ವೀರಾಜಪೇಟೆ, ಜ. 6: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರರ ಸಮಸ್ಯೆಗಳನ್ನು ಅರಿತು ಅವರಿಗೆ ಸಹಕಾರ ನೀಡಬೇಕು. ಎಲ್ಲ ಕಾರ್ಯಕರ್ತರು ಹಿಂದಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ದೀರ್ಘಾವಧಿಯ ಇತಿಹಾಸವನ್ನು ಹೊಂದಿರುವ ಪಕ್ಷವನ್ನು ತಳಮಟ್ಟದಿಂದಲೇ ಎಲ್ಲ ರೀತಿಯಿಂದಲೂ ಬಲಿಷ್ಠಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಹೇಳಿದರು.

ವೀರಾಜಪೇಟೆಯ ಗಣಪತಿ ಆರ್ಕಾಡ್ ಸಂಕೀರ್ಣದ ಸಭಾಂಗಣದಲ್ಲಿ ಪಕ್ಷದ ಜಿಲ್ಲಾ, ಬ್ಲಾಕ್ ಹಾಗೂ ನಗರ ಸಮಿತಿಯಿಂದ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್‍ನ ನೂತನ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರಿಗೆ ಅಧಿಕಾರ ಹಸ್ತಾಂತರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ್ ಅವರು ಕಾರ್ಯಕರ್ತರ ಒಮ್ಮತವೂ ಪಕ್ಷದ ಬಲಿಷ್ಠತೆಗೆ ಕಾರಣವಾಗಲಿದೆ. ರಾಷ್ಟ್ರ ಹಾಗೂ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ ಭಾರತೀಯ ಜನತಾ ಪಾರ್ಟಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತಂದು ಜಾತಿ, ಧರ್ಮ, ಸಮಾಜವನ್ನು ಒಡೆದು ಆಳುವ ಪರಿಸ್ಥಿತಿಗೆ ತಂದಿದೆ. ರಾಷ್ಟ್ರದ ಪ್ರಧಾನಿ ಹಾಗೂ ಗೃಹ ಸಚಿವರು ಸಂವಿಧಾನವನ್ನು ಗೌರವಿಸುವ ಬದಲು ತಿರುಚಲು ಹೊರಟಿದ್ದಾರೆ. ಇಂದಿನ ಪೌರತ್ವ ಕಾಯಿದೆಯ ಸಾಧಕ ಬಾಧಕಗಳನ್ನು ಅವಲೋಕಿಸಿದಾಗ ಎಲ್ಲರಿಗೂ ತೊಂದರೆಯಾಗಲಿದೆ ಎಂದು ಹೇಳಿದರು.

ಸಮಾರಂಭವನ್ನುದ್ದೇಶಿಸಿ ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ಜಿಲ್ಲಾಧ್ಯಕ್ಷ ನರೇಂದ್ರ ಕಾಮತ್, ಕಿಶಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ಹಿಂದುಳಿದ ವರ್ಗದ ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಕೆ.ಸತೀಶ್, ಜಿಲ್ಲಾ ಸೇವಾದಳದ ಚಿಲ್ಲವಂಡ ಕಾವೇರಪ್ಪ, ಅಲ್ಪ ಸಂಖ್ಯಾತರ ಘಟಕದ ರಾಜ್ಯ ಸಮಿತಿ ಉಪಾಧ್ಯಕ್ಷ ಹ್ಯಾರಿಶ್, ಜಿಲ್ಲಾಧ್ಯಕ್ಷ ಉಸ್ಮಾನ್, ನಗರ ಸಮಿತಿ ಅಧ್ಯಕ್ಷ ಜಿ.ಜಿ.ಮೋಹನ್, ಹಿರಿಯ ವಕೀಲರಾದ ಎನ್.ಜಿ.ಕಾಮತ್, ಸೋನಿಯಾ ಗಾಂಧಿ ಬ್ರಿಗೇಡ್‍ನ ಅಧ್ಯಕ್ಷ ಜಾನ್‍ಸನ್ ಮಾತನಾಡಿದರು. ಸಮಾರಂಭದಲ್ಲಿ ಬ್ಲಾಕ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರಿಗೆ ಕೆ.ಕೆ.ಮಂಜುನಾಥ್ ಅವರು ಪಕ್ಷದ ಧ್ವಜವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ, ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್, ಚೆನ್ನಮ್ಮ, ಕಾವೇರಮ್ಮ, ಮಹಿಳಾ ಘಟಕದ ವಿನಿತಾ ಕಾವೇರಮ್ಮ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಸಿ.ಕೆ.ಪೃಥ್ವಿನಾಥ್, ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ, ತಬ್ಸಮ್, ಆಗಸ್ಟಿನ್ ಬೆನ್ನಿ, ಪಕ್ಷದ ಮತ್ತಿತರರ ಪ್ರಮುಖರು ಹಾಜರಿದ್ದರು.

ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಕಾರ್ಯಕರ್ತರು, ಹತ್ತೊಂಭತ್ತು ಗ್ರಾಮ ಪಂಚಾಯಿತಿ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು. ನಗರ ಸಮಿತಿ ಕಾರ್ಯದರ್ಶಿ ಎಂ.ಎಂ.ಶಶಿಧರನ್ ಸ್ವಾಗತಿಸಿ ನಿರೂಪಿಸಿದರು. ಮಹಮ್ಮದ್ ರಾಫಿ ವಂದಿಸಿದರು.