‘ಶಕ್ತಿ’ ವರದಿ ಮಡಿಕೇರಿ, ಜ. 3: ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯ ಆಡಳಿತವಿದೆ. ಈ ಆಡಳಿತಾರೂಢ ಪಕ್ಷದಲ್ಲಿ ಜಿ.ಪಂ.ನ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಆರಂಭದ ದಿನಗಳಲ್ಲಿ ಪಕ್ಷದೊಳಗೆ ಹಾಗೂ ಈ ಪಟ್ಟಕ್ಕೆ ಅರ್ಹತೆ ಹೊಂದಿದ್ದು ಇದಕ್ಕೆ ಬೇಡಿಕೆ ಮುಂದಿರಿಸಿದ್ದವರ ನಡುವೆ ಆಂತರಿಕವಾದ ಒಡಂಬಡಿಕೆಯೊಂದು ನಡೆದಿತ್ತು ಎನ್ನಲಾಗಿದ್ದು, ಪ್ರಸ್ತುತ ಈ ಒಳಬೇಗುದಿ ಬಹಿರಂಗವಾಗಿ ಹೊರಗೆ ಬಾರದಿದ್ದರೂ ಪಕ್ಷದೊಳಗೆ ಮುಸುಕಿನ ಗುದ್ದಾಟದಲ್ಲೇ ಮುಂದುವರಿ ಯುತ್ತಿರುವ ಬಗ್ಗೆ ‘ಶಕ್ತಿ’ಗೆ ತಿಳಿದುಬಂದಿದೆ.ಈ ಹಿಂದೆ ಜಿಲ್ಲಾ ಪರಿಷತ್ ಎಂಬದು ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಜಮ್ಮಡ ಎ. ಕರುಂಬಯ್ಯ ಅವರು ಸಂಪೂರ್ಣ ಐದು ವರ್ಷದ ಅವಧಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಜಾರಿಗೆ ಬಂದ ಬಳಿಕ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಅವಧಿ ಇಂತಿಷ್ಟು ತಿಂಗಳು ಎಂದು ನಿಗದಿಯಾಗಿತ್ತು. ಆದರೆ ಹಾಲಿ ಜಿ.ಪಂ. ಆಡಳಿತ ರಚನೆ ಸಂದರ್ಭ ಈ ವ್ಯವಸ್ಥೆಯಲ್ಲಿ ಮತ್ತೊಂದು ಬದಲಾವಣೆಯಾಗಿದ್ದು,ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸಂಪೂರ್ಣ ಐದು ವರ್ಷಕ್ಕೆ ನಿಗದಿ ಮಾಡಲಾಗಿದೆ. ಕೊಡಗು ಜಿಲ್ಲಾ ಪಂಚಾಯಿತಿ 29 ಸದಸ್ಯ ಬಲವನ್ನು ಹೊಂದಿದ್ದು, ಈ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಜಿ.ಪಂ.ನ ಈ ಬಾರಿಯ ಆಡಳಿತ ರಚನೆ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಕಡಗದಾಳು ಕ್ಷೇತ್ರದ ಸದಸ್ಯ ಬಿ.ಎ. ಹರೀಶ್ ಹಾಗೂ ಗೋಪಾಲಪುರ ಕ್ಷೇತ್ರದ ಸದಸ್ಯೆ ಸರೋಜಮ್ಮ ಬೇಡಿಕೆ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಳ್ಳಿ ಕ್ಷೇತ್ರದ ಸದಸ್ಯೆ ಲೋಕೇಶ್ವರಿ ಗೋಪಾಲ್, ಮಕ್ಕಂದೂರಿನ ಯಾಲದಾಳು ಪದ್ಮಾವತಿ, ಭಾಗಮಂಡಲದ ಕವಿತಾ ಪ್ರಭಾಕರ್ ಹಾಗೂ ಬಿಟ್ಟಂಗಾಲದ ಅಪ್ಪಂಡೇರಂಡ ಭವ್ಯ ಆಕಾಂಕ್ಷಿಗಳಾಗಿದ್ದರು.
ಆಂತರಿಕ ಒಪ್ಪಂದ
ಆ ಸಂದರ್ಭದಲ್ಲಿ ಇದನ್ನು ಸರಿಪಡಿಸಲು ಪಕ್ಷದ ಪ್ರಮುಖರು ಒಂದಷ್ಟು ಕಸರತ್ತು ನಡೆಸಿದ್ದರೆನ್ನ ಲಾಗಿದೆ. ಇದರಂತೆ ಆಂತರಿಕವಾಗಿ ಒಳಒಪ್ಪಂದವನ್ನು ಮಾಡಲಾಗಿದ್ದು, ಆರಂಭದ 30 ತಿಂಗಳಿನ ಅಧಿಕಾರಕ್ಕೆ ಅಧ್ಯಕ್ಷ ಸ್ಥಾನಕ್ಕೆ
(ಮೊದಲ ಪುಟದಿಂದ) ಬಿ.ಎ. ಹರೀಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲೋಕೇಶ್ವರಿ ಗೋಪಾಲ್ ಅವರನ್ನು ನೇಮಕ ಮಾಡಲಾಗಿತ್ತು. ಈ ಸಂದರ್ಭದಲ್ಲಿ 30 ತಿಂಗಳ ಅವಧಿಯ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸರೋಜಮ್ಮ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಪ್ಪಂಡೇರಂಡ ಭವ್ಯ ಅವರುಗಳಿಗೆ ಅವಕಾಶ ಕಲ್ಪಿಸುವದಾಗಿ ಆಂತರಿಕ ಮಾತುಕತೆ ಪ್ರಮುಖರು ಹಾಗೂ ಆಕಾಂಕ್ಷಿಗಳ ನಡುವೆ ಏರ್ಪಟ್ಟಿತ್ತೆನ್ನಲಾಗಿದೆ.
ಆದರೆ ಈ 30 ತಿಂಗಳು ಮಾತ್ರವಲ್ಲ ಇದೀಗ ಸುಮಾರು 40 ತಿಂಗಳು ಪೂರ್ಣಗೊಳ್ಳುವ ಹಂತದಲ್ಲಿದ್ದರೂ ಒಡಂಬಡಿಕೆಯಂತೆ ಬದಲಾವಣೆಯಾಗದೆ ಹಾಲಿ ಇರುವವರೇ ಅಧಿಕಾರದಲ್ಲಿ ಮುಂದುವರಿದಿದ್ದಾರೆ.
ಬೇಡಿಕೆಗೆ ಸಿಗದ ಮನ್ನಣೆ
ನಿಗದಿತ ಅವಧಿ ಪೂರ್ಣಗೊಂಡ ಬಳಿಕ ಸ್ಥಾನಾಕಾಂಕ್ಷಿಗಳಾಗಿದ್ದ ಸರೋಜಮ್ಮ ಹಾಗೂ ಭವ್ಯ ಅವರುಗಳು ತಮ್ಮ ಬೇಡಿಕೆ ಮುಂದಿರಿಸಿ ಶಾಸಕರುಗಳು, ಪಕ್ಷದ ಅಧ್ಯಕ್ಷರಾದಿಯಾಗಿ ಇನ್ನಿತರ ಪ್ರಮುಖರಿಗೆ ಒತ್ತಡದ ಬೇಡಿಕೆ ಸಲ್ಲಿಸಿದ್ದಾರೆನ್ನಲಾಗಿದೆ. ಆದರೆ ಇವರುಗಳ ಈ ಬೇಡಿಕೆಗೆ ಈ ತನಕವೂ ಯಾವುದೇ ಸ್ಪಂದನ ದೊರೆತಿಲ್ಲ. ಆರಂಭಿಕ ಒಪ್ಪಂದದಂತೆ ಅವಕಾಶ ಒದಗಿಸಬೇಕೆಂಬ ಬೇಡಿಕೆ ಕೇವಲ ಆಕಾಂಕ್ಷಿಗಳಿಂದ ಮಾತ್ರವಲ್ಲ, ಅವರ ಬೆಂಬಲಿತರಿಂದಲೂ ಪಕ್ಷ ಪ್ರಮುಖರ ಮೇಲೆ ಬಂದಿದೆ. ಹಲವಷ್ಟು ಸಭೆಗಳಲ್ಲಿ ಈ ವಿಚಾರ ಕಾವೇರಿದ ಚರ್ಚೆಗೂ ಗ್ರಾಸವಾಗಿ ಗೊಂದಲಗಳೂ ನಿರ್ಮಾಣಗೊಡಿರುವುದಾಗಿ ಹೇಳಲಾಗಿದೆ.
ಶಾಸಕದ್ವಯರ ವಿಭಿನ್ನತೆ
ಹಾಲಿ ಅಧ್ಯಕ್ಷ ಬಿ.ಎ. ಹರೀಶ, ಶಾಸಕ ಕೆ.ಜಿ. ಬೋಪಯ್ಯ ಅವರ ಆಪ್ತರಾಗಿದ್ದು, ಮಡಿಕೇರಿ ಕ್ಷೇತ್ರದವರಾಗಿದ್ದಾರೆ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಶಾಸಕ ರಂಜನ್ ಅವರ ಆಪ್ತರು. ಇವರಲ್ಲಿ ಈ ಇಬ್ಬರಲ್ಲೂ ಒಲವು ಮುಂದುವರಿದಿದೆ ಎನ್ನಲಾಗುತ್ತಿದೆ. ಒಂದು ವೇಳೆ ಉಪಾಧ್ಯಕ್ಷ ಸ್ಥಾನದ ಬದಲಾವಣೆಯಾಗಬೇಕಾದರೆ ಅಧ್ಯಕ್ಷ ಸ್ಥಾನವೂ ಬದಲಾಗಲಿ ಎಂಬದು ರಂಜನ್ ನಿಲುವಾಗಿದ್ದರೆ, ಅಧ್ಯಕ್ಷ ಸ್ಥಾನ ಪೂರ್ಣ ಐದು ವರ್ಷದ್ದಾಗಿದ್ದು, ಬದಲಾವಣೆಯಾಗಬೇಕೆಂಬ ಕಾನೂನು ಇದೆಯೇ ಎಂದು ಬೋಪಯ್ಯ ಅವರು ಎಲ್ಲೋ ಹೇಳಿರುವಂತೆ... ಈ ನಡುವೆ ಸರೋಜಮ್ಮ ಹಾಗೂ ಭವ್ಯ ಅವರುಗಳ ಬೇಡಿಕೆ ಹಾಗೂ ಇವರ ಪರವಾಗಿ ‘ಬ್ಯಾಟಿಂಗ್’ ನಡೆಸುತ್ತಿರುವವರ ಯಾವ ಒತ್ತಡಕ್ಕೂ ಪಕ್ಷದ ಉನ್ನತವಲಯದಿಂದ ಸಹಮತ ಸಿಗುತ್ತಿಲ್ಲವೆನ್ನಲಾಗಿದೆ.
ಪಕ್ಷದ ತೀರ್ಮಾನದಂತೆ - ಸರೋಜಮ್ಮ
ಈ ಬಗ್ಗೆ ‘ಶಕ್ತಿ’ ಸರೋಜಮ್ಮ ಅವರಿಂದ ಪ್ರತಿಕ್ರಿಯೆ ಬಯಸಿದಾಗ ತಮಗೆ ಅವಕಾಶ ಸಿಗುತ್ತದೆ ಎಂದು ಆಶಾಭಾವನೆಯಿದ್ದುದು ನಿಜ, ಈ ಬಗ್ಗೆ ಮುಖಂಡರುಗಳಲ್ಲಿ ಮನವಿ ಮಾಡಲಾಗಿತ್ತು. ಆದರೆ ಪ್ರತಿಫಲ ಸಿಗಲಿಲ್ಲ. ಈ ಬಗ್ಗೆ ಬೇಸರವಿದೆ ಎಂದು ಹೇಳಿದರು. ಎಲ್ಲವೂ ಪಕ್ಷದ ತೀರ್ಮಾನದಂತೆ... ತಾವೇನು ಮಾಡುವುದು ಈಗ ಸುಮ್ಮನಾಗಿರುವುದಾಗಿ ನುಡಿದರು.
ಬೇಸರವಿದೆ ... ಭವ್ಯ
ಅಪ್ಪಂಡೇರಂಡ ಭವ್ಯ ಅವರು ಪ್ರತಿಕ್ರಿಯಿಸಿ ವೀರಾಜಪೇಟೆ ತಾಲೂಕಿಗೆ ಉಪಾಧ್ಯಕ್ಷ ಸ್ಥಾನ ಬೇಕೆಂಬ ಬೇಡಿಕೆ ಇತರ ಸದಸ್ಯರು ಹಾಗೂ ಕಾರ್ಯಕರ್ತರಿಂದ ಆರಂಭದಿಂದಲೂ ಪ್ರಬಲವಾಗಿತ್ತು. ಈ ಬಗ್ಗೆ ತಾವೂ ಸೇರಿದಂತೆ ಇನ್ನಿತರ ಹಲವರು ಗಮನ ಸೆಳೆದಿದ್ದರೂ ಪ್ರಯೋಜನವಾಗದ ಬಗ್ಗೆ ಮನಸ್ಸಿಗೆ ಬೇಸರವಿದೆ ಎಂದರು.
‘ಶಕ್ತಿ’ಗೆ ಹಲವು ಮೂಲಗಳಿಂದ ತಿಳಿದುಬಂದಂತೆ ಈ ವಿಚಾರ ಪಕ್ಷದೊಳಗೇ ಇರಿಸು- ಮುರಿಸಿಗೊಳಗಾಗಿದೆ. ಹಲವು ಪ್ರಮುಖರು ಸೂಕ್ತವಾಗಿ ಮಾತನಾಡಲು ಸಾಧ್ಯವಿಲ್ಲದಂತ ಪರಿಸ್ಥಿತಿಯಲ್ಲಿರುವಂತೆ... ಇದರೊಂದಿಗೆ ಇದೇ ವಿಚಾರದ ಹಿನ್ನೆಲೆಯಲ್ಲಿ ಕಳೆದ ಹಲವಷ್ಟು ಸಮಯಗಳಿಂದ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಭೆ ಕೂಡ ನಡೆಯುತ್ತಿಲ್ಲ. ಈ ಸಭೆ ನಡೆದಲ್ಲಿ ಈ ಅಂಶ ಹಾಗೂ ಇತರ ಕೆಲವು ವಿಚಾರಗಳು ತೀವ್ರ ಚರ್ಚೆಗೆ ಗ್ರಾಸವಾಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಉಳಿದ ಅವಧಿಯಲ್ಲಿ ಮುಂದೇನು ಬೆಳವಣಿಗೆ ಎಂಬದನ್ನು ಕಾದುನೋಡಬೇಕಿದೆ.