ಗೋಣಿಕೊಪ್ಪಲು, ಜ. 4: ರಾಜ್ಯ ಹೆದ್ದಾರಿಯಲ್ಲಿ ಚಿರತೆಯೊಂದು ಕಾಣಿಸಿಕೊಂಡ ಅಪರೂಪದ ಘಟನೆ ವರದಿಯಾಗಿದೆ. ನಾಗರಹೊಳೆ ಅಭಯಾರಣ್ಯಕ್ಕೆ ಸೇರಿರುವ ಗಡಿಭಾಗ ಆನೆ ಚೌಕೂರಿನಿಂದ ಮೂರು ಕಿ.ಮೀ.ದೂರದ ಹೊಸಲು ಮಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಎರಡು ವರ್ಷ ಪ್ರಾಯದ ಚಿರತೆ ಕಾಣಿಸಿಕೊಂಡಿದ್ದು ಸಮೀಪದ ಅರಣ್ಯ ಪ್ರದೇಶವಾದ ದೇವಸ್ಥಾನದ ಹಿಂಭಾಗದಿಂದ ಆಗಮಿಸಿ ಕೆಲ ಕಾಲ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಯಾವುದೇ ಭಯವಿಲ್ಲದೆ ದೇವಸ್ಥಾನ ಮುಂಭಾಗದ ರಸ್ತೆಯಲ್ಲಿ ಅಡ್ಡಾಡಿದ ಈ ಚಿರತೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಕಾರೊಂದರ ಬಳಿ ತೆರಳಿ ಕಾರಿನ ಕೆಳ ಭಾಗದಿಂದ ನುಸುಳಿಕೊಂಡು ಮತ್ತೆ ರಸ್ತೆಯನ್ನು ದಾಟಿ ಸಮೀಪದ ಅರಣ್ಯ ಪ್ರದೇಶವನ್ನು ಸೇರಿಕೊಂಡಿದೆ. ಮುಂಜಾನೆಯ ವೇಳೆಯಲ್ಲಿ ಜೀಪ್, ಟ್ರಕ್‍ನಲ್ಲಿ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದ ಕಾರ್ಮಿಕರು ಸೇರಿದಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಈ ಸನ್ನಿವೇಶ ಕಂಡು ತಮ್ಮ ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸುವಲ್ಲಿ ಬ್ಯುಸಿಯಾಗಿದ್ದರು. ಸಮೀಪದಿಂದ ಮನುಷ್ಯರನ್ನು ಚಿರತೆ ಗಮನಿಸಿತಾದರೂ ಯಾರ ಮೇಲೂ ಎರಗುವ ಪ್ರಯತ್ನ ಮಾಡಲಿಲ್ಲ.!. ಈ ಸುದ್ದಿಯ ವೀಡಿಯೋ, ಫೋಟೋ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.- ಹೆಚ್.ಕೆ.ಜಗದೀಶ್.