ಸೋಮವಾರಪೇಟೆ, ಜ. 7: ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಕ್ಕಳ ಸಹಾಯವಾಣಿ ಕೇಂದ್ರದ ಆಶ್ರಯದಲ್ಲಿ ಸಮೀಪದ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛಭಾರತ್ ಅಭಿಯಾನ ಕಾರ್ಯಕ್ರಮ ನಡೆಯಿತು.

ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆರೋಗ್ಯ ಸ್ವಚ್ಛತೆ ಹಾಗೂ ಪರಿಸರ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

ಪೊಲೀಸ್ ಸಿಬ್ಬಂದಿ ಶಿವಕುಮಾರ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೇ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ದುಶ್ಚಟಗಳಿಂದ ದೂರವಿದ್ದು, ತಮ್ಮ ದೇಹಾರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಶಿಕ್ಷಣ ಇಲಾಖೆಯ ಇಸಿಓ ಶೇಖರ್ ಮಾತನಾಡಿ, ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಬಗ್ಗೆ ಮಾಹಿತಿ ಒದಗಿಸಿದರು. ಮಕ್ಕಳ ಸಹಾಯವಾಣಿ ಕೇಂದ್ರದ ಸಂಯೋಜಕ ನವೀನ್ ಅವರು ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡುವ ವಿಧಾನ, ಅದರಿಂದಾಗುವ ಪ್ರಯೋಜನಗಳ ಬಗ್ಗೆ ವಿವರಣೆ ನೀಡಿದರು.

ಕಾರ್ಯಕ್ರಮದಲ್ಲಿ ಸಿಆರ್‍ಪಿ ಅಶೋಕ್, ವಿಜಯಕುಮಾರ್, ಮಕ್ಕಳ ಸಹಾಯವಾಣಿ ಕೇಂದ್ರದ ಬಿ.ಕೆ. ಕುಮಾರಿ, ಯೋಗೇಶ್, ಉಪಾಧ್ಯಕ್ಷೆ ಉಷಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಶಾಲಾ ಆವರಣದಲ್ಲಿ ವಿವಿಧ ಜಾತೀಯ ಗಿಡಗಳನ್ನು ನೆಡಲಾಯಿತು.