ನಿಯಮಗಳ ಮಾಹಿತಿ : ಆಟದ ಆರಂಭದಲ್ಲಿ 4 ಜನ ಆಟಗಾರರು, ಹೊರಾಂಗಣ 3 ಜನ ಮಧ್ಯಂತರ ಕ್ಷೇತ್ರದಲ್ಲಿ ನಿಲ್ಲಿಸಿ ಆಟವಾಡಬೇಕು. ಬಿಲ್ಡರ್ಸ್ ಸಹ ನಿಗದಿತ ಸ್ಥಳದಲ್ಲಿ ನಿಲ್ಲಬೇಕು. ಫೀಲ್ಡರ್ಸ್ ಗುರಿಯನ್ನು ಬಿಲ್ಡರ್ಸ್‍ಗೆ ಹೊಡೆದು (ಚೆಂಡಿನಿಂದ) ಟಚ್ ಮಾಡಲು ಪ್ರಯತ್ನಿಸಿ, ಯಶಸ್ವಿಯಾದರೆ ಒಂದು ಅಂಕ ದೊರೆಯುವದು. ಆತನ ಸರದಿಯ ನಂತರ ಇನ್ನೊಬ್ಬನಿಗೆ ಅವಕಾಶ ಲಭಿಸುವುದು. ಫೀಲ್ಡರ್ಸ್ ತಂಡದ ಸದಸ್ಯ ಚೆಂಡನ್ನು ಮೂರು ಸೆಕೆಂಡ್ಸ್‍ಗಳಿಗಿಂತ ಹೆಚ್ಚು ಹೊತ್ತು ಹಿಡಿಯುವಂತಿಲ್ಲ. ಬಿಲ್ಡರ್ಸ್‍ಗೆ ಹೊಡೆಯಲು 2 ಹೆಜ್ಜೆಗಳಿಗಿಂತ ಹೆಚ್ಚು ಹೆಜ್ಜೆಗಳನ್ನು ಹಾಕುವಂತಿಲ್ಲ ಮತ್ತು ಚೆಂಡನ್ನು ಪುಟಿಸುತ್ತಾ 5 ಹೆಜ್ಜೆಗಳಷ್ಟೆ ಮುಂದೆ ಸಾಗಬಹುದು. ಚೆಂಡನ್ನು ಒಬ್ಬ ತಂಡದ ಒಬ್ಬರಿಗೆ ಪಾಸು ಮಾಡುತ್ತಾ ಇರಬೇಕು. ಫೀಲ್ಡರ್ಸ್ ತಂಡದವರು ಬಿಲ್ಡರ್ಸ್ ತಂಡದ ಆಟಗಾರರ ತಲೆ ಹಾಗೂ ಕುತ್ತಿಗೆಯನ್ನು ಬಿಟ್ಟು ಶರೀರದ ಯಾವ ಭಾಗಕ್ಕಾದರೂ ಚೆಂಡಿನಿಂದ ನೇರವಾಗಿ ಹೊಡೆದು ಎಸೆತಗಾರನ ಅವಕಾಶ ಮುರಿಯಬಹುದು.

ಆಟದಲ್ಲಿ 2 ಟೈಮ್ ಔಟ್ ಇದೆ. ಆಟಗಾರರ ಅನುಚಿತ ವರ್ತನೆಗೆ ದಂಡವನ್ನು ವಿಧಿಸಲು ನಿಯಮಗಳಲ್ಲಿ ಅವಕಾಶವಿದೆ. ಚೀಟಿಗಳ ಮೂಲಕ ಎಚ್ಚರಿಕೆ ನೀಡುವ ಕ್ರಮವೂ ಇದೆ. ಅಂಕಗಳ ನಮೂದಿಸುವಿಕೆಗೆ ಸ್ಕೋರ್‍ಶೀಟ್‍ನ ವ್ಯವಸ್ಥೆ ಸಹ ಇದೆ. ಈಗ ಲಗೋರಿ ಆಟದಲ್ಲಿ ಹಲವಾರು ಹೊಸ ನಿಯಮಗಳನ್ನು ಅಳವಡಿಸಿ ಹೊಸತನವನ್ನು ಮೂಡಿಸಿ ಆಟವನ್ನು ರೋಚಕಗೊಳಿಸಲಾಗಿದೆ.

ಅಂಕಗಳ ಸಂಪಾದನೆ : ಎಸೆತಗಾರ ತನ್ನ ಬಿಲ್ಲೆಯಿಂದ 7 ಬಿಲ್ಲೆಗಳು ಅಥವಾ ತಳಭಾಗದ ಬಿಲ್ಲೆ ಮಾತ್ರ ಬಿಲ್ಲೆಯ ಕ್ಷೇತ್ರದಿಂದ ಹೊರ ಹೋಗಿ ಬೀಳುವಂತೆ ಮಾಡಿದರೆ ಬಿಲ್ಡರ್ಸ್ ತಂಡಕ್ಕೆ 7 ಅಂಕಗಳು ದೊರೆಯುವುದು. ಬಿದ್ದ ಬಿಲ್ಲೆಗಳ ಆಧಾರದಲ್ಲಿ (ಸಂಖ್ಯೆಗಳು) ಬಿಲ್ಲೆಗೊಂದರಂತೆ ಅಂಕಗಳನ್ನು ನೀಡಲಾಗುವದು.

ಕ್ಯಾಚ್ ಆದಲ್ಲಿ : ಎಸೆತಗಾರ ಎಸೆದ ಚೆಂಡು ಬಿಲ್ಲೆಗೆ ತಾಗಿ ಬಿಲ್ಲೆಗಳು ಬಿದ್ದರೆ, ಫೀಲ್ಡರ್ಸ್ ಕ್ಯಾಚ್ ಮಾಡಿದಾಗ ಎಸೆತಗಾರನ ಸರದಿ ಮುಗಿದಂತೆ ಹಾಗೂ ಒಂದು ಬಿಲ್ಲೆ ಬಿದ್ದರೆ 1 ಅಂಕ ಅದಕ್ಕಿಂತ ಹೆಚ್ಚಿಗೆ ಬಿದ್ದರೆ ಮೂರು ಅಂಕ ಎಂದು ಪರಿಮಿತಿ ವಿಧಿಸಲಾಗಿದೆ. ಎಸೆತಗಾರನ ಎಸೆತದ ಚೆಂಡು ಬಿಲ್ಲೆಗೆ ತಾಗಿ, ಬಿಲ್ಲೆ ಬಿದ್ದು ಬೌಂಡರಿ ಗೆರೆ ಒಳಗಡೆ ಫೀಲ್ಡರ್ಸ್ ಚೆಂಡನ್ನು ಹಿಡಿಯುವಲ್ಲಿ ವಿಫಲವಾದಾಗ ಚೆಂಡು ಬೌಂಡರಿ ಗೆರೆ ದಾಟಿದರೆ ಒಂದು ಅಂಕ ಬಿಲ್ಡರ್ಸ್‍ಗೆ ದೊರೆಯುವದು.

ಲಗೋರಿ ಇಡುವ ಕ್ರಮ: ಎಸೆತಗಾರ ಚೆಂಡಿನಿಂದ ಬಿಲ್ಲೆಗಳನ್ನು ಬೀಳಿಸಿದಾಗ ಬಿಲ್ಡರ್ಸ್ ತಂಡದವರು ನಿಗದಿತ ಬಿಲ್ಲೆಯ ಕ್ಷೇತ್ರದಲ್ಲಿ ಅತೀ ಹೆಚ್ಚು ದೊಡ್ಡ ಬಿಲ್ಲೆಯನ್ನು ಕೆಳಗಡೆಯೂ ಅತಿ ಚಿಕ್ಕ ಬಿಲ್ಲೆಯನ್ನು ಮೇಲ್ಭಾಗದಲ್ಲಿಯೂ ಇರುವಂತೆ ಸರಿಯಾದ ಕ್ರಮದಲ್ಲಿ ಜೋಡಿಸಿದಾಗ ಅದು ಗೋರಿ ಮಾದರಿ ನಿಲ್ಲುವುದು. ಸರಿಯಾಗಿ ಕಟ್ಟಿ ಆದ ನಂತರದಲ್ಲಿ ಲಗೋರಿ ಎಂದು ನಿರ್ಣಾಯಕರಿಗೆ ಕೇಳುವಂತೆ ಕೂಗಿ ಹೇಳಿದರೆ, ಆಟವನ್ನು ನಿಲ್ಲಿಸಿ ಬಿಲ್ಡರ್ಸ್‍ಗೆ ನೀಡಬೇಕಾದ ಅಂಕಗಳನ್ನು ನೀಡಿ ಎಸೆತಗಾರನಿಗೆ ಮತ್ತೆ ಚೆಂಡು ಎಸೆಯಲು ಅವಕಾಶ ಮಾಡಿಕೊಡಬೇಕು.

ಈ ಆಟವು ಮಹಿಳಾ ಮತ್ತು ಪುರುಷರಿಗೆ ಆಡಲು ಅವಕಾಶ ಒದಗಿಸಿದೆ. ಚುರುಕಿನ ನಡೆ, ಗುರಿ, ಓಟ ಮುಂತಾದ ಕೌಶಲ್ಯಗಳು ಅವಶ್ಯಕವಾಗಿದೆ. ಕೆಲವು ಕಡೆ ಆಟಗಳಲ್ಲಿ ನಿಯಮಗಳನ್ನು ಪಾಲಿಸದೆ ಆಡಿದರೂ, ಅದು ವೈಶಿಷ್ಟ್ಯಮಯವಾಗಿ ಇರುತ್ತದೆ. ಇಂತಹ ಜಾನಪದ ಆಟಗಳು ಉಳಿಯಬೇಕು, ಬೆಳೆಯಬೇಕು. ಈ ಆಟವನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ಆಡುವಂತಾಗಬೇಕು. ಟೂರ್ನ್‍ಮೆಂಟುಗಳು ಹೆಚ್ಚು-ಹೆಚ್ಚು ನಡೆದಲ್ಲಿ ಈ ಕ್ರೀಡೆ ವಿಶ್ವ ಮಟ್ಟದಲ್ಲಿ ರಾರಾಜಿಸುವುದರಲ್ಲಿ ಯಾವದೇ ಸಂದೇಹವಿಲ್ಲ, ಜಾನಪದ ಕ್ರೀಡೆಗಳನ್ನು ಉಳಿಸಿ, ಬೆಳೆಸೋಣ. ?ಹರೀಶ್‍ಸರಳಾಯ,

ಮಡಿಕೇರಿ.