ಮಡಿಕೇರಿ, ಜ. 6 : ಗುರು ಇದ್ದರೇ ಮಾತ್ರ ಗುರಿ ತಲುಪಲು ಸಾಧ್ಯ. ಮಕ್ಕಳೊಂದಿಗೆ ಶಿಕ್ಷಕರಿದ್ದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಆಶ್ರಯದಲ್ಲಿ ಮುಖ್ಯೋಪಾಧ್ಯಾಯರಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಉತ್ತಮ ಪಡಿಸುವ ಬಗ್ಗೆ ಕಾರ್ಯಾಗಾರ ನಗರದ ಸಂತ ಮೈಕಲರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಮಕ್ಕಳಿಗೆ ಉತ್ತಮವಾಗಿ ಪರೀಕ್ಷೆ ಬರೆಯುವಂತೆ ಪೂರ್ವಭಾವಿಯಾಗಿ ಶಿಕ್ಷಕರು ಸಹಕಾರ ನೀಡಬೇಕು. ಇದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಇರುವ ಭಯ ಹೋಗಲಾಡಿಸಬೇಕು ಎಂದು ಅವರು ಸಲಹೆ ಮಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶವನ್ನು ಉತ್ತಮ ಪಡಿಸಬೇಕು. ರಾಜ್ಯದಲ್ಲಿ ಮಾದರಿಯಾಗಬೇಕು ಎಂದು ಹೇಳಿದರು.

ಶಾಲೆಗಳಲ್ಲಿ ಪೋಷಕರ ಸಭೆಯನ್ನು ಕರೆದು ಮಕ್ಕಳಲ್ಲಿನ ಪ್ರಗತಿ ಸಾಧಿಸಿರುವ ಕುರಿತು ಹಾಗೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತೆ ಮಾಡಿಸುವಂತೆ ಶಿಕ್ಷಕರು ಪೋಷಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪೂರ್ವ ಸಿದ್ಧತೆಯ ಬಗ್ಗೆ ಪೋಷಕರಿಂದ, ಶಿಕ್ಷಕರಿಂದ, ಜನಪ್ರತಿನಿಧಿಗಳಿಂದ ಮಕ್ಕಳಿಗೆ ಉತ್ತೇಜನ ನೀಡುವುದರಿಂದ ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಭಯ ನಿವಾರಿಸಬಹುದು. ಇದರಿಂದ ಮಕ್ಕಳು ಯಾವುದೇ ರೀತಿಯ ಒತ್ತಡಕ್ಕೆ ಸಿಲುಕದೆ ಉತ್ತಮ ರೀತಿಯಲ್ಲಿ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ನೋಡಿಕೊಳ್ಳಲು ತಿಳಿಸಿದರು. ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಶಿಕ್ಷಕರ ಶಿಕ್ಷಣ ಯೋಜನೆಯ 10ನೇ ತರಗತಿ ಪ್ರಶ್ನೆಕೋಠಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಜಿ.ಪಂ. ಸಿಇಒ ಲಕ್ಷ್ಮೀಪ್ರಿಯಾ, ಈ ಪುಸ್ತಕವನ್ನು ಉಪಯೋಗಿಸಿಕೊಳ್ಳುವಂತೆ ಸೂಚಿಸಿದರು.

ಗಣಿತ, ವಿಜ್ಞಾನ ವಿಷಯಕ್ಕೆ ಹೆಚ್ಚು ಒತ್ತು ನೀಡಿ ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು. ಪಠ್ಯಕ್ರಮವನ್ನು ಮುಗಿಸಿ ಪರೀಕ್ಷೆಗೆ ಪೂರ್ವ ಸಿದ್ಧತೆಯನ್ನು ನಡೆಸಿ, ಜಿಲ್ಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಉತ್ತಮವಾಗಿ ಬರುವಂತೆ ಎಲ್ಲರೂ ಪರಿಶ್ರಮ ಪಡಬೇಕಿದೆ ಎಂದರು.

ಸಮಯ ನಿರ್ವಹಣೆ, ಗುಂಪು ಚರ್ಚೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು. ಮಕ್ಕಳಿಗೆ ವಿಜ್ಞಾನದ ಕುರಿತ ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯನ್ನು ಪ್ರತಿ ಶನಿವಾರ ಏರ್ಪಡಿಸಿ ವಿಜ್ಞಾನ ವಿಷಯದ ಬಗ್ಗೆ ಕುತೂಹಲ ಹೆಚ್ಚಿಸುವಂತೆ ಮಾಡಬೇಕು ಎಂದು ಅವರು ಹೇಳಿದರು.

ಪೂರ್ವಭಾವಿ ಪರೀಕ್ಷೆಯ ಸಂದರ್ಭ ವಿದ್ಯಾರ್ಥಿಗಳ ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ ಉತ್ತಮ ನೀರು ಹಾಗೂ ಆಹಾರವನ್ನು ನೀಡಿ ಎಂದು ಅವರು ಹೇಳಿದರು. ಗಣಕಯಂತ್ರ (ಟಿಎಎಲ್‍ಪಿ) ಶಿಕ್ಷಣದ ಮೂಲಕ ಮಕ್ಕಳಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಣಾಮಕಾರಿ ಬೋಧನೆಗೆ ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿಗೆ ಭಾಜನರಾದ ಹಂಡ್ಲಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ವಿಕ್ರಾಂತ್ ಮತ್ತು ನಿವೃತ್ತರಾದ ಮಾರುತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಾಣಿ ಅಪ್ಪಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಅಧಿಕಾರಿ ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎನ್. ಗಾಯತ್ರಿ (ಮಡಿಕೇರಿ), ಶ್ರೀಶೈಲ ಬೀಳಗಿ (ವೀರಾಜಪೇಟೆ), ಹೆಚ್.ಕೆ. ಪಾಂಡು (ಸೋಮವಾರಪೇಟೆ) ಇತರರು ಪಾಲ್ಗೊಂಡಿದ್ದರು.

ಶಿಕ್ಷಕ ಲೋಕೇಶ್ ಪ್ರಾರ್ಥಿಸಿ, ಕೂಡಿಗೆ ಡಯಟ್‍ನ ಹಿರಿಯ ಉಪನ್ಯಾಸಕ ಮಲ್ಲೇಸ್ವಾಮಿ ಸ್ವಾಗತಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಅಧಿಕಾರಿ ವೆಂಕಟೇಶ್ ನಿರೂಪಿಸಿ, ವಂದಿಸಿದರು.