ನಾಪೋಕ್ಲು, ಜ. 7: ಚೆರಿಯಪರಂಬು ಕಾವೇರಿ ನದಿದಡದಲ್ಲಿ ಮಡಿಕೇರಿಯ ಹೋಂಸ್ಟೇವೊಂದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದವರ ವಿರುದ್ದ ಗ್ರಾಮ ಪಂಚಾಯಿತಿ ಆಡಳಿತ ಐದು ಸಾವಿರ ರೂಪಾಯಿಗಳ ದಂಡ ವಿಧಿಸಿದ ಘಟನೆ ನಡೆದಿದೆ.
ಮಡಿಕೇರಿಯ ಹೋಂಸ್ಟೇ ಒಂದರ ತ್ಯಾಜ್ಯಗಳನ್ನು ದೊಡ್ಡ, ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ ಟಾಟಾ ಏಸ್ ವಾಹನದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬು ಪಂಚಾಯಿತಿ ಕಸವಿಲೇವಾರಿ ಜಾಗದಲ್ಲಿ ತಂದು ಸುರಿಯಲಾಗುತ್ತಿತ್ತು. ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಹಾಗೂ ಪಂಚಾಯಿತಿ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ತ್ಯಾಜ್ಯವನ್ನು ತಂದು ಸುರಿಯುತ್ತಿದ್ದವರ ವಿರುದ್ಧ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕಸವನ್ನು ಪುನಃ ವಾಹನಕ್ಕೆ ತುಂಬಿಸಿ ವಾಪಸು ಕಳುಹಿಸುವುದರೊಂದಿಗೆ ಐದು ಸಾವಿರ ರೂಪಾಯಿಗಳ ದಂಡವನ್ನು ವಸೂಲಾತಿ ಮಾಡಿದ್ದಾರೆ. ಇದೇ ರೀತಿ ಕಳೆದೆರಡು ದಿನಗಳ ಹಿಂದೆ ಪಟ್ಟಣದ ಕೋಳಿ ಅಂಗಡಿಯೊಂದರ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದವರ ವಿರುದ್ಧ ಎರಡು ಸಾವಿರ ರೂಪಾಯಿಗಳ ದಂಡವನ್ನು ವಸೂಲಾತಿ ಮಾಡುವ ಮೂಲಕ ಎಲ್ಲೆಂದರಲ್ಲಿ ಕಸ ಸುರಿಯುತ್ತಿರುವವರಿಗೆ ಗ್ರಾಮ ಪಂಚಾಯಿತಿ ಆಡಳಿತ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಮಡಿಕೇರಿಯ ಹೋಂಸ್ಟೇ ಒಂದರ ತ್ಯಾಜ್ಯವನ್ನು ಪಂಚಾಯಿತಿ ವ್ಯಾಪ್ತಿಯ ಚೆರಿಯಪರಂಬುನಲ್ಲಿ ತಂದು ಸುರಿಯುತ್ತಿದ್ದವರಿಗೆ ಐದು ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಈಗಾಗಲೇ ಎಲ್ಲೆಂದರಲ್ಲಿ ಕಸವಿಲೇವಾರಿ ಮಾಡದಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗಿದೆ. ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಕಸ ತಂದು ಸುರಿಯುತ್ತಿರುವವರ ವಿರುದ್ಧ ಗ್ರಾಮ ಪಂಚಾಯಿತಿ ಆಡಳಿತ ಕಠಿಣ ಕ್ರಮಕೈಗೊಂಡಿದೆ.