ಸೋಮವಾರಪೇಟೆ, ಜ. 7: ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮೀಪದ ಶಾಂತಳ್ಳಿ ಗ್ರಾಮದ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ದೇವಾಲಯದ ಜಾತ್ರೋತ್ಸವ ತಾ. 13 ರಿಂದ 17ರವರೆಗೆ ನಡೆಯಲಿದೆ ಎಂದು ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಜಿ.ಎಸ್. ರಘುಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಾ. 13ರಂದು ಸಂಜೆ 6.30ರಿಂದ ಬೆಳ್ಳಿ ಬಂಗಾರದ ದಿನದ ಜಾತ್ರಾ ಪ್ರಾರಂಭೋತ್ಸವ ಪೂಜೆ, ಧರ್ಮದರ್ಶಿ ಮಂಡಳಿ ಮತ್ತು ಗ್ರಾಮಸ್ಥರಿಂದ ಜಾತ್ರಾ ಪ್ರಾರಂಭ ಪೂಜೆ, ಪ್ರಾರ್ಥನೆ ನಡೆಯಲಿದೆ. ತಾ. 14ರಂದು ಮಕರ ಸಂಕ್ರಮಣ ಕರುವಿನ ಹಬ್ಬದಂದು ಸಂಜೆ 7 ಗಂಟೆಗೆ ಗರುಡಗಂಭದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪ ಬೆಳಗಿಸುವದು, ಅಂಕುರಾರ್ಪಣ ಪೂಜೆ, ಮಹಾಮಂಗಳಾರತಿ, ಪ್ರಾರ್ಥನೆ ನಡೆಯಲಿದೆ. ತಾ. 15ರಂದು ಪೂರ್ವಾಹ್ನ 11.50ರಿಂದ ಅರಸು ಬಲ ಸೇವೆ, ಸಂಜೆ 7.30ರಿಂದ ಗಣಹೋಮ, ರಂಗಪೂಜೆ, ಬೀದಿ ಉತ್ಸವ, ಮಹಾಮಂಗಳಾರತಿ ಜರುಗಲಿದೆ ಎಂದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಮಾಜೀ ಸದಸ್ಯ ಹಾಗೂ ಧರ್ಮದರ್ಶಿ ಮಂಡಳಿ ಪ್ರಮುಖರಾದ ಎಸ್.ಜಿ. ಮೇದಪ್ಪ ಮಾತನಾಡಿ, ತಾ. 16ರಂದು ಮಧ್ಯಾಹ್ನ 12.05ಕ್ಕೆ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ 61ನೇ ಮಹಾ ರಥೋತ್ಸವ ಜರುಗಲಿದ್ದು, ನಂತರ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ. ಹರಪಳ್ಳಿ ರವೀಂದ್ರ ಅವರು ರೂ. 1 ಲಕ್ಷ ಸೇರಿದಂತೆ ಬೆಂಗಳೂರಿನ ಬಿ.ಈ. ರಾಮಚಂದ್ರ, ಪುತ್ರ ಚಿರಂಜೀವಿ, ನಗರಳ್ಳಿಯ ಬಿಂದುಕಲಾ ವೆಂಕಟೇಶ್ ಅವರೊಂದಿಗೆ ಇತರ ದಾನಿಗಳು ಅನ್ನದಾನಕ್ಕೆ ಹೆಚ್ಚಿನ ಸಹಾಯ ನೀಡಿದ್ದು, ಪ್ರಸಕ್ತ ವರ್ಷ ತಾ. 15, 16 ಮತ್ತು 17ರಂದು ಮೂರು ದಿನಗಳ ಕಾಲ ದೇವಾಲಯದಲ್ಲಿ ಮಧ್ಯಾಹ್ನ 12.10ರಿಂದ 2.30ರವರೆಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಇದರೊಂದಿಗೆ ಕಲ್ಕಂದೂರಿನ ಶ್ರೀ ಶಾಸ್ತ ಯುವಕ ಸಂಘದಿಂದ ರಥೋತ್ಸವ ದಿನದಂದು ಮಜ್ಜಿಗೆ ವಿತರಣೆ ಮಾಡಲಾಗುವದು. ತಾ. 16ರಂದು ಮಧ್ಯಾಹ್ನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಡೊಳ್ಳುಕುಣಿತ, ಕಂಸಾಳೆ ಮತ್ತು ಗೊಂಬೆ ಕುಣಿತದ ಆಕರ್ಷಣೆ ಇದ್ದು, ರಾತ್ರಿ 7 ಗಂಟೆಗೆ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ, ವೇದಮೂರ್ತಿ ಶಿಬರೂರು ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನೆರವೇರಲಿವೆ ಎಂದರು.

ತಾ. 17ರಂದು ಮಹಾ ಸಂಪ್ರೋಕ್ಷಣೆ, ವಿವಿಧ ಅರ್ಚನೆ, ಪಂಚಾಮೃತಾಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ, ಮಂಗಳ ಪ್ರಾರ್ಥನೆ ನಡೆಯಲಿದೆ. ಅಂದು ಬೆಳಗ್ಗೆ 10 ರಿಂದ 12.30ರವರೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಸ್ಪರ್ಧೆ ಆಯೋಜಿಸಲಾಗಿದ್ದು, ಪ್ರತಿ ವಿಭಾಗದಲ್ಲೂ ಬಹುಮಾನ ನೀಡಲಾಗುವದು ಎಂದು ಮಾಹಿತಿಯಿತ್ತರು.

ಅಪರಾಹ್ನ 2 ಗಂಟೆಗೆ ಜಾತ್ರಾ ಮುಕ್ತಾಯ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ರಘುಕುಮಾರ್ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರರು ಭಾಗವಹಿಸಿದ್ದಾರೆ ಎಂದರು.

ಕ್ರೀಡಾಕೂಟ: ಮಹಾರಥೋತ್ಸವದ ಅಂಗವಾಗಿ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ತಾ. 15 ಮತ್ತು 16ರಂದು ಅಂತರ್‍ಜಿಲ್ಲಾ ಮಟ್ಟದ ಪುರುಷರ ಕಬಡ್ಡಿ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟಗಳು ನಡೆಯಲಿವೆ ಎಂದು ಸಮಿತಿಯ ಕಾರ್ಯದರ್ಶಿ ಕೆ.ಕೆ. ಪರಮೇಶ್ ತಿಳಿಸಿದರು.

ಕಬಡ್ಡಿ ಪಂದ್ಯಾಟದಲ್ಲಿ ವಿಜೇತರಾಗುವ ತಂಡಗಳಿಗೆ ಪ್ರಥಮ ಬಹುಮಾನವಾಗಿ ಟ್ರೋಫಿ ಮತ್ತು ರೂ 22 ಸಾವಿರ ನಗದು, ದ್ವಿತೀಯ ಸ್ಥಾನ ಗಳಿಸುವ ತಂಡಕ್ಕೆ ಟ್ರೋಫಿ ಮತ್ತು ರೂ. 12 ಸಾವಿರ ನಗದು, ತೃತೀಯ ಸ್ಥಾನ ಗಳಿಸುವ ತಂಡಕ್ಕೆ 6 ಸಾವಿರ ನಗದು ಹಾಗೂ ಟ್ರೋಫಿ À ನೀಡಲಾಗುವದು ಎಂದರು.

ಥ್ರೋಬಾಲ್ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ರೂ. 10 ಸಾವಿರ ನಗದು, ದ್ವಿತೀಯ ಸ್ಥಾನವಾಗಿ ರೂ. 5 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವದು. ಜಾತ್ರೋತ್ಸವ ಅಂಗವಾಗಿ ಕೃಷಿ ಸೇರಿದಂತೆ ವಿವಿಧ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಸಮಿತಿಯಿಂದ ಬಹುಮಾನ ವಿತರಿಸಲಾಗುವದು ಎಂದರು.

ಜಾತ್ರೋತ್ಸವ ಸಂದರ್ಭ ಅನ್ನದಾನ ಸೇರಿದಂತೆ ಇನ್ನಿತರ ವ್ಯವಸ್ಥೆಗಳಿಗೆ ಸಾರ್ವಜನಿಕ ಭಕ್ತಾದಿಗಳಿಂದ ಭತ್ತ, ಅಕ್ಕಿ, ತೆಂಗಿನಕಾಯಿ, ಎಣ್ಣೆ, ತರಕಾರಿ, ಸೇರಿದಂತೆ ಧನ ಸಹಾಯವನ್ನು ಸ್ವೀಕರಿಸಲಾಗುವದು. ಸೇವೆ ಮಾಡಲಿಚ್ಚಿಸುವ ಭಕ್ತಾದಿಗಳು ಮೊ:8762347988, 9483785588 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ದೇವಾಲಯ ಧರ್ಮದರ್ಶಿ ಮಂಡಳಿಯ ಖಜಾಂಚಿ ಡಿ.ಎಸ್. ಲಿಂಗರಾಜು, ಉಪಾಧ್ಯಕ್ಷ ಕೆ.ಟಿ. ಕೃಷ್ಣಪ್ಪ, ಧರ್ಮದರ್ಶಿ ಕೆ.ಎಸ್. ಚಂದ್ರಾವತಿ, ಸದಸ್ಯ ಎಸ್.ಎ. ಪ್ರತಾಪ್ ಅವರುಗಳು ಉಪಸ್ಥಿತರಿದ್ದರು.