ಸೋಮವಾರಪೇಟೆ, ಜ. 7: ಉತ್ತಮ ಸಂಘಟನೆಯಿಂದ ಮಾತ್ರ ಸಮಾಜದಲ್ಲಿ ಸಾಮರಸ್ಯ ನೆಲೆಸಲು ಸಾಧ್ಯ ಎಂದು ಇಲ್ಲಿನ ವಿರಕ್ತ ಮಠಾಧೀಶರಾದ ಶ್ರೀ ಮೋಕ್ಷಪತಿ ಸ್ವಾಮೀಜಿ ಅಭಿಪ್ರಾಯಿಸಿದರು.

ಮಠದ ಆವರಣದಲ್ಲಿ ನೂತನವಾಗಿ ತೆರೆಯಲಾಗಿರುವ ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಜಂಗಮ ಅರ್ಚಕರ ಸಂಘದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರ್ಚಕರುಗಳು ತಮ್ಮ ವೃತ್ತಿ ಗೌರವ, ಘನತೆಯನ್ನು ಅರಿತು ಜನ ಸಾಮಾನ್ಯರಿಗೆ ಹತ್ತಿರವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.

ಜಿಲ್ಲೆಯ ಅರ್ಚಕ ಬಂಧುಗಳು ಪರಸ್ಪರ ಸಂಘಟಿತರಾಗಬೇಕು. ಸಮಾಜದಲ್ಲಿ ತಾವು ಕೈಗೊಳ್ಳುವ ಧಾರ್ಮಿಕ ಕಾರ್ಯಗಳಿಂದ ಸಾಮರಸ್ಯ ಮೂಡಿಸಬೇಕು. ಸಂಕಷ್ಟದಲ್ಲಿರುವ ಅರ್ಚಕರುಗಳ ನೆರವಿಗೆ ಸಂಘ ಧಾವಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅರ್ಚಕರ ಸಂಘದ ಅಧ್ಯಕ್ಷ ಮೋಹನ್‍ಮೂರ್ತಿ ಶಾಸ್ತ್ರಿ ಮಾತನಾಡಿ, ಕಳೆದ 4 ವರ್ಷಗಳಿಂದ ಸಂಘಟನೆಯನ್ನು ಬಲಪಡಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ವೀರಶೈವ ಲಿಂಗಾಯತ ಅರ್ಚಕರು ಸದಸ್ಯರಾಗಬಹುದು ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ವೀರಶೈವ ಲಿಂಗಾಯತ ಅರ್ಚಕರ ಸಂಘದ ರಾಜ್ಯ ನಿರ್ದೇಶಕ ಯೋಗೇಶ್ ಶಾಸ್ತ್ರಿ, ಜಿಲ್ಲಾ ಉಪಾಧ್ಯಕ್ಷ ಶಾಂತಮಲ್ಲಯ್ಯ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಶಾಸ್ತ್ರಿ, ಖಜಾಂಚಿ ಮನುಕುಮಾರ್ ಶಾಸ್ತ್ರಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ವೀರಶೈವ ಲಿಂಗಾಯತ ಜಂಗಮ ಅರ್ಚಕರು ಹಾಜರಿದ್ದರು.