ಸಿದ್ದಾಪುರ, ಜ. 4: ಇಬ್ಬರ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಸಿದ್ದಾಪುರ ಸಮೀಪದ ಅರೆಕಾಡು ಗ್ರಾಮದಲ್ಲಿ ನಡೆದಿದೆ.
ಅರೆಕಾಡು ಗ್ರಾಮದ ಟಾಟಾ ಸಂಸ್ಥೆಯ ಬಳಂಜಿಕರೆ ತೋಟದಲ್ಲಿ ಜಾರ್ಕಂಡ್ ಮೂಲತಃ ದಯಾನಂದ್ ತನ್ನ ಇಬ್ಬರು ಪತ್ನಿಯರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಶನಿವಾರ ಸಂಜೆ ದಯಾನಂದ್ನ ಎರಡನೇ ಪತ್ನಿ ಆಶಿಕಾ ಹಾಗೂ ಮೊದಲನೇ ಪತ್ನಿ ವಾಶಿಕಾ ನಡುವೆ ಕಲಹ ಸಂಭವಿಸಿದೆ. ಕಲಹವು ವಿಕೋಪಕ್ಕೆ ತಿರುಗಿದ್ದು, ಎರಡನೇ ಪತ್ನಿ ಆಶಿಕಾ ಕತ್ತಿಯಿಂದ ವಾಶಿಕಾಳ ಕುತ್ತಿಗೆಗೆ ಇರಿದಿದ್ದಾಳೆ. ತೀವ್ರ ರಕ್ತಸ್ರಾವದಿಂದಾಗಿ ವಾಶಿಕ ತನ್ನ ಮಕ್ಕಳ ಮುಂದೆಯೇ ಸಾವನ್ನಪ್ಪಿದ್ದಾಳೆ.
ವಾಶಿಕಾಗೆ ಎರಡು ಪುಟ್ಟ ಮಕ್ಕಳಿದ್ದು, ಆರೋಪಿ ಆಶಿಕಾಗೆ ಒಂದು ಮಗು ಇದೆ. ಮೃತದೇಹವನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಡಲಾಗಿದೆ.
ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಬೋಜಪ್ಪ ಭೇಟಿ ನೀಡಿ, ಆರೋಪಿ ಆಶಿಕಾಳನ್ನು ಬಂಧಿಸಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ವಾಸು