ಮಡಿಕೇರಿ, ಜ. 7: ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಇದರಲ್ಲಿನ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲರೂ ಬಳಸಿಕೊಳ್ಳಬೇಕು ಎಂದು ಚಿಕ್ಕಳುವಾರ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ಕನ್ನಡ ಉಪನ್ಯಾಸಕ ಜಮೀರ್ ಅಹಮ್ಮದ್ ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪತ್ರಿಕೋದ್ಯಮ ವಿಭಾಗ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಪತ್ರಿಕೋದ್ಯಮದ ಹುಟ್ಟು, ಬೆಳವಣಿಗೆ ಮತ್ತು ಪ್ರಸ್ತುತದಲ್ಲಿ ಪತ್ರಿಕೋದ್ಯಮದ ಮಹತ್ವ ಹಾಗೂ ಭಾರತದಲ್ಲಿ ಸುಮಾರು 1.5 ಲಕ್ಷ ಪತ್ರಿಕೆಗಳಿದ್ದು ಇದರಿಂದ ಹಲವಾರು ಉದ್ಯೋಗಗಳು ದೊರಕುವಂತಾಗಿದೆ. ಪತ್ರಿಕೋದ್ಯಮವೆಂದರೆ ವರದಿ ಮಾಡುವುದು ಅಥವಾ ನಿರೂಪಣೆ ಮಾತ್ರವಲ್ಲ ಅದನ್ನು ಹೊರತು ಪಡಿಸಿ ಹಲವು ಉದ್ಯೋಗಗಳಿವೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಂಡು ಮಾಧ್ಯಮ ಕ್ಷೇತ್ರದಲ್ಲಿರುವ ವಿವಿಧ ಅವಕಾಶಗಳನ್ನು ಬಳಸಿಕೊಳ್ಳಬೇಕು. ಧೈರ್ಯದಿಂದ ಜೀವನದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ ಈ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕೋದ್ಯಮದ ಕ್ಷೇತ್ರದಲ್ಲಿ ವಿವಿಧ ಸಾಧನೆ ಮಾಡಿದ್ದಾರೆ. ಅವರನ್ನು ಸ್ಫೂರ್ತಿಯನ್ನಾಗಿಟ್ಟುಕೊಂಡು ನೀವು ಅವರ ಹಾದಿಯಲ್ಲಿ ನಡೆಯಬೇಕು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜೀವನದ ಪಾಠವನ್ನು ಕಲಿಯಬೇಕಿದೆ ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಬಂದು ವಿವಿಧ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಕಾಲೇಜು ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ ಉದ್ಘಾಟಿಸಿ ಮಾತನಾಡಿ ಪತ್ರಿಕೆಗಳ ಮುಖಪುಟದಲ್ಲಿ ಸಕರಾತ್ಮಾಕ ಸುದ್ದಿಗಳನ್ನು ಪ್ರಕಟಿಸಬೇಕು ಎಂದು ಹೇಳಿದರು.

ಎಫ್‍ಎಂಸಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾಟೋಳಂಡ ಚರ್ಮಣ, ಎಫ್‍ಎಂಸಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕ ಐಮುಡಿಯಂಡ ಅರುಣ್ ಮಾಚಯ್ಯ, ಪತ್ರಕರ್ತರ ಆನಂದ್ ಕೊಡಗು, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರು, ಇತರರು ಪಾಲ್ಗೊಂಡಿದ್ದರು.

ಅಮೃತ್ ರಾಜ್ ಪ್ರಾರ್ಥಿಸಿದರು. ಎಫ್‍ಎಂಸಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನಿರ್ದೇಶಕ ಕಿಶೋರ್ ನಿರೂಪಿಸಿದರು, ಎಫ್‍ಎಂಸಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಬೊಳ್ಳಜಿರ ಬಿ. ಅಯ್ಯಪ್ಪ ವಂದಿಸಿದರು.