ಮಡಿಕೇರಿ, ಜ. 7 : ಪೊಂಗಲ್ ಹಬ್ಬದ ಪ್ರಯುಕ್ತ ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ವತಿಯಿಂದ ಸಮುದಾಯ ಬಾಂಧವರಿಗಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಜಿಲ್ಲಾ ಮಟ್ಟದ ಕಾವೇರಿ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಆಯೋಜಿಸಲಾಗಿದೆ. ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯಿತಿ ಸಿಇಒ ಲಕ್ಷ್ಮಿಪ್ರಿಯಾ ಅವರು ಉದ್ಘಾಟಿಸಲಿದ್ದು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ.

ಎರಡು ದಿನ ಕ್ರೀಡಾಕೂಟ ನಡೆಸಲು ನಿರ್ಧರಿಸಲಾಗಿದ್ದು, ಮೊದಲ ದಿನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು 15 ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ. ಎರಡನೇ ದಿನ ಬೆಳಿಗ್ಗೆ ಕ್ರಿಕೆಟ್ ಪಂದ್ಯಾಟದ ಫೈನಲ್, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ, ಯುವಕ, ಯುವತಿ, ಮಹಿಳೆಯರಿಗೆ ಹಾಗೂ ವೃದ್ಧರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯುತ್ತವೆ. ಮಧ್ಯಾಹ್ನದ ಭೋಜನ ಕೂಟದ ಬಳಿಕ ಮುಖ್ಯ ಅತಿಥಿಗಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಾಂಸ್ಕೃತಿಕ ನೃತ್ಯ ಸ್ಪರ್ಧೆ ಹಾಗೂ ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿವೆ.

ಸಮಾರೋಪ ಸಮಾರಂಭದಲ್ಲಿ ಸಂಘದ ಸದಸ್ಯರಲ್ಲಿ 5 ಮಂದಿ ಕ್ರಿಯಾಶೀಲ ಸದಸ್ಯರನ್ನು ಸನ್ಮಾನಿಸಲಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ಹಂತಗಳಲ್ಲಿ ಶೇ.75 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಈ ಸಂದರ್ಭ ವಿವಿಧ ಕ್ರೀಡಾಕೂಟದ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.

ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ರೂ. 10 ಸಾವಿರ ನಗದು ಹಾಗೂ ರನ್ನರ್ ಅಫ್ ತಂಡಕ್ಕೆ ರೂ. 5 ಸಾವಿರ ನಗದು, ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ. ಹಗ್ಗಜಗ್ಗಾಟ ಹಾಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಕ್ರಿಕೆಟ್ ಪಂದ್ಯಾಟ ಸೂಪರ್ 8 ಮಾದರಿಯಲ್ಲಿ(8+1) ನಡೆಯಲಿದೆ.

2018-19ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿ ಹಂತಗಳಲ್ಲಿ ಶೇ. 75 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳು ತಮ್ಮ ನಕಲಿ ಅಂಕಪಟ್ಟಿ, ಸಂಪರ್ಕ ಸಂಖ್ಯೆ ಹಾಗೂ ಸಂಪೂರ್ಣ ವಿವರವನ್ನು ವಾಟ್ಸ್ ಆ್ಯಪ್ ನಂಬರ್ +919945103012ಗೆ ಕಳುಹಿಸಬಹುದಾಗಿದೆ.

ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮದ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರ. ಕಾರ್ಯದರ್ಶಿ ಮೋಹನ್ ರಾಜ್ : +919108255266, ಕ್ರೀಡಾ ಸಮಿತಿ ಸಂಚಾಲಕರಾದ ಅರುಣ್ ಕುಮಾರ್ : +919741436011, ಕದಿರೇಶ್ : +9199809 89584, ಸುಕುಮಾರ್ : +919686553320, ಆಶಾ : +917619496805 ಅವರನ್ನು ಸಂಪರ್ಕಿಸಬಹುದಾಗಿದೆ. ಕ್ರೀಡಾಕೂಟ ನಡೆಯುವ ಸ್ಥಳ ಹಾಗೂ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಕೊಡಗು ಜಿಲ್ಲಾ ಕಾವೇರಿ ತಮಿಳು ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.